ಸಂಕ್ರಾಂತಿಯ ಮಹಾಕ್ರಾಂತಿ ವಿಫಲ ಬೆನ್ನಲ್ಲೆ ಆಪರೇಷನ್ ಮೌನ ಕ್ರಾಂತಿ ಆರಂಭ!

Public TV
3 Min Read
operation mouna

– ದೋಸ್ತಿ ಸರ್ಕಾರಕ್ಕೆ ಖೆಡ್ಡಾ ತೋಡಲು ಕೂಡಿ ಕಳೆಯುವ ಆಟ!
– ಆಪರೇಷನ್ ಕಡೇ ಆಟ ಸಕ್ಸಸ್ ಆಗುತ್ತಾ? ಹೇಗೆ ನಡೆಯುತ್ತೆ..?

ಬೆಂಗಳೂರು: ಈ ಬಾರಿಯ ಸಂಕ್ರಾಂತಿಗೆ ರಾಜ್ಯದ ಮೈತ್ರಿ ಸರ್ಕಾರ ಬಿದ್ದು ಹೋಗುತ್ತೆ ಎನ್ನುವಂತೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು. ಮೂರು ಹಂತಗಳಲ್ಲಿ ನಡೆದಿದ್ದು ಆಪರೇಷನ್ ಕಮಲ ಎರಡನೇ ಸ್ಟೇಜ್‍ನಲ್ಲಿ ವಿಫಲವಾಯ್ತು. ಕೊನೆಗೂ ನಮ್ಮ ಸರ್ಕಾರವನ್ನು ನಾವು ಉಳಿಸಿಕೊಂಡಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಸಾರ್ವಜನಿಕವಾಗಿಯೇ ಗೆಲುವಿನ ನಗೆ ಬೀರಿದ್ದರು. ಇದೀಗ ಮತ್ತೊಮ್ಮೆ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗ್ತಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

ಕಾಂಗ್ರೆಸ್ ಶಾಸಕರು ಬಿಡದಿಯ ಈಗಲ್ಟನ್ ರೆಸಾರ್ಟ್ ಸೇರುತ್ತಿದ್ದಂತೆ ಗುರುಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಬಿಜೆಪಿಯ ಶಾಸಕರ ಪಡೆ ರಾಜ್ಯಕ್ಕೆ ಹಿಂದಿರುಗಿತ್ತು. ಕಾಂಗ್ರೆಸ್ ನಾಯಕರು ಬಿಜೆಪಿ ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಬಹಿರಂಗವಾಗಿ ಹೇಳಿಕೆಯನ್ನು ನೀಡತೊಡಗಿದರು. ನಾವ್ ಯಾವುದೇ ಆಪರೇಷನ್ ನಡೆಸಿಲ್ಲ ಅಂತಾ ಬಿಜೆಪಿ ಪ್ರತ್ಯುತ್ತರ ನೀಡಿತ್ತು. ನಾವು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆಗಾಗಿ ಎಲ್ಲ ಶಾಸಕರನ್ನು ಒಂದೆಡೆ ಸೇರಿಸಲಾಗಿತ್ತು ಬಿಜೆಪಿ ನಾಯಕರು ಗುರುಗ್ರಾಮ ರೆಸಾರ್ಟ್ ವಾಸ್ತವ್ಯಕ್ಕೆ ಸ್ಪಷ್ಟನೆ ನೀಡಿದ್ದರು.

operation mouna a

ಆಪರೇಷನ್ ಮೌನ ಕ್ರಾಂತಿ:
ಆಪರೇಷನ್ ಕಮಲ ವಿಫಲವಾದ ಬೆನ್ನಲ್ಲೆ ಬಿಜೆಪಿ ಮೌನ ಕ್ರಾಂತಿಗೆ ಮುಂದಾಗಿದೆ. ಬಜೆಟ್ ಅಧಿವೇಶನದಲ್ಲಿಯೇ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ ತೆರೆಮರೆಯಲ್ಲಿ ತಯಾರಿ ನಡೆಸುತ್ತಿದೆ. ಈ ಮೊದಲು ಎಲ್ಲ ಶಾಸಕರನ್ನು ಬಿಜೆಪಿ ದೆಹಲಿಯತ್ತ ಕರೆದೊಯ್ಯುತ್ತಿದ್ದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಅಲರ್ಟ್ ಆಗಿತ್ತು. ಹಾಗಾಗಿ ಈ ಬಾರಿ ಸುಳಿವು ನೀಡದೇ ಆಪರೇಷನ್ ನಡೆಸಲು ಬಿಜೆಪಿ ತೀರ್ಮಾನಿಸಿದೆ ಎಂಬ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

ಈ ಅತೃಪ್ತ ಶಾಸಕರು ಉಳಿದುಕೊಂಡಿದ್ದರು ಎನ್ನಲಾದ ರಿನೈಸಾನ್ಸ್ ಹೋಟೆಲ್ 20 ರೂಮ್‍ಗಳನ್ನು ಬಿಜೆಪಿ ಖಾಲಿ ಮಾಡಿಲ್ಲ. ರಮೇಶ್ ಜಾರಕಿಹೊಳಿ ಸಹ ಇದೇ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಬಜೆಟ್ ಅಧಿವೇಶನಕ್ಕೂ ಮುನ್ನ ಬಿಜೆಪಿ ರಾಜ್ಯಪಾಲರನ್ನು ಭೇಟಿ ಮಾಡಿ ವಿಶ್ವಾಸ ಮತಯಾಚನೆ ಅವಕಾಶ ನೀಡಬೇಕೆಂದು ಕೇಳಿಕೊಳ್ಳಲಿದೆ. ರಾಜ್ಯಪಾಲರು ವಿಶ್ವಾಸಮತಯಾಚನೆಗೆ ಅವಕಾಶ ಕೊಟ್ಟಾಗ ಮೌನ ಕ್ರಾಂತಿ ಬ್ಲಾಸ್ಟ್ ಆಗಲಿದೆಯಂತೆ. ಫೆಬ್ರವರಿ 8ರಿಂದ 10ರೊಳಗೆ ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ ಆದ್ರೂ ಆಶ್ಚರ್ಯಪಡುವಂತಿಲ್ಲ ಎನ್ನುತ್ತಿದೆ ರಾಜಕೀಯ ಅಂಗಳ.

operation mouna b

ಅತೃಪ್ತರೊಂದಿಗೆ ಸಂಪರ್ಕ: ಆಪರೇಷನ್ ಕಮಲ ಫೇಲ್ ಆದರೂ ಬಿಜೆಪಿ ಕಾಂಗ್ರೆಸ್‍ನ 8 ಶಾಸಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರಂತೆ. 104 ಶಾಸಕರನ್ನು ಹೊಂದಿರುವ ಬಿಜೆಪಿ ಇಬ್ಬರ ಪಕ್ಷೇತರ ಬೆಂಬಲದೊಂದಿಗೆ 106ರ ಬಲ ಹೊಂದಿದೆ. ಇದೀಗ 8 ಶಾಸಕರು ಕಡೆಯಿಂದ ರಾಜೀನಾಮೆ ಕೊಡಿಸ್ತಾರಂತೆ. ಲೋಕಸಭಾ ಚುನಾವಣೆಗೂ ಮುನ್ನ ದೋಸ್ತಿಯನ್ನು ಕೆಡವಲು ಬಿಜೆಪಿ ಈ ಬಾರಿ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಟ್ಟಂತೆ ಕಾಣುತ್ತಿದೆ. ಶಾಸಕರಾದ ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್, ನಾಗೇಂದ್ರ, ಮಹೇಶ್ ಕುಮಟಳ್ಳಿ, ಶಿವರಾಮ್ ಹೆಬ್ಬಾರ್, ಭೀಮಾ ನಾಯ್ಕ್ ಮತ್ತು ಗಣೇಶ್ ಬಂಡಾಯದ ಬಾವುಟ ಹಿಡಿದು ರೆಡಿಯಾಗಿ ನಿಂತಿದ್ದಾರೆ.

ಸಂಕ್ರಾಂತಿಯ ಆಸುಪಾಸಿನಲ್ಲಿ ಬಿಜೆಪಿ ಮುಂಬೈನ ರಿನೈಸಾನ್ಸ್ ಹೋಟೆಲ್ ನ ಆರನೇ ಮಹಡಿಯಲ್ಲಿ ಕೆಲವು ಕೋಣೆಗಳನ್ನು ಬುಕ್ ಮಾಡಿಕೊಂಡಿತ್ತು. ಇದೇ ಹೋಟೆಲ್ ನಲ್ಲಿ ಕಾಂಗ್ರೆಸ್ ಶಾಸಕರು ಕಾಣಿಸಿಕೊಂಡಿರುವ ಫೋಟೋಗಳು ಹರಿದಾಡಿದ್ದವು. ಕಾಂಗ್ರೆಸ್ ಶಾಸಕರ ಜೊತೆ ಬಿಜೆಪಿಯ ಅಶ್ವಥ್ ನಾರಾಯಣ್ ಸಹ ಕಾಣಿಸಿಕೊಂಡಿದ್ದರಿಂದ ಆಪರೇಷನ್ ಕಮಲ ನಡೆಯುತ್ತಿದೆ ಎಂಬುವುದಕ್ಕೆ ಪುಷ್ಠಿ ನೀಡಿತ್ತು. ಮುಂಬೈನಲ್ಲಿಯೇ ಪಕ್ಷೇತರ ಶಾಸಕರಾದ ಆರ್. ಶಂಕರ್ ಮತ್ತು ಹೆಚ್.ನಾಗೇಶ್ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದಿದ್ದರು. ಅತೃಪ್ತ ಶಾಸಕರ ನೇತೃತ್ವವನ್ನು ಬೆಳಗಾವಿಯ ಸಾಹುಕಾರ, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ವಹಿಸಿಕೊಂಡಿದ್ದರು ಎನ್ನಲಾಗುತ್ತಿದೆ.

operation mouna C

ಸಾಹುಕಾರರ ಷರತ್ತು?
ಮುಂಬೈನಲ್ಲಿ ಉಳಿದಿದ್ದ ಎಲ್ಲ ಶಾಸಕರು ರಾಜ್ಯಕ್ಕೆ ಹಿಂದಿರುಗಿದ್ದಾರೆ. ಸಚಿವ ಸ್ಥಾನ ಕಳೆದುಕೊಂಡು ಕೋಪಾಗ್ನಿಯಲ್ಲಿ ಉರಿಯುತ್ತಿರುವ ರಮೇಶ್ ಜಾರಕಿಹೊಳಿ ಉಪ ಮುಖ್ಯಮಂತ್ರಿ ಆಗುವವರೆಗೂ ಸ್ವಕ್ಷೇತ್ರಕ್ಕೆ ಬರಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರಂತೆ. ಡಿಸಿಎಂ ಸ್ಥಾನ ನೀಡಬೇಕು ಇಲ್ಲವೇ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂಬ ಎರಡು ಷರತ್ತುಗಳನ್ನು ರಮೇಶ್ ಜಾರಕಿಹೊಳಿ ಹೈಕಮಾಂಡ್ ಇಟ್ಟಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

https://www.youtube.com/watch?v=9xGOrVUddC0

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *