– ಬಿಲ್ಲು-ಬಾಣಕ್ಕೆ ಪೂಜೆ ಸಲ್ಲಿಸಿದ ಶೃಂಗೇರಿ ಮಠದ ಶ್ರೀಗಳು
ಚಿಕ್ಕಮಗಳೂರು: ಅಯೋಧ್ಯೆಯ (Ayodhya) ಬಾಲರಾಮನಿಗೆ (Ram Lalla) ಭಕ್ತರೊಬ್ಬರು ಬೆಳ್ಳಿಯ ಬಿಲ್ಲು ಹಾಗೂ ಬಾಣವನ್ನು ನೀಡುವ ಮೂಲಕ ಭಕ್ತಿ ಸಮರ್ಪಿಸಿದ್ದಾರೆ. ಬೆಳ್ಳಿಯ ಬಿಲ್ಲು-ಬಾಣವನ್ನ ಮಾಡಿಸಿದ ಆಂಧ್ರಪ್ರದೇಶ ಮೂಲದ ಭಕ್ತರು ಅದನ್ನು ಶೃಂಗೇರಿಗೆ ತಂದು ಪೂಜೆ ಮಾಡಿಸಿದ್ದಾರೆ.
ಬಾಲರಾಮನ ಬೆಳ್ಳಿಯ ಬಿಲ್ಲು ಹಾಗೂ ಬಾಣಕ್ಕೆ ಶೃಂಗೇರಿ ಮಠದ ಹಿರಿಯ ಗುರುಗಳಾದ ಶ್ರೀ ಭಾರತಿ ತೀರ್ಥ ಸ್ವಾಮೀಜಿ ಪೂಜೆ ಸಲ್ಲಿಸಿದ್ದಾರೆ. ಶೃಂಗೇರಿ ಮಠದ ಕಿರಿಯ ಗುರುಗಳಾದ ಮಿಧುಶೇಖರ ಶ್ರೀಗಳು ಬೆಳ್ಳಿಯ ಬಿಲ್ಲು ಹಾಗೂ ಬಾಣವನ್ನು ಕೈಯಲ್ಲಿ ಹಿಡಿದು ನೋಡಿದ್ದಾರೆ. ನೋಡಲು ಅತ್ಯಂತ ಸುಂದರ ಹಾಗೂ ಮನಮೋಹಕವಾಗಿರುವ ಬೆಳ್ಳಿಯ ಬಿಲ್ಲು ಹಾಗೂ ಬಾಣವನ್ನ ಆಂಧ್ರಪ್ರದೇಶ ಮೂಲದ ರಾಮನ ಭಕ್ತ ಚಲ್ಲಾ ಶ್ರೀನಿವಾಸ್ ಎಂಬ ಭಕ್ತರು ಅಯೋಧ್ಯೆಯ ರಾಮನಿಗೆ ಭಕ್ತಿ ಪೂರ್ವಕವಾಗಿ ನೀಡಿದ್ದಾರೆ. ಇದನ್ನೂ ಓದಿ: ಮೆಟ್ರೋ ಹಳದಿ ಮಾರ್ಗದಲ್ಲಿ ವಯಾಡಕ್ಟ್ ಪರಿಶೀಲನಾ ಕಾರ್ಯ ಆರಂಭ
ಜನವರಿ 22 ರಂದು ಅಯೋಧ್ಯೆಯ ರಾಮನ ಪ್ರಾಣಪ್ರತಿಷ್ಠಾಪನೆ (Ayodhya Ram Mandir) ದಿನ ಶೃಂಗೇರಿಯ ಋತ್ವಿಜರು ಹಾಗೂ ಪುರೋಹಿತರು ಕೂಡ ಅಯೋಧ್ಯೆಯ ಧಾರ್ಮಿಕ ಕಾರ್ಯಕ್ರಮ, ವಿಧಿ-ವಿಧಾನಗಳಲ್ಲಿ ಪಾಲ್ಗೊಂಡಿದ್ದರು. ಅಯೋಧ್ಯೆ ರಾಮನ ಜಲಾಭಿಷೇಕಕ್ಕೆಂದು ಶೃಂಗೇರಿ ಶಾರದಾಂಭೆ ನೆಲೆಸಿರುವ ತುಂಗಾ ನದಿಯಿಂದಲೂ ಜಲವನ್ನ ಕೊಂಡೊಯ್ದಿದ್ದರು. ತುಂಗಾ ನದಿ ಜೊತೆ ಜಿಲ್ಲೆಯ ಭದ್ರಾ ಹಾಗೂ ಹೇಮಾವತಿ ನದಿಯಿಂದಲೂ ಜಲವನ್ನ ಕೊಂಡೊಯ್ದಿದ್ದರು.
ಇದರ ಮಧ್ಯೆ ಅಯೋಧ್ಯೆಯ ಶ್ರೀರಾಮನಿಗೂ ಶೃಂಗೇರಿಗೂ ಅವಿನಾಭಾವ ಸಂಬಂಧವಿದೆ. ಶ್ರೀರಾಮನ ಸಹೋದರಿ ಶಾಂತ ಅವರ ದೇಗುಲವಿರುವ ಶೃಂಗೇರಿ ತಾಲೂಕಿನ ಕಿಗ್ಗಾದ ಋಷ್ಯಶೃಂಗೇಶ್ವರ ದೇಗುಲದಿಂದಲೂ ರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ದಿನ ರಾಮನ ಪೂಜೆಗಾಗಿ ಪಂಜೆ, ಶಲ್ಯ, ಸೀರೆ, ಅರಿಶಿನ-ಕುಂಕುಮ ಸೇರಿದಂತೆ ವಿವಿಧ ಧಾರ್ಮಿಕ ವಸ್ತುಗಳನ್ನ ಕೊಂಡೊಯ್ದಿದ್ದರು. ಇದನ್ನೂ ಓದಿ: 24 ಗಂಟೆಯೊಳಗೆ ಚುನಾವಣಾ ಕಣದಿಂದ ನಿವೃತ್ತರಾಗಿ: ರಘುಪತಿ ಭಟ್‍ಗೆ ಸುನಿಲ್ ಕುಮಾರ್ ಎಚ್ಚರಿಕೆ
ಮಳೆ ದೇವರು ಎಂದೇ ಖ್ಯಾತಿಯಾಗಿರುವ ಕಿಗ್ಗಾದ ಶಾಂತಾ ಸಮೇತ ಋಷ್ಯಶೃಂಗೇಶ್ವರರು ಅಯೋಧ್ಯೆಯ ಶ್ರೀರಾಮನ ಅಕ್ಕ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಇಂದು ಭಕ್ತರೊಬ್ಬರು ಅಯೋಧ್ಯೆಯ ಶ್ರೀರಾಮನಿಗೆ ಬೆಳ್ಳಿಯ ಬಿಲ್ಲು ಹಾಗೂ ಬಾಣವನ್ನ ಮಾಡಿಸಿ ಶೃಂಗೇರಿ ಶಾರದಾಂಬೆ ದೇಗುಲದಲ್ಲಿ ಪೂಜೆ ಸಲ್ಲಿಸಿ ಅಯೋಧ್ಯೆಗೆ ತಲುಪಿಸಿದ್ದಾರೆ.