ಮಂಡ್ಯ: ಜಿಲ್ಲೆಯ ಕೆಆರ್.ಪೇಟೆ ತಾಲೂಕಿನ ಪುರ ಗ್ರಾಮದ ಬಳಿ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿದ್ದು, ಇದರಿಂದ ಸ್ಥಳೀಯ ಜನರು ಆತಂಕಗೊಂಡಿದ್ದಾರೆ.
ಪುರ ಗ್ರಾಮದ ಬಳಿಯ ಜಮೀನಿನಲ್ಲಿ ಬೆಳಗ್ಗೆ ಒಂಟಿ ಸಲಗ ಕಾಣಿಸಿಕೊಂಡಿದೆ. ಸಲಗವನ್ನು ನೋಡಿದ ಜನರು ಆನೆ ಇಲ್ಲಿಗೆ ಹೇಗೆ ಬಂತು ಎಂದು ಗಾಬರಿಗೊಂಡು ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾಗಿರುವ ಆರ್‍ಎಫ್‍ಓ ಗಂಗಾಧರ್ ನೇತೃತ್ವದ ಅರಣ್ಯ ಇಲಾಖೆಯ ತಂಡ, ಆನೆಯನ್ನು ಹಿಡಿಯಲು ಕಾರ್ಯಾಚರಣೆ ಆರಂಭಿಸಿದೆ. ತೇಗನಹಳ್ಳಿ ಗೇಟಿನ ಕಡೆಯಿಂದ ಕರೋಟಿ ಗ್ರಾಮದ ಕಡೆಗೆ ಆನೆ ತೆರಳಿದ ಬಗ್ಗೆ ಪ್ರತ್ಯಕ್ಷದರ್ಶಿಗಳ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಯ ಜಾಡನ್ನು ಹಿಡಿದು ಹುಡುಕಾಟ ಆರಂಭಿಸಿದ್ದಾರೆ. ಇದನ್ನೂ ಓದಿ: ಯುಪಿ ಸಿಎಂ ಆಗಬೇಕಾ, ಬೇಡ್ವಾ ಅಂತ ಪ್ರಿಯಾಂಕಾ ಗಾಂಧಿ ನಿರ್ಧರಿಸ್ತಾರೆ: ಸಲ್ಮಾನ್ ಖುರ್ಷಿದ್
ಹುಲಿಯೂರು ದುರ್ಗ ಅರಣ್ಯದ ಆನೆಗಳ ಹಿಂಡಿನಿಂದ ತಪ್ಪಿಸಿಕೊಂಡಿದ್ದ ಆನೆಯೊಂದು ಎರಡು ದಿನಗಳ ಹಿಂದೆ ನಾಗಮಂಗಲ ತಾಲೂಕಿನ ದೇವಲಾಪುರದ ಮಲ್ಲಸಂದ್ರ ಕಾವಲ್‍ನಲ್ಲಿ ಕಾಣಿಸಿಕೊಂಡಿತ್ತು. ಅದೇ ಆನೆ ನಮ್ಮ ಜಲಸೂರು-ಬೆಂಗಳೂರು ಹೈವೇ ರಸ್ತೆಯ ಮೂಲಕ ಕೆಆರ್‍ಪೇಟೆ ತಾಲೂಕು ವ್ಯಾಪ್ತಿಗೆ ಬಂದಿದೆ ಎನ್ನಲಾಗಿದೆ. ಇದೀಗ ಚಿಕ್ಕೋನಹಳ್ಳಿ, ಪುರ ಗ್ರಾಮಗಳ ಬಳಿ ಸಾರ್ವಜನಿಕರಿಗೆ ಕಾಣಿಸಿಕೊಂಡಿದೆ. ಇದನ್ನೂ ಓದಿ: ನಿವೃತ್ತ ಹವಾಲ್ದಾರ್ ಪುತ್ರನ ಆತ್ಮಹತ್ಯೆ ಪ್ರಕರಣ- ಸೈಕೋ ರೀತಿ ವರ್ತಿಸುತ್ತಿದ್ದ ವಿದ್ಯಾರ್ಥಿ
ಕರೋಟಿ ಬಳಿಯಿರುವ ಅರಣ್ಯದೊಳಗೆ ಒಂಟಿ ಸಲಗ ಬೀಡು ಬಿಟ್ಟಿದ್ದು, ಸುತ್ತಮುತ್ತಲ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ರೈತರಲ್ಲಿ ಜಾಗೃತಿ ಮೂಡಿಸಿ ಸುರಕ್ಷತೆಯ ಹಿತದೃಷ್ಟಿಯಿಂದ ಜಮೀನಿನಿಂದ ಮನೆಗೆ ಕಳುಹಿಸಲಾಗಿದೆ. ಆನೆಯಿಂದ ಯಾರಿಗೂ ತೊಂದರೆಯಾಗದಂತೆ ಕರೋಟಿ ಬಳಿ ಇರುವ ಅರಣ್ಯ ಪ್ರದೇಶದ ಸುತ್ತಲೂ ಇಲಾಖೆಯ ಸಿಬ್ಬಂದಿ ವರ್ಗದವರನ್ನು ಕಾವಲು ಹಾಕಲಾಗಿದೆ.
ಸಾರ್ವಜನಿಕರು ಆನೆ ಕಂಡಲ್ಲಿ ಕಲ್ಲಿನಿಂದ ಒಡೆಯುವ ಅಥವಾ ಬೆದರಿಸಿ ಕೆರಳಿಸುವ ಕೆಲಸ ಮಾಡಬಾರದು. ಕೆರಳಿಸಿದರೆ ಜನವಸತಿ ಮೇಲೆ ದಾಳಿ ಮಾಡಿ ತೊಂದರೆ ನೀಡುವ ಸಾಧ್ಯತೆ ಇರುತ್ತದೆ ಎಂದು ಆರ್‍ಎಫ್‍ಓ ಗಂಗಾಧರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.