ಬೆಳಕಿನ ಹಬ್ಬ ದೀಪಾವಳಿ (Deepavali). ದೇಶದೆಲ್ಲೆಡೆ ದೀಪದ ಹಾವಳಿ. ಕತ್ತಲಿನಿಂದ ಬೆಳಕಿನೆಡೆಗೆ ನಡಿಗೆ.. ಕೆಡುಕಿನ ವಿರುದ್ಧ ಒಳಿತಿನ ಯುದ್ಧದ ಸಂಕೇತ ಈ ದೀಪಾವಳಿ. ಮನೆ ಮನೆಗಳಲ್ಲಿ ದೀಪ ಹಚ್ಚಿ, ಮನ ಮನಗಳಲ್ಲಿ ಬೆಳಕು ಹೊಮ್ಮಿಸುವುದು ಎಷ್ಟು ಸೊಗಸು ಅಲ್ಲವೇ? ದೀಪಾವಳಿ ಕೇವಲ ಹಬ್ಬ, ಆಚರಣೆಯಾಗಷ್ಟೇ ಉಳಿದುಕೊಂಡಿಲ್ಲ. ಭಾರತೀಯ ಸಂಸ್ಕೃತಿ, ಇತಿಹಾಸದ ಸಂಗತಿಗಳೊಂದಿಗೆ ಬೆಳಕಿನ ಹಬ್ಬ ಸಮ್ಮಿಲನಗೊಂಡಿದೆ.
ಆಯಾ ಪ್ರಾದೇಶಿಕ ಮಹತ್ತಿನ ಸಂಗತಿಗಳು ಕಾಲಾಂತರದಲ್ಲಿ ದೀಪಾವಳಿ ಹಬ್ಬದೊಂದಿಗೆ ಮಿಳಿತಗೊಂಡಂತಿದೆ. ಅದಕ್ಕೆ ಸಾಕಷ್ಟು ಉದಾಹರಣೆಗಳೂ ಇವೆ. ಆದ್ದರಿಂದಲೇ ಭಾರತದ ಭಿನ್ನ ಭಿನ್ನ ಪ್ರದೇಶಗಳಲ್ಲಿ ದೀಪಾವಳಿಯ (Diwali) ಜೊತೆಗೆ ಬೆಸೆದುಕೊಂಡಿರುವ ಕಥೆಗಳು ಸಹ ಭಿನ್ನ ಭಿನ್ನ. ರಾವಣನನ್ನು ಸೋಲಿಸಿದ ನಂತರ ಶ್ರೀರಾಮನು ಸೀತೆಯನ್ನು ಅಯೋಧ್ಯೆಗೆ ಕರೆದುಕೊಂಡ ಬಂದ ಸಂದರ್ಭವನ್ನು ಜನರು ಸಂಭ್ರಮಿಸುತ್ತಾರೆ. ಕಾಲಾಂತರದಲ್ಲಿ ಆ ಸಂಭ್ರಮ ದೀಪಾವಳಿಯೊಂದಿಗೆ ಬೆಸೆದುಕೊಳ್ಳುತ್ತದೆ. ಇಂತಹ ಅನೇಕ ಐತಿಹ್ಯ ಸಂಗತಿಗಳು ದೀಪಾವಳಿ ಜೊತೆಗೆ ಸಮ್ಮಿಲನಗೊಂಡಿವೆ. ಇದನ್ನೂ ಓದಿ: ದೀಪಾವಳಿಯಲ್ಲಿ ಗೋಪೂಜೆಯ ಮಹತ್ವವೇನು?
Advertisement
Advertisement
ಸಿಖ್ಖರ ದೀಪಾವಳಿ
ಸಿಖ್ಖರು (Sikhs Diwali) ಸಹ ತಮ್ಮ ಪ್ರದೇಶದ ಮಹತ್ತಿನ ಸಂಗತಿಯೊಂದನ್ನು ಸ್ಮರಿಸುವ ಮೂಲಕ ವಿಶೇಷ ರೀತಿಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ. ಸಿಖ್ಖರಲ್ಲಿ, ದೀಪಾವಳಿ ಆಚರಿಸಲು ಮತ್ತೊಂದು ಕಾರಣವಿದೆ. ಇದನ್ನು ‘ಬಂದಿ ಛೋರ್ ದಿವಸ್’ (Bandi Chhor Divas) ಅಂದರೆ ವಿಮೋಚನೆಯ ದಿನ ಎಂದು ಕರೆಯಲಾಗುತ್ತದೆ. ಈ ಆಚರಣೆಯ ಹಿಂದೆ ಶೌರ್ಯ, ತ್ಯಾಗ ಮತ್ತು ಶ್ರದ್ಧೆಯ ಕಥೆಯಿದೆ. ಶ್ರೀರಾಮನ ವಿಜಯಕ್ಕೆ ಇದನ್ನು ಹೋಲಿಸಿ ಜನ ಸಂಭ್ರಮಿಸುತ್ತಾರೆ.
Advertisement
ಬಂದಿ ಛೋರ್ ದಿವಸ್ ಹಿಂದಿನ ಕಥೆ
ಸಿಖ್ ಧರ್ಮದಲ್ಲಿಯೂ ಸಹ ದೀಪಾವಳಿ ಮುಖ್ಯ ಹಬ್ಬ. 1620 ರಲ್ಲಿ ಸಿಖ್ಖರ ದೊರೆ 6ನೇ ಗುರು ಹರಗೋಬಿಂದ್ ಸಿಂಗ್ (Guru Hargobind Singh), ಗ್ವಾಲಿಯರ್‌ನ ಕೋಟೆಯಲ್ಲಿ ಬಂಧಿತರಾಗಿದ್ದ 52 ರಾಜರನ್ನು ಬಿಡಿಸಿ ತಂದ ದಿನವೆಂದು ದೀಪಾವಳಿಯನ್ನು ಆಚರಿಸುತ್ತಾರೆ. ಚಕ್ರವರ್ತಿ ಜಹಾಂಗೀರ್ ಸೆರೆಯಿಂದ 52 ರಾಜರನ್ನು ಬಿಡುಗಡೆ ಮಾಡಿದ ಗುರು ಹರಗೋಬಿಂದ್ ಜಿ ಅವರ ಧೈರ್ಯದ ಕಾರ್ಯವನ್ನು ಸ್ಮರಿಸಲು ಸಿಖ್ಖರು ಈ ದಿನವನ್ನು ದೀಪಾವಳಿ ಸಂದರ್ಭದಲ್ಲಿ ಆಚರಿಸುತ್ತಾರೆ. 1606 ಶತಮಾನದಲ್ಲಿ ಗುರು ಹರಗೋಬಿಂದ್ ಅವರು ತಮ್ಮ ತಂದೆ ಮತ್ತು ಐದನೇ ಸಿಖ್ ಗುರು ಅರ್ಜನ್ ದೇವ್ ಅವರ ಮರಣದಂಡನೆಯ ನಂತರ ಸಿಂಹಾಸನ ಅಲಂಕರಿಸಿದರು. ಇದನ್ನೂ ಓದಿ: ದೀಪಾವಳಿ: ವ್ಯಾಪಾರ ವೃದ್ಧಿಗೆ ಮಾಡಿ ಧನಲಕ್ಷ್ಮಿ ಪೂಜೆ
Advertisement
ಗುರು ಹರಗೋಬಿಂದ್ ಸಿಂಗ್ ತಮ್ಮ 11 ನೇ ವಯಸ್ಸಿನಲ್ಲೇ ಸಿಂಹಾಸನ ಏರಿದರು. ಆರಂಭದಲ್ಲಿ ತಮ್ಮ ಸೇನಾಪಡೆಯ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ತೊಡಗಿಸಿಕೊಂಡರು. ಅಮೃತಸರದಲ್ಲಿ ಶ್ರೀ ಅಕಲ್ ತಖತ್ ಸಾಹಿಬ್ (ಸರ್ವಶಕ್ತರ ಸಿಂಹಾಸನ) ನಿರ್ಮಿಸಿದರು. ಸಿಂಗ್ ಸಾಮ್ರಾಜ್ಯದಲ್ಲಿ ಹೆಚ್ಚುತ್ತಿದ್ದ ಸೇನಾ ಶಕ್ತಿಯು ಇತರ ಆಡಳಿತಗಾರರನ್ನು ಎಚ್ಚರಿಸಿತು. ಪರಿಣಾಮವಾಗಿ ಲಾಹೋರ್‌ನ ನವಾಬ್, ಮುರ್ತಾಜಾ ಖಾನ್, ಚಕ್ರವರ್ತಿ ಜಹಾಂಗೀರ್‌ಗೆ ಈ ಬಗ್ಗೆ ಮಾಹಿತಿ ರವಾನಿಸಿದರು. ಹರಗೋಬಿಂದ್ ಸಿಂಗ್ ನಮ್ಮ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಹಾಗೆ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ.
ಗುರು ಹರಗೋಬಿಂದ್ ಬಂಧನ
ಸೇನಾ ಶಕ್ತಿ ಹೆಚ್ಚಿಸಿಕೊಳ್ಳುತ್ತಿದ್ದ ಹರಗೋಬಿಂದ್ ಸಿಂಗ್ ಬಂಧನಕ್ಕೆ ಜಹಾಂಗೀರ್ ಗುರು ತಂತ್ರ ರೂಪಿಸುತ್ತಾರೆ. ಸಿಂಗ್‌ನನ್ನು ಬಂಧಿಸಲು ತನ್ನ ಬಹುಕಾಲದ ವಿಶ್ವಾಸಾರ್ಹ ಸಹಾಯಕ ವಜೀರ್ ಖಾನ್‌ಗೆ ಆದೇಶ ಹೊರಡಿಸುತ್ತಾರೆ. ಆಗ ವಜೀರ್, ದೆಹಲಿಯಲ್ಲಿ ಚಕ್ರವರ್ತಿ ಜಹಾಂಗೀರರನ್ನು ಭೇಟಿಯಾಗಲೆಂದು ಹರಗೋಬಿಂದ್ ಸಿಂಗ್‌ಗೆ ಆಹ್ವಾನ ನೀಡುತ್ತಾರೆ. ಆಹ್ವಾನವನ್ನು ಒಪ್ಪಿ ಸಿಂಗ್, ಜಹಾಂಗೀರರ ಆಸ್ಥಾನವನ್ನು ತಲುಪುತ್ತಾರೆ. ಆಗ ಅವರನ್ನು ಗ್ವಾಲಿಯರ್ ಕೋಟೆಯಲ್ಲಿ ಬಂಧಿಸಲಾಗುತ್ತದೆ. ಇದನ್ನೂ ಓದಿ: ಬೆಳಕಿನ ಹಬ್ಬಕ್ಕಿದೆ ರಾಮಾಯಣದ ನಂಟು
ಗುರು ಹರಗೋಬಿಂದ್ ಜೊತೆಗೆ, ಅನೇಕ ರಜಪೂತ ರಾಜಕುಮಾರರನ್ನು ಸಹ ಕೋಟೆಯಲ್ಲಿ ಒತ್ತೆಯಾಳಾಗಿ ಇರಿಸಲಾಗಿತ್ತು. ಒಳಗೆ ರಾಜ ಗುರುವನ್ನು ದುರ್ಬಲಗೊಳಿಸಲು ಅನೇಕ ಪ್ರಯತ್ನಗಳು ನಡೆದವು. ಆದರೆ ಅವರ ನಂಬಿಕೆಯು ಅವರನ್ನು ಉತ್ತೇಜಿಸಿತು. ಅವರ ಆಸ್ಥಾನ ಮತ್ತು ಸಾಮ್ರಾಜ್ಯದ ಹಿತೈಷಿಗಳು ಅವರ ತ್ಯಾಗಕ್ಕೆ ಗೌರವ ಸಲ್ಲಿಸಲು ಗ್ವಾಲಿಯರ್‌ಗೆ ಹೋದರು. ಅವರಲ್ಲಿ ಒಬ್ಬರು ಹೆಸರಾಂತ ಸೂಫಿ ಸಂತ, ಮಿಯಾನ್ ಮಿರ್. ಈ ಸಂತ ಗ್ವಾಲಿಯರ್ ತಲುಪಿದಾಗ, ಗುರು ಹರಗೋಬಿಂದ್‌ಗೆ ಸ್ವಾತಂತ್ರ‍್ಯವನ್ನು ನೀಡುವಂತೆ ಚಕ್ರವರ್ತಿಯನ್ನು ವಿನಂತಿಸಿದರು. ವಿನಂತಿಗೆ ಮಣಿದ ಚಕ್ರವರ್ತಿ ಹರಗೋಬಿಂದ್ ಬಿಡುಗಡೆಗೆ ಆದೇಶಿಸುತ್ತಾರೆ.
ಬಂಧನದಿಂದ 52 ರಾಜರ ಬಿಡುಗಡೆ
ಆದಾಗ್ಯೂ, ಇತರ 52 ರಜಪೂತ ರಾಜಕುಮಾರರನ್ನು ಸಹ ಬಿಡುಗಡೆ ಮಾಡುವವರೆಗೆ ನಾನು ಬಿಡುಗಡೆ ಆಗುವುದಿಲ್ಲ ಎಂದು ಹರಗೋಬಿಂದ್ ನಿರಾಕರಿಸುತ್ತಾರೆ. ಇದನ್ನು ಕೇಳಿದ ಚಕ್ರವರ್ತಿಯು ಸವಾಲೊಂದನ್ನು ಹಾಕುತ್ತಾರೆ. ಆ ಸವಾಲಿನಲ್ಲಿ ಹರಗೋಬಿಂದ್ ಗೆಲುವು ಸಾಧಿಸುತ್ತಾರೆ. ನಂತರ ಬಂಧನದಲ್ಲಿದ್ದ 52 ರಾಜಕುಮಾರರನ್ನೂ ಬಂಧಮುಕ್ತಗೊಳಿಸಿ ಕರೆ ತರುತ್ತಾರೆ. ಈ ವಿಜಯೋತ್ಸವವನ್ನು ಸಿಖ್ ಜನರು ದೀಪಾವಳಿಯಂದು ಆಚರಿಸುತ್ತಾರೆ.
ಬಂದಿ ಛೋರ್ ದಿವಸ್ ಆಚರಣೆ ಹೇಗಿರುತ್ತೆ?
ಬಂದಿ ಛೋರ್ ದಿವಸ್ ಆಚರಣೆಗಳು ದೀಪಾವಳಿಯನ್ನು ಹೋಲುತ್ತವೆ. ಗುರುದ್ವಾರಗಳು ಅತಿರಂಜಿತವಾಗಿ ಬೆಳಗುತ್ತವೆ. ಅಲ್ಲಿ ಸಾವಿರಾರು ಸಿಖ್ಖರು ಮತ್ತು ಇತರ ಆರಾಧಕರು ಗೌರವಾರ್ಥವಾಗಿ ಮೇಣದಬತ್ತಿಗಳನ್ನು ಬೆಳಗಿಸುತ್ತಾರೆ. ಸ್ವಯಂಸೇವಕರು ಸಿದ್ಧಪಡಿಸಿದ ಗುರುದ್ವಾರಗಳಲ್ಲಿ ವಿಸ್ತಾರವಾದ ಔತಣಗಳು ಅಥವಾ ಲಂಗರ್‌ಗಳನ್ನು ನೀಡಲಾಗುತ್ತದೆ. ಗುರುವಿನ ವಿಜಯ ಮತ್ತು ಶೌರ್ಯವನ್ನು ಸ್ಮರಿಸಲು ಹಗಲಿನಲ್ಲಿ ನಾಗರ ಕೀರ್ತನೆ ಎಂಬ ಮೆರವಣಿಗೆ ನಡೆಯುತ್ತದೆ.