ಮುಂಬೈ: ಗಾಯಕ ಸೋನು ನಿಗಮ್ ಸರಣಿ ಟ್ವೀಟ್ ಮಾಡಿ ಟ್ವಿಟ್ಟರ್‍ಗೆ ಗುಡ್ ಬೈ ಹೇಳಿದ್ದಾರೆ.
ಟ್ವಿಟ್ಟರ್ ಖಾತೆಯನ್ನ ಡಿಲೀಟ್ ಮಾಡುವ ಮೊದಲು ಟ್ವೀಟ್ ಮಾಡಿದ್ದ ಸೋನು ನಿಗಮ್, ಮಾಧ್ಯಮದವರೇ ಹಾಗೂ ಟ್ವಿಟ್ಟರ್ ಬಳಕೆದಾರರೇ ನನ್ನ ಸಂದೇಶಗಳ ಸ್ಕ್ರೀನ್‍ಶಾಟ್ ತೆಗೆದಿಟ್ಟುಕೊಳ್ಳಿ. ಯಾಕಂದ್ರೆ ಇನ್ನು ಹೆಚ್ಚು ಸಮಯ ಅವು ಇಲ್ಲಿರುವುದಿಲ್ಲ ಎಂದು ಹೇಳಿದ್ದರು.
ನಾನು ಟ್ವಿಟ್ಟರ್‍ಗೆ ಇಂದು ಗುಡ್‍ಬೈ ಹೇಳಲಿದ್ದೇನೆ. 70 ಲಕ್ಷ ಫಾಲೋವರ್‍ಗಳಲ್ಲಿ ಬಹುತೇಕರಿಗೆ ಇದರಿಂದ ನಿರಾಸೆಯಾಗಲಿದೆ. ಆದ್ರೆ ಕೆಲವು ಸ್ಯಾಡಿಸ್ಟ್ ಗಳಿಗೆ ಖುಷಿಯಾಗಲಿದೆ. ನಿದ್ದೆ ಮಾಡುತ್ತಿರುವವರನ್ನು ಎಬ್ಬಿಸಬಹುದು. ಆದ್ರೆ ನಿದ್ರಿಸುವಂತೆ ನಟಿಸೋರನ್ನ ಎಬ್ಬಿಸಲು ಸಾಧ್ಯವಿಲ್ಲ ಅನ್ನೋದು ನನಗೆ ಅರ್ಥವಾಗಿದೆ. ಮಾಧ್ಯಮಗಳು ಕೂಡ ಎರಡು ಭಾಗಗಳಾಗಿವೆ. ಕೆಲವು ರಾಷ್ಟ್ರೀಯವಾದಿಗಳು ಹಾಗೂ ಮೋಸಗಾರರು ಇತಿಹಾಸದಲ್ಲಿನ ದ್ರೋಹಿಗಳಿಂದ ಪಾಠ ಕಲಿಯಲು ಸಿದ್ಧರಿಲ್ಲ ಎಂದು ಟ್ವೀಟ್ ಮಾಡಿದ್ದರು.
ನನ್ನ ಸಮತೋಲನವಾದ ಅಭಿಪ್ರಾಯಕ್ಕೆ ಅನೇಕ ಜನ ಪ್ರೀತಿ ತೋರೋದನ್ನ ನೋಡಿದ್ದೇನೆ. ಹಾಗೆ ಇನ್ನೂ ಕೆಲವರು ಕಾರಣವಿಲ್ಲದೆ, ತರ್ಕಬದ್ಧವಲ್ಲದ ಹೇಳಿಕೆಗಳನ್ನ ನೀಡ್ತಾರೆ. ಕೆಲವರು ನಿಮ್ಮನ್ನು ಹಾರೈಸುತ್ತಾರೆ. ಆದ್ರೆ ಇನ್ನೂ ಕೆಲವರು ಸಾಯಲಿ ಅಂತ ಇಚ್ಛಿಸುತ್ತಾರೆ. ಕೆಲ ಯುವ ಹುಡುಗ, ಹುಡುಗಿಯರು, ಮಕ್ಕಳೂ ಕೂಡ ಉಗ್ರರಂತೆ ವರ್ತಿಸುತ್ತಾರೆ ಎಂದು ಸೋನು ನಿಗಮ್ ಹೇಳಿದ್ರು.
ಸೇನೆಯ ಜೀಪ್‍ಗೆ ಕಲ್ಲು ತೂರಾಟ ಮಾಡುವವರ ಬದಲು ಲೇಖಕಿ ಅರುಂಧತಿ ರಾಯ್ ಅವರನ್ನ ಕಟ್ಟಬೇಕು ಎಂಬ ಬಿಜೆಪಿ ಸಂಸದ ಹಾಗೂ ನಟ ಪರೇಶ್ ರಾವಲ್ ಅವರ ಹೇಳಿಕೆಯನ್ನ ಸೋನು ನಿಗಮ್ ಸಮರ್ಥಿಸಿಕೊಂಡಿದ್ದಾರೆ. ಸೇನೆಯ ಜೀಪ್ ಮುಂದೆ ಯುವತಿಯೊಬ್ಬಳು ಗೌತಮ್ ಗಂಭೀರ್ ಚಿತ್ರವನ್ನ ಪ್ರದರ್ಶಿಸುವಾಗ ಅದನ್ನೇ ಬೇರೊಬ್ಬರಿಗೆ ಮಾಡಿದ್ದಕ್ಕೆ ಪರೇಶ್ ರಾವಲ್‍ರನ್ನ ಟೀಕಿಸುತ್ತಿದ್ದಾರೆ. ಅರುಂಧತಿ ರಾಯ್ ಅವರಿಗೆ ಕಾಶ್ಮೀರದ ಬಗ್ಗೆ ಅಭಿಪ್ರಾಯ ಹೊಂದಿರಲು ಹೇಗೆ ಹಕ್ಕಿದೆಯೋ ಹಾಗೇ ಇತರೆ ಕೋಟ್ಯಾಂತರ ಭಾರತೀಯರಿಗೆ ಇದರಿಂದ ಬೇಸರವಾಗಲು ಕೂಡ ಹಕ್ಕಿದೆಯಲ್ಲವೇ ಎಂದೆಲ್ಲಾ ಸೋನು ನಿಗಮ್ ಟ್ವೀಟ್ ಮಾಡಿದ್ರು. ಈ ವೇದಿಕೆ ಏಕಪಕ್ಷೀಯವಾಗಿದೆ. ಆದ್ದರಿಂದ ಟ್ವಿಟ್ಟರ್‍ಗೆ ಗುಡ್‍ಬೈ ಹೇಳುತ್ತಿದ್ದೇನೆ ಎಂದು ಅವರು ತಿಳಿಸಿದ್ರು.
ಕಾಶ್ಮೀರದಲ್ಲಿ ಸೇನೆಯ ಜೀಪ್‍ಗೆ ಕಲ್ಲು ತೂರಾಟ ಮಾಡಿದವರನ್ನ ಕಟ್ಟೋ ಬದಲು ಅರುಂಧತಿ ರಾಯ್ ಅವರನ್ನ ಕಟ್ಟಬೇಕು ಎಂದು ಪರೇಶ್ ರಾವಲ್ ಟ್ವೀಟ್ ಮಾಡಿದ್ದರು.
ಸೋನು ನಿಗಮ್ ಈ ಹಿಂದೆ ಧ್ವನಿವರ್ಧಕದ ಮೂಲಕ ಬೆಳಗ್ಗೆ ಅಜಾನ್ ಮೊಳಗಿಸುವುದನ್ನು ವಿರೋಧಿಸಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.


























