ಸಿಂಗಾಪುರ: ತೀವ್ರ ಪ್ರಕ್ಷುಬ್ಧತೆಯಿಂದಾಗಿ ಕುಸಿದ ಸಿಂಗಾಪುರ್ ಏರ್‌ಲೈನ್ಸ್‌ನಲ್ಲಿದ್ದ (Singapore Airlines) 22 ಮಂದಿಯ ಬೆನ್ನುಮೂಳೆಗೆ (Spinal cord injury) ಗಾಯಗಳಾಗಿವೆ. ಇನ್ನು 6 ಮಂದಿಯ ತಲೆಗೆ ಗಾಯಗಳಾಗಿವೆ ಎಂಬುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಅವಘಡದಲ್ಲಿ ಸುಮಾರು 60 ಮಂದಿ ಪ್ರಯಾಣಿಕರು ಗಾಯಗೊಂಡಿದ್ದರು. ಇದರಲ್ಲಿ 40 ರೋಗಿಗಳು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಗಾಯಗೊಂಡವರಲ್ಲಿ 20 ಜನರು ತೀವ್ರ ನಿಗಾ ಘಟಕದಲ್ಲಿದ್ದಾರೆ. ಇದರಲ್ಲಿ ಯಾರೊಬ್ಬರೂ ಜೀವಕ್ಕೆ ಅಪಾಯವಿಲ್ಲ ಎಂದು ಸಮಿತಿವೇಜ್ ಶ್ರೀನಾಕಾರಿನ್ ಆಸ್ಪತ್ರೆಯ ನಿರ್ದೇಶಕ ಡಾ.ಅದಿನುನ್ ಕಿಟ್ಟಿರತನಪೈಬುಲ್ ತಿಳಿಸಿದ್ದಾರೆ.
229 ಮಂದಿ ವಿಮಾನದಲ್ಲಿದ್ದರು: ಲಂಡನ್‌ನಿಂದ ಸಿಂಗಾಪುರಕ್ಕೆ (London To Singapore) ತೆರಳುತ್ತಿದ್ದ ವಿಮಾನದಲ್ಲಿ ಮಂಗಳವಾರ ದಿಢೀರ್ ಪ್ರಕ್ಷುಬ್ಧತೆ ಉಂಟಾಗಿತ್ತು. ಪರಿಣಾಮ ಮೂರು ನಿಮಿಷಗಳಲ್ಲಿ 6,000 ಅಡಿಗೆ ವಿಮಾನ ಕುಸಿದಿತ್ತು. ಕೂಡಲೇ ವಿಮಾನವನ್ನು ಬ್ಯಾಂಕಾಕ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಈ ಸಮಯದಲ್ಲಿ 73 ವರ್ಷದ ಬ್ರಿಟಿಷ್ ವ್ಯಕ್ತಿ ಸಾವನ್ನಪ್ಪಿದ್ದರು. ಈ ವ್ಯಕ್ತಿಗೆ ಹೃದಯಾಘಾತ ಉಂಟಾಗಿ ಮೃತಪಟ್ಟಿರಬಹುದು ಎಂದು ಅಧಿಕಾರಿಗಳು ಹೇಳಿದ್ದು, ಇದು ದೃಢಪಟ್ಟಿಲ್ಲ. 211 ಪ್ರಯಾಣಿಕರು ಮತ್ತು 18 ಸಿಬ್ಬಂದಿ ಸೇರಿದಂತೆ ಒಟ್ಟು 229 ಮಂದಿ ವಿಮಾನದಲ್ಲಿದ್ದರು. ಇದನ್ನೂ ಓದಿ: ಬುರ್ಖಾಧಾರಿ ಮಹಿಳಾ ಮತದಾರರ ವಿಶೇಷ ತಪಾಸಣೆಗೆ ಒತ್ತಾಯ – ಬಿಜೆಪಿ ಮನವಿಗೆ ಓವೈಸಿ ಕೆಂಡಾಮಂಡಲ
ಈ ದೇಶಗಳ ಜನರಿದ್ದರು: ವಿಮಾನದಲ್ಲಿ ಆಸ್ಟ್ರೇಲಿಯಾದಿಂದ 56, ಕೆನಡಾದಿಂದ ಇಬ್ಬರು, ಜರ್ಮನಿಯಿಂದ ಒಬ್ಬರು, ಭಾರತದಿಂದ ಮೂವರು, ಇಂಡೋನೇಷ್ಯಾದ ಇಬ್ಬರು, ಐಲ್ಯಾಂಡ್‌ನಿಂದ ಒಬ್ಬರು, ಐರ್ಲೆಂಡ್‌ನಿಂದ ನಾಲ್ವರು, ಇಸ್ರೇಲ್‌ನಿಂದ ಒಬ್ಬರು, ಮಲೇಷ್ಯಾದಿಂದ 16, ಮ್ಯಾನ್ಮಾರ್‌ನಿಂದ ಇಬ್ಬರು, ನ್ಯೂಜಿಲೆಂಡ್‌ನಿಂದ 23 ಮಂದಿ ಇದ್ದರು. ಜೊತೆಗೆ ಫಿಲಿಪೈನ್ಸ್‌ನಿಂದ ಐವರು, ಸಿಂಗಾಪುರದ 41, ದಕ್ಷಿಣ ಕೊರಿಯಾದಿಂದ ಒಬ್ಬರು, ಸ್ಪೇನ್‌ನಿಂದ ಇಬ್ಬರು, ಬ್ರಿಟನ್‌ನಿಂದ 47 ಮತ್ತು ಅಮೆರಿಕದಿಂದ ನಾಲ್ವರು ನಾಗರಿಕರು ಇದ್ದರು. ಹೀಗೆ ಒಟ್ಟು 229 ಮಂದಿ (211 ಪ್ರಯಾಣಿಕರು ಮತ್ತು 18 ಸಿಬ್ಬಂದಿ) ಸಿಂಗಾಪುರ ಏರ್‌ಲೈನ್ಸ್ ವಿಮಾನದಲ್ಲಿದ್ದರು.