ಕೆ.ಎಂ ನಂಜುಂಡೇಶ್ವರ ನಿರ್ಮಾಣ ಮತ್ತು ಕಿನ್ನಾಳ್ ರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ `ಸಿಂಹರೂಪಿಣಿ’ ಚಿತ್ರ ಈ ವಾರ ಅಂದರೆ, ಅಕ್ಟೋಬರ್ ೧೭ರಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಭಕ್ತಿಪ್ರಧಾನ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಕಮರ್ಶಿಯಲ್ ಧಾಟಿಯಲ್ಲಿ, ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಆವರಿಸಿಕೊಳ್ಳುವಂತೆ ನಿರ್ದೇಶಕರು ರೂಪಿಸಿದ್ದಾರಂತೆ. ಬಹುದೊಡ್ಡ ತಾರಾಗಣ ಹೊಂದಿರುವ ಸಿಂಹರೂಪಿಣಿಯ ಸಮ್ಮುಖದಲ್ಲಿ ಘಟಾನುಘಟಿ ನಟ ನಟಿಯರು ಮಹತ್ವದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಟ ವಿಜಯ್ ಚೆಂಡೂರ್ ಪಾಲಿಗೂ ಒಂದೊಳ್ಳೆ ಪಾತ್ರವೇ ಒಲಿದು ಬಂದಿದೆ. ಚಿತ್ರೀಕರಣ ಆರಂಭಕ್ಕೂ ಮುನ್ನವೇ ತಮಗಾಗಿದ್ದ ರೋಮಾಂಚಕ ಅನುಭೂತಿಯೊಂದನ್ನು ವಿಜಯ್ ಚೆಂಡೂರ್ ತೆರೆದಿಟ್ಟಿದ್ದಾರೆ.
ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ವಿಜಯ್ ಚೆಂಡೂರ್, ಆ ನಂತರದಲ್ಲಿ ನಟನಾಗಿ ನೆಲೆ ಕಂಡುಕೊಂಡವರು. ಅದರಲ್ಲೂ ವಿಶೇಷವಾಗಿ ಹಾರರ್ ಸಿನಿಮಾಗಳ ಮೂಲಕವೇ ಅವರಿಗೆ ಹಂತ ಹಂತವಾಗಿ ವಿಜಯವೆಂಬುದು ಕೈ ಹಿಡಿಯುತ್ತಾ ಬಂದಿದೆ. ಹೀಗೆ ಹಾರರ್ ಮೂವಿಗಳ ಮೂಲಕ ಸದ್ದು ಮಾಡುತ್ತಾ ಬಂದಿರುವ ವಿಜಯ್ ಅವರಿಗೆ ಪರಿಚಿತರು `ನಿಮಗೆ ದೆವ್ವ ಕೈಹಿಡಿದಿದೆ’ ಅಂತ ಕಿಚಾಯಿಸುತ್ತಾರಂತೆ. ಆದರೆ, ಇದೀಗ ಸಿಂಹರೂಪಿಣಿಯ ಭೂಮಿಕೆಯಲ್ಲಿ ಮಾರಮ್ಮ ದೇವಿ ಕೈಹಿಡಿದು ಪೊರೆಯುತ್ತಾಳೆಂಬ ಗಾಢ ನಂಬಿಕೆ ವಿಜಯ್ ಚೆಂಡೂರ್ ಅವರದ್ದು.
ಅಂಥಾ ನಂಬಿಕೆಗೆ ಕಾರಣವಿದೆ. ವಿಜಯ್ ಚೆಂಡೂರ್ ಈ ಸಿನಿಮಾದಲ್ಲಿ ದೇವಿಯ ಆರಾಧಕನಾಗಿ ಕಾಣಿಸಿಕೊಂಡಿದ್ದಾರೆ. ಅದು ಸಿನಿಮಾದ ಆತ್ಮದಂಥಾ ಪಾತ್ರವೂ ಹೌದು. ಗ್ರಾಮವೊಂದರ ಜನರೆಲ್ಲ ತಮ್ಮ ಕಷ್ಟ ಕಾರ್ಪಣ್ಯಗಳನ್ನು, ಬೇಡಿಕೆಗಳನ್ನು ಮಾರಮ್ಮದೇವಿಯ ಮಡಿಲಿಗೆ ಹಾಕಿ ನಿರಾಳವಾಗುತ್ತಾರೆ. ಅಂಥಾದ್ದನ್ನೆಲ್ಲ ದೇವಿಗೆ ದಾಟಿಸುವ ವಾಹಕವಾಗಿ ಆರಾಧಕರಿರುತ್ತಾರೆ. ಅಂಥಾ ಪಾತ್ರವನ್ನಿಲ್ಲಿ ವಿಜಯ್ ಚೆಂಡೂರ್ ನಿಭಾಯಿಸಿದ್ದಾರೆ. ಇದರ ಜೊತೆ ಜೊತೆಗೇ ನಾಯಕನೊಂದಿಗೆ ಸದಾ ಸಾಥ್ ಕೊಡುತ್ತಾ, ಆತನ ಬೆನ್ನೆಲುಬಾಗಿ ನಿಲ್ಲುವ ಮತ್ತೊಂದು ಬಗೆಯ ಚಹರೆಯೂ ಆ ಪಾತ್ರಕ್ಕಿದೆಯಂತೆ.
ಇದು ಹೇಳಿಕೇಳಿ ಭಕ್ತಿಪ್ರಧಾನ ಚಿತ್ರ. ಆಳವಾದ ನಂಬಿಕೆ, ಭಕ್ತಿ ಭಾವವಿಲ್ಲದೆ ಇಂಥಾ ಚಿತ್ರವನ್ನು ರೂಪಿಸಲು ಸಾಧ್ಯವಿಲ್ಲ ಎಂಬುದನ್ನು ಸಿಂಹರೂಪಿಣಿಯೇ ವಿಜಯ್ ಅವರಿಗೆ ಮನದಟ್ಟು ಮಾಡಿಸಿದ್ದಾಳಂತೆ. ಅಪಾರ ದೈವ ಭಕ್ತಿ ಹೊಂದಿರೋ ನಿರ್ಮಾಪಕರು ಮತ್ತು ನಿರ್ದೇಶಕರ ಶ್ರದ್ಧೆ ಅವರಲ್ಲೊಂದು ಬೆರಗು ಮೂಡಿಸಿತ್ತಂತೆ. ಈ ಪಾತ್ರವನ್ನು ನಿರ್ವಹಿಸುವ ಮುನ್ನ ವಿಜಯ್ ಚೆಂಡೂರ್ ದೇವಿಯ ಮುಂದೆ ನಿಂತು ಅರಿಕೆ ಮಾಡಿಕೊಂಡಿದ್ದರಂತೆ. ನಿರ್ದೇಶಕರ ಇಷಾರೆಯ ಮೇರೆಗೆ ವಿಜಯ್ ಸಂಕಲ್ಪ ಮಾಡುತ್ತಲೇ ದೇವಿಯ ಕಡೆಯಿಂದ ಪಾಸಿಟಿವ್ ಸೂಚನೆ ಸಿಕ್ಕಿತ್ತಂತೆ. ಅದನ್ನು ಕಂಡು ಅಕ್ಷರಶಃ ರೋಮಾಂಚಿತರಾಗಿದ್ದ ವಿಜಯ್ ಚೆಂಡೂರ್, ತಮ್ಮ ಭಾಗದ ಚಿತ್ರೀಕರಣವನ್ನು ಅಂಥಾದ್ದೇ ಅನುಭೂತಿಯೊಂದಿಗೆ, ಭಕ್ತಿ ಭಾವಗಳೊಂದಿಗೆ ಮಾಡಿ ಮುಗಿಸಿದ್ದಾರಂತೆ.
ಸ್ವತಃ ದೈವಭಕ್ತರಾಗಿರುವ ವಿಜಯ್ ಚೆಂಡೂರ್ ಪಾಲಿಗಿದು ಭಿನ್ನ ಅನುಭವ. ಭಕ್ತಿ ಪ್ರಧಾನವಾದ ಚಿತ್ರವನ್ನು ನಿರ್ದೇಶಕ ಕಿನ್ನಾಳ್ ರಾಜ್ ಕಮರ್ಶಿಯಲ್ ಚೌಕಟ್ಟಿಗೆ ಒಗ್ಗಿಸಿದ ರೀತಿ ಅವರಲ್ಲೊಂದು ಬೆರಗು ಮೂಡಿಸಿದೆ. ಇಂಥಾ ಕಥನವನ್ನು ಎಲ್ಲರಿಗೂ ಹಿಡಿಸುವಂತೆ ರೂಪಿಸೋದು ನಿಜಕ್ಕೂ ಸವಾಲಿನ ಸಂಗತಿ. ಬರೀ ಭಕ್ತಿಪ್ರಧಾನ ಚೌಕಟ್ಟಿನಲ್ಲಿದ್ದರೆ ಒಂದು ವರ್ಗಕ್ಕೆ ಮಾತ್ರ ಹಿಡಿಸಬಹುದು. ಕಮರ್ಶಿಯಲ್ ಟಚ್ ಕೊಡಲು ಹೋದರೆ ಭಕ್ತಿ ಭಾವಗಳಿಗೆ ಅಪಮಾನವಾಗಬಹುದು. ಇವೆರಡನ್ನೂ ಸೂಕ್ಷ್ಮವಾಗಿ ಬ್ಲೆಂಡ್ ಮಾಡುವುದು ಅಸಲೀ ಕಸುಬುದಾರಿಕೆ. ಅದನ್ನು ಕಿನ್ನಾಳ್ ರಾಜ್ ಯಶಸ್ವಿಯಾಗಿ ಮಾಡಿದ್ದಾರೆಂಬ ನಂಬಿಕೆ ವಿಜಯ್ ಚೆಂಡೂರ್ ಅವರಲ್ಲಿದೆ. ನಿರ್ಮಾಪಕ ನಂಜುಂಡೇಶ್ವರ ಅವರ ಅಪಾರ ಭಕ್ತಿ ಈ ಸಿನಿಮಾವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ ಎಂಬ ಭಾವ ಹೊಂದಿರುವ ವಿಜಯ್ ಪಾಲಿಗೆ ಓರ್ವ ನಟನಾಗಿ ಇದು ಮಹತ್ವದ ಮೈಲಿಗಲ್ಲು.