ಕಾರವಾರ: ಶಿರಸಿಯಲ್ಲಿ ಗಾಂಜಾ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಸಿ ಪೊಲೀಸರು ಕಳೆದ ಎರಡು ದಿನದ ಹಿಂದೆ ನಗರದ ವಿವಿಧ ಭಾಗದಲ್ಲಿ ದಾಳಿ ನಡೆಸಿ 15 ಮಂದಿಯನ್ನು ವಶಕ್ಕೆ ಪಡೆದು ವೈದ್ಯಕೀಯ ವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗಿತ್ತು. 12 ಜನರು ಗಾಂಜಾ ಸೇವನೆ ಮಾಡಿರುವುದು ಇಂದು ವೈದ್ಯಕೀಯ ಪರೀಕ್ಷೆಯಿಂದ ದೃಢವಾಗಿದೆ.
ಗಾಂಜಾ ಸೇವನೆ ಮತ್ತು ಪೆಡ್ಲರ್ ಪ್ರಕರಣ ಸಂಬಂಧ ಶಿರಸಿ ಮಾರುಕಟ್ಟೆ ಪೊಲೀಸರು ದಾಳಿ ಮಾಡಿ 15 ಜನರನ್ನು ವೈದ್ಯಕೀಯ ತಪಾಸಣೆಗೆ ಉಡುಪಿಯ ಮಣಿಪಾಲ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದರು. ಇದೀಗ 12 ಜನರ ಸೇವನೆ ಬಗ್ಗೆ ದೃಢಪಟ್ಟಿರುವುದು ಶಿರಸಿಯಲ್ಲಿ ಗಾಂಜಾ ಸೇವನೆ ಪ್ರಕರಣ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಮುರುಡೇಶ್ವರಕ್ಕೆ ಐಸಿಸ್ ಕಣ್ಣು- ದೇವಾಲಯಕ್ಕೆ ವಿಶೇಷ ಪೊಲೀಸ್ ಭದ್ರತೆ ವ್ಯವಸ್ಥೆ
ಕಳೆದ ಮೂರು ತಿಂಗಳಿಂದ ಶಿರಸಿ ಶಾಲಾ, ಕಾಲೇಜುಗಳ ಕ್ರೀಡಾಂಗಣ, ಬಸ್ ನಿಲ್ದಾಣಗಳಲ್ಲಿ ಗಾಂಜಾ ಮಾರಾಟ ಮಾಡುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹಲವರನ್ನು ಬಂಧಿಸಿದ್ದರು. ಶಾಲಾ ,ಕಾಲೇಜು ವಿದ್ಯಾರ್ಥಿಗಳೇ ಹೆಚ್ಚು ಗಾಂಜಾ ಮತ್ತಿನ ದಾಸರಾಗಿದ್ದರು. ಈ ಬಗ್ಗೆ ಶಿರಸಿ ಪೊಲೀಸರು ಗಂಭೀರವಾಗಿ ತೆಗೆದುಕೊಂಡು ಎರಡು ದಿನದ ಹಿಂದೆ ಬೆಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದರು. ಇದರಿಂದಾಗಿ ಇದೀಗ ಶಿರಸಿ ಪಟ್ಟಣದಲ್ಲಿ ಗಾಂಜಾ ಮಾರಾಟ, ಸೇದುವ ಜನರಲ್ಲಿ ಭಯ ಮೂಡಿದೆ. ಶಿರಸಿಯಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಗೆ ಜನರು ಶ್ಲಾಘಿಸಿದ್ದಾರೆ.