ಗೋವನ್ನು ಮಾತೆಯೆಂದು ನಾವೆಲ್ಲರೂ ಪೂಜಿಸುತ್ತೇವೆ. ಬಲಿಪಾಡ್ಯಮಿಯಂದು ಗೋಪೂಜೆಯನ್ನು ಮಾಡಲಾಗುತ್ತದೆ. ಹಿಂದೆ ಹಳ್ಳಿಗಳಲ್ಲಿ ದುಡಿಮೆಯ ಅವಿಭಾಜ್ಯ ಅಂಗವಾಗಿರುವ ಕೃಷಿಗೆ ಜಾನುವಾರುಗಳೇ ಆಧಾರವಾಗಿದ್ದವು. ಎತ್ತು, ಕೋಣಗಳನ್ನು ಗದ್ದೆ ಉಳುಮೆ ಮಾಡಲು ಬಳಸುತ್ತಿದ್ದರು. ಈಗಲೂ ಹಳ್ಳಿಗಳಲ್ಲಿ ಹೆಚ್ಚಿನ ಕಡೆ ಗದ್ದೆಯನ್ನು ಕೋಣಗಳನ್ನು ಬಳಸಿ ಉಳುಮೆ ಮಾಡುತ್ತಾರೆ.
ದೀಪಾವಳಿ (Diwali) ಸಮಯದಲ್ಲಿ ಮೂರು ದಿನ ಕೃಷಿ ಕೆಲಸಕ್ಕೆ ವಿರಾಮ ಎಂಬುದು ತುಳುನಾಡಿನ ಜನರ ನಿಯಮವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋಪೂಜೆ ಮತ್ತು ಗದ್ದೆಗಳಿಗೆ ದೀಪ ಇಡುವ ಕ್ರಮ ಬಲಿಪಾಡ್ಯಯಂದೇ ನಡೆಯುತ್ತದೆ. ಬೆಳಗ್ಗೆ ಗೋಪೂಜೆ ಮಾಡಿ ಸಂಜೆ ಗದ್ದೆಗಳಿಗೆ ದೀಪ ಇಟ್ಟು, ರಾತ್ರಿ ಜಾನುವಾರುಗಳಿಗೆ ‘ತುಡಾರ್’, (ದೀಪ) ತೋರಿಸುವ ಕ್ರಮ ಹಿಂದಿನಿಂದಲೂ ನಡೆದು ಬಂದಿದೆ.
Advertisement
Advertisement
ಗೋಪೂಜೆ ದಿನ ಬೆಳಗ್ಗೆ ಗೋವುಗಳನ್ನು ಚೆನ್ನಾಗಿ ಸ್ನಾನ ಮಾಡಿಸಿ ಸ್ವಚ್ಛಗೊಳಿಸುತ್ತಾರೆ. ಕೋಣಗಳಿಗಾದರೆ ಅವುಗಳ ಮೈ ಪೂರ್ತಿ ತೆಂಗಿನ ಎಣ್ಣೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡಿಸುತ್ತಾರೆ. ಬಳಿಕ ಶೃಂಗಾರ ಮಾಡಲಾಗುತ್ತದೆ. ಸಂಜೆಯ ವೇಳೆ ಗದ್ದೆಗಳಿಗೆ ದೀಪ ಇರಿಸಿದ ಬಳಿಕ ತುಡಾರ್ ತೋರಿಸಿ ತಲೆಗೆ ತೆಂಗಿನ ಎಣ್ಣೆ ಹಾಕಿ ಕುಂಕುಮ ಹಚ್ಚಿ ಪ್ರಾರ್ಥಿಸಲಾಗುತ್ತದೆ. ರಾತ್ರಿ ಜಾನುವಾರುಗಳಿಗೆ ಕೊರಳಿಗೆ ಹೂವಿನ ಹಾರ ಹಾಕಿ, ಸಣ್ಣ ಕರುಗಳಿಗೆ ನಾಮಕರಣವನ್ನು ಈ ದಿನ ಮಾಡುತ್ತಾರೆ. ಇದಾದ ಬಳಿಕ ರಾತ್ರಿ ಮನೆಮಂದಿಯೆಲ್ಲ ಸೇರಿ ಅಕ್ಕಿಯಿಂದ ತಯಾರಿಸಿದ ಉದ್ದಿನ ದೋಸೆಯನ್ನು ಜಾನುವಾರುಗಳಿಗೆ ನೀಡಲಾಗುತ್ತದೆ. ಮರುದಿನ ಬೆಳಗ್ಗೆ ಕೂಡ ಸಿಹಿ ನೀಡಿ ವಿಶೇಷವಾದ ಅಕ್ಕಿ ಗಂಜಿಯನ್ನು ಎಲ್ಲ ಜಾನು ವಾರುಗಳಿಗೆ ನೀಡಲಾಗುತ್ತದೆ. ಈ ಮೂಲಕ ಕರಾವಳಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ಗೋಪೂಜೆಯು ವಿಶೇಷವಾಗಿ ಆಚರಿಸಲಾಗುತ್ತದೆ. ಪ್ರದೇಶದಿಂದ ಪ್ರದೇಶಕ್ಕೆ ಆಚರಣೆಯಲ್ಲಿ ಸಣ್ಣ ಪುಟ್ಟ ಬದಲಾವಣೆಗಳು ಆಗುತ್ತವೆ.
Advertisement
Advertisement
ದೀಪಾವಳಿಯಂದು ಕೃಷ್ಣನು ನರಕಾಸುರನ ವಧೆ ಮಾಡಿದ ಮತ್ತು ಬಲಿಯನ್ನು ಉದ್ಧರಿಸಿದ ಕಾರಣ ವಿಷ್ಣು ಪೂಜೆ, ಬಲೀಂದ್ರ ಪೂಜೆ, ಧನದ ದೇವನಾದ ಕುಬೇರನ ಪೂಜೆ, ಯಮನ ಪೂಜೆ, ಗೋಪೂಜೆ, ಮಹಾಲಕ್ಷ್ಮೀ ಪೂಜೆ, ಮಹಾದೇವನ ಪೂಜೆ ಮಾಡಲಾಗುತ್ತದೆ. ಯಾಕೆಂದರೆ ಬಲಿಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಗೋವುಗಳಿಗೆ ಅತಿಯಾದ ಮಹತ್ವ ನೀಡಲಾಗುತ್ತಿತ್ತು. ಅದಕ್ಕೆ ಪೂಜೆಗಳನ್ನು, ಆರಾಧನೆಯನ್ನು ಮಾಡಲಾಗುತ್ತಿತ್ತು. ಅದರ ಸವಿನೆನಪಿಗಾಗಿ ಬಲಿಪಾಡ್ಯಮಿ ದಿವಸ ಗೋವುಗಳಿಗೆ ಪೂಜೆ ಮಾಡಲಾಗುತ್ತದೆ.