– ಅಯ್ಯಪ್ಪ ಅಲ್ಲ, ಭಕ್ತರ ಮನಸ್ಸು ವಿಚಲಿತವಾಗುತ್ತೆ
ಕೊಚ್ಚಿ: ಶಬರಿಮಲೆ ಅಯ್ಯಪ್ಪನ ಸನ್ನಿಧಾನಕ್ಕೆ ಮಹಿಳೆಯರು ಹೋಗ ಬೇಕಾ? ಬೇಡ್ವಾ? ಎಂಬ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಹೀಗಿರುವಾಗ, ಮಣಿಕಂಠನ ದರ್ಶನಕ್ಕೆ ಮಹಿಳಾ ಭಕ್ತರು ಹೋಗಬಾರದು ಎಂದು ಖ್ಯಾತ ಗಾಯಕ ಕೆಜೆ ಯೇಸುದಾಸ್ ಹೇಳಿದ್ದಾರೆ.
ಸ್ವತಃ ಅಯ್ಯಪ್ಪನ ಭಕ್ತರಾಗಿರುವ ಯೇಸುದಾಸ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಮಹಿಳೆಯರು ಅಯ್ಯಪ್ಪನ ದರ್ಶನಕ್ಕೆ ಹೋಗಬಾರದು ಎಂದಿದ್ದಾರೆ. ಅಲ್ಲದೆ ಇದಕ್ಕೆ ಕಾರಣವನ್ನೂ ನೀಡಿದ್ದಾರೆ. ಮಹಿಳೆಯರು ದೇವಾಲಯಕ್ಕೆ ಆಗಮಿಸುವುದರಿಂದ ಭಕ್ತರ ಮನಸ್ಸು ವಿಚಲಿತವಾಗಲಿದೆ. ಅಯ್ಯಪ್ಪನ ಸನ್ನಿಧಾನಕ್ಕೆ ಸುಂದರ ಯುವತಿಯೊಬ್ಬಳು ಆಧುನಿಕ ಯುಗದ ಉಡುಗೆ ಧರಿಸಿ ಹೋದರೆ ಅಯ್ಯಪ್ಪ ಕಣ್ತೆರೆದು ನೋಡಲ್ಲ. ಆದರೆ, ಅಯ್ಯಪ್ಪನ ಭಕ್ತರು ಆಕೆಯನ್ನು ನೋಡುತ್ತಾರೆ. ಇದು ಸರಿಯಲ್ಲ ಎಂದಿದ್ದಾರೆ.
ದೇಗುಲಕ್ಕೆ ಆಗಮಿಸುವ ಭಕ್ತರ ಉದ್ದೇಶವೇ ಬದಲಾಗಲಿದೆ. ಹೀಗಾಗಿ, ಮಹಿಳೆಯರು ಅಯ್ಯಪ್ಪನ ದೇಗುಲಕ್ಕೆ ಹೋಗಬಾರದು. ಅಯ್ಯಪ್ಪ ಭಕ್ತರನ್ನು ಪ್ರಚೋದಿಸಬೇಡಿ ಎಂಬುದಷ್ಟೇ ನನ್ನ ಮನವಿ ಎಂದು ಹೇಳಿದರು. ಅಂದಹಾಗೇ ಶಬರಿಮಲೆಯಲ್ಲಿ ನಿತ್ಯ ದೇಗುಲದ ಬಾಗಿಲು ಮುಚ್ಚುವ ಸಂದರ್ಭದಲ್ಲಿ ಯೇಸುದಾಸ್ ಹಾಡಿರುವ ‘ಹರಿವರಾಸನಂ’ ಹಾಡು ಧ್ವನಿವರ್ಧಕದಲ್ಲಿ ಕೇಳಿಸುತ್ತದೆ.