ಬೆಂಗಳೂರು: ದೇಣಿಗೆ ಕೇಳೋ ನೆಪದಲ್ಲಿ ಕಳ್ಳರು ದರೋಡೆ ಮಾಡುತ್ತಿರುವ ಹಲವು ಪ್ರಕರಣಗಳು ಎಚ್ಎಎಲ್ ಬಡಾವಣೆಯಲ್ಲಿ ನಡೆದಿದೆ.
ದಿನೇ ದಿನೇ ಕಳ್ಳರು ಹೊಸ ಹೊಸ ಯೋಜನೆ ಹಾಕಿಕೊಂಡು ದರೋಡೆ ನಡೆಸುತ್ತಿರುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ದೇಣಿಗೆ ಕೇಳುವ ನೆಪದಲ್ಲಿ ಒಂಟಿ ಮಹಿಳೆಯರು ಇರುವ ಮನೆಗೆ ನುಗ್ಗಿ ದರೋಡೆ ಮಾಡುತ್ತಿರುವ ಪ್ರಕರಣಗಳು ನಗರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.
ಎಚ್ಎಎಲ್ ಬಡಾವಣೆಯಲ್ಲಿ ಇಬ್ಬರು ದರೋಡೆಕೋರರು ಗುರುದ್ವಾರಕ್ಕೆ ದೇಣಿಗೆ ನೀಡುವಂತೆ ಮನೆಗೆ ಬಂದಿದ್ದಾರೆ. ಇದೇ ವೇಳೆ ಮಹಿಳೆಯ ಗಮನ ಬೇರೆಡೆ ಸೆಳೆದು ದರೋಡೆ ಮಾಡಿ ಪರಾರಿಯಾಗಿದ್ದಾರೆ. ಈ ಘಟನೆ ಕುರಿತು ಎಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೇಣಿಗೆ ಕೇಳುವ ನೆಪದಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸದರಿ ಇಬ್ಬರ ಕಳ್ಳರ ಮೇಲೆ ನಗರದ ವಿವಿಧೆಡೆ ಇಂತದ್ದೇ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳ್ಳರ ಪತ್ತೆಗೆ ಬಲೆ ಬೀಸಿ ತೀವ್ರ ಶೋಧ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಒಂಟಿ ಮಹಿಳೆಯರೇ ಇರುವ ಮನೆಗಳೇ ಇವರ ಗುರಿಯಾಗಿದ್ದು, ಮಹಿಳೆಯರು ಎಚ್ಚರಿಕೆ ವಹಿಸಬೇಕೆಂದು ತಿಳಿಸಿದ್ದಾರೆ. ಯಾರಾದರೂ ದೇಣಿಗೆ ಸಂಗ್ರಹಿಸುವ ನೆಪದಲ್ಲಿ ಬಂದರೆ ಕೂಡಲೇ ಪೊಲೀಸರಿಗೆ ತಿಳಿಸುವಂತೆ ಸಾರ್ವಜನಿಕರಲ್ಲಿ ಕೇಳಿಕೊಂಡಿದ್ದಾರೆ.