ಬೆಂಗಳೂರು: ಇಡೀ ವಿಶ್ವದಲ್ಲೇ ಭಾರೀ ಆತಂಕ ಮೂಡಿಸುತ್ತಿರುವ ಕೊರೊನಾ ವೈರಸ್ ಇದೀಗ ಕರ್ನಾಟಕದ ಜನರನ್ನೂ ನಿದ್ದೆಗೆಡುವಂತೆ ಮಾಡಿದೆ. ಜನರಿಗೆ ಕೊರೊನಾ ಫೋಬಿಯಾಕ್ಕೆ ಒಳಗಾಗಿ ಆರೋಗ್ಯ ಇಲಾಖೆಯ ಸಹಾಯವಾಣಿಗೆ ಕರೆಗಳ ಮೇಲೆ ಕರೆಗಳನ್ನು ಮಾಡುತ್ತಿದ್ದಾರೆ.
ಹೌದು. ಸಾರ್.. ನಂಗೆ ಎರಡು ದಿನದಿಂದ ಶೀತ, ಜ್ವರ, ಕೆಮ್ಮು. ನನಗೆ ಕೊರೊನಾ ಇದೆಯಾ?. ಇದೆಲ್ಲ ಕೊರೊನಾ ವೈರಸ್ ಲಕ್ಷಣಗಳಾ ಎಂದು ಆರೋಗ್ಯ ಇಲಾಖೆಯ ಸಹಾಯವಾಣಿಗೆ ಕರೆಗಳ ಮೇಲೆ ಕರೆಗಳು ಬರ್ತಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಸಹಾಯವಾಣಿಗೆ ಇದೂವರೆಗೆ ಆರೂವರೆ ಸಾವಿರ ಕರೆ ಬಂದಿದೆ. ಕೇವಲ 3-4 ತಿಂಗಳಲ್ಲಿ ಇಷ್ಟೊಂದು ಕರೆ ಬಂದಿದೆ. ಹೀಗಾಗಿ 104 ಸಹಾಯವಾಣಿಯ ಸಿಬ್ಬಂದಿಗೆ ಈಗ ಕೊರೊನಾ ಬಗ್ಗೆ ಮಾಹಿತಿ ಕೊಡೋದೆ ಕೆಲಸವಾಗಿದೆ.
ಕರ್ನಾಟಕದಲ್ಲಿ ಕೊರೊನಾ ಕೇಸ್ ಪತ್ತೆಯಾಗಿಲ್ಲ. ಆದರೂ ಜನರಿಗೆ ಇದರ ಭೀತಿ ಹೆಚ್ಚಾಗಿದೆ. ಹೀಗಾಗಿ ಕೊರೊನಾ ಮಾಹಿತಿಗಾಗಿ ಜನ ಸಹಾಯವಾಣಿ ಮೊರೆ ಹೋಗುತ್ತಿದ್ದಾರೆ. ಅಲ್ಲದೆ ಬೇರೆ ದೇಶಗಳಿಗೆ ಹೋಗುವವರು ಕೂಡ ಈ ದೇಶಕ್ಕೆ ಹೋಗಬಹುದಾ? ಯಾವ ರೀತಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಸಹಾಯವಾಣಿ ಮೊರೆ ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ.