ತಮ್ಮ ಅಮೋಘ ಅಭಿನಯದ ಮೂಲಕ ಜನಮನಸೂರೆಗೊಂಡಿರುವ ನಟ ಹರೀಶ್ ರಾಜ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 25 ವರ್ಷಗಳು ಕಳೆದಿದೆ. ತಮ್ಮ ಸಿನಿಪಯಣಕ್ಕೆ 25 ವಸಂತಗಳು ಪೂರೈಸಿರುವ ಈ ಹೊತ್ತಿನಲ್ಲಿ ಹರೀಶ್ ರಾಜ್ ಚಿಕ್ಕ ಸಮಾರಂಭವೊಂದನ್ನು ಆಯೋಜಿಸಿದ್ದರು. ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ, ನಟ, ನಿರ್ದೇಶಕ ಸುನೀಲ್ ಪುರಾಣಿಕ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಿರ್ಮಾಪಕ ಮಧುಸೂದನ್ ಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
Advertisement
1997 ರಲ್ಲಿ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದಲ್ಲಿ ಸೌಂದರ್ಯ ಅವರು ನಟಿಸಿದ್ದ”ದೋಣಿ ಸಾಗಲಿ” ಚಿತ್ರದ ಮೂಲಕ ನನ್ನ ಸಿನಿಪಯಣ ಆರಂಭವಾಯಿತು. ಅದೇ ವರ್ಷ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ನಿರ್ದೇಶಿಸಿದ್ದ “ತಾಯಿ ಸಾಹೇಬ” ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಅದರಲ್ಲಿ ನಾನು ಜಯಮಾಲ ಅವರ ಮಗನ ಪಾತ್ರ ನಿರ್ವಹಣೆ ಮಾಡಿದ್ದೆ. ಇಂದಿನ ಸಮಾರಂಭಕ್ಕೆ ನನ್ನ ಮೊದಲ ಸಿನಿಮಾ ನಿರ್ಮಾಪಕರಾದ ಮಧುಸೂದನ್ ಗೌಡ ಅವರು, ಖ್ಯಾತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಸರ್, ಸುನೀಲ್ ಪುರಾಣಿಕ್ ಹಾಗೂ ಭಾ.ಮ.ಹರೀಶ್ ಸರ್ ಬಂದಿರುವುದು ತುಂಬಾ ಖುಷಿಯಾಗಿದೆ. ಅವರಿಗೆ ಅನಂತ ಧನ್ಯವಾದ. ನಾನು, ಸುನೀಲ್ ಪುರಾಣಿಕ್ ಅವರು ಫಣಿ ರಾಮಚಂದ್ರ ನಿರ್ದೇಶನದ “ದಂಡ ಪಿಂಡಗಳು” ಧಾರಾವಾಹಿಯಲ್ಲಿ ಜೊತೆಗೆ ನಟಿಸಿದ್ದೆವು. ಇದೆಲ್ಲಾ ನೆನಪಿಸಿಕೊಂಡರೆ ಇಷ್ಟು ಬೇಗ 25 ವರ್ಷಗಳು ಕಳೆದು ಹೋಯಿತಾ? ಅನಿಸುತ್ತದೆ. ಈ ಇಪ್ಪತ್ತೈದು ವರ್ಷಗಳಲ್ಲಿ 60 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಾಡಿದ್ದೇನೆ. ಗಿರೀಶ್ ಕಾಸರವಳ್ಳಿ, ಗಿರೀಶ್ ಕಾರ್ನಾಡ್, ರಾಜೇಂದ್ರ ಸಿಂಗ್ ಬಾಬು ಅವರಂತಹ ಶ್ರೇಷ್ಠ ನಿರ್ದೇಶಕರ ಚಿತ್ರಗಳಲ್ಲಿ ನಟಿಸಿದ್ದೇನೆ.
Advertisement
Advertisement
ಬಿಗ್ ಬಾಸ್ ನನಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದೆ. ನಾನು ಏನಾದರೂ ಈ ರಂಗದಲ್ಲಿ ಸಾಧನೆ ಮಾಡಿದ್ದೀನಿ ಅಂದರೆ ಅದಕ್ಕೆ ಕಾರಣ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಕಲಾವಿದರು ಹಾಗೂ ಮಾಧ್ಯಮದವರು. ಇಡೀ ಚಿತ್ರರಂಗಕ್ಕೆ ನಾನು ಚಿರ ಋಣಿ ಎಂದರು ಹರೀಶ್ ರಾಜ್. ಇದನ್ನೂ ಓದಿ:ಅಫೇರ್ ಆರೋಪ ಬೆನ್ನಲ್ಲೇ ಧಿಡೀರ್ ಸಂಭಾವನೆ ಹೆಚ್ಚಿಸಿಕೊಂಡ ಪವಿತ್ರಾ ಲೋಕೇಶ್
Advertisement
ಸ್ನೇಹಿತರೊಬ್ಬರ ಮೂಲಕ ನನಗೆ ಹರೀಶ್ ರಾಜ್ ಪರಿಚಯವಾದರು. ರಬಕವಿಯಲ್ಲಿ “ತಾಯಿಸಾಹೇಬ” ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಜಯಮಾಲ, ಶಿವರಾಮಣ್ಣ ಭಾಗವಹಿಸಿದ್ದರು. ತುರ್ತುಕಾರ್ಯದ ನಿಮಿತ್ತ ಶಿವರಾಮಣ್ಣ ಬೆಂಗಳೂರಿಗೆ ತೆರಳಬೇಕಾಯಿತು. ಆಗ ತಕ್ಷಣ ಹರೀಶ್ ರಾಜ್ ಅವರಿಗೆ ಫೋನ್ ಮಾಡಿ, ನಾಳೆ ನಿಮ್ಮ ಪಾತ್ರದ ಚಿತ್ರೀಕರಣವಿದೆ. ರಾತ್ರಿಯೇ ಹೊರಟು ಬನ್ನಿ ಎಂದೆ. ಬೆಳಗ್ಗೆ ಬಂದರು. ಯಾವುದೇ ಆಯಾಸವಿಲ್ಲದೆ ಅಂದಿನ ಚಿತ್ರೀಕರಣದಲ್ಲಿ ಲವಲವಿಕೆಯಿಂದ ಭಾಗವಹಿಸಿ, ಎಲ್ಲರ ಮೆಚ್ಚುಗೆ ಪಡೆದರು. ನಂತರ ನನ್ನ “ದ್ವೀಪ” ಚಿತ್ರದಲ್ಲೂ ಅಭಿನಯಿಸಿದ್ದರು. ಆ ಚಿತ್ರದ ಅಭಿನಯಕ್ಕಾಗಿ ಇವರು ರಾಷ್ಟ್ರೀಯ ಪ್ರಶಸ್ತಿ ರೇಸ್ ನಲ್ಲಿ ಇದ್ದರು ಎಂದು ನನಗೆ ನಿಧಾನವಾಗಿ ತಿಳಿಯಿತು. ಒಟ್ಟನಲ್ಲಿ ಹರೀಶ್ ರಾಜ್ ಉತ್ತಮ ನಟ. ಮುಂದೆ ಸಹ ಅವರಿಗೆ ಒಳ್ಳೆಯ ಅವಕಾಶಗಳು ಸಿಗಲಿ ಎಂದು ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹಾರೈಸಿದರು.
ತಮ್ಮ ಹರೀಶ್ ರಾಜ್ ಒಡನಾಟದ ಬಗ್ಗೆ ಸುನೀಲ್ ಪುರಾಣಿಕ್ ನೆನಪಿಸಿಕೊಂಡರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಶುಭಾಶಯ ತಿಳಿಸಿದರು.