ಬೆಂಗಳೂರು/ಶಿವಮೊಗ್ಗ: ದೇಶದ ಎರಡನೇ ಅತಿ ದೊಡ್ಡ ಕೇಬಲ್ ಬ್ರಿಡ್ಜ್ ಸಿಗಂದೂರು ಸೇತುವೆ (Sigandur Bridge) ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡುವಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಕೇಂದ್ರ ಸಚಿವ ನಿತಿನ್ ಗಡ್ಕರಿಗೆ (Nitin Gadkari) ಪತ್ರ ಬರೆದಿದ್ದಾರೆ.
ಜುಲೈ 11ರಂದೇ ಸಿಎಂ ಸಿದ್ದರಾಮಯ್ಯ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ಕಾರ್ಯಕ್ರಮದ ಆಹ್ವಾನ ಮುಂಚಿತವಾಗಿ ತಿಳಿಸಿಲ್ಲ. ಬೇರೊಂದು ಪೂರ್ವ ನಿಗದಿತ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿರುವ ಕಾರಣ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಬೇರೊಂದು ದಿನಾಂಕವನ್ನು ನಿಗದಿ ಮಾಡುವಂತೆ ಕೋರಿದ್ದರು.
ನಿತಿನ್ ಗಡ್ಕರಿ ಅವರಿಗೆ ಬರೆದ ಪತ್ರವನ್ನು ಸಿಎಂ ಸಿದ್ದರಾಮಯ್ಯನವರ ಕಚೇರಿ ಈಗ ಬಿಡುಗಡೆ ಮಾಡಿದೆ. ಇದನ್ನೂ ಓದಿ: 2019 ರಲ್ಲಿ ಶಂಕು, ಇಂದು ಲೋಕಾರ್ಪಣೆ – ಸಿಗಂದೂರು ಸೇತುವೆಯನ್ನು ಉದ್ಘಾಟಿಸಲಿದ್ದಾರೆ ಗಡ್ಕರಿ
ಸಾಗರ – ಸಿಗಂದೂರು ನಡುವಿನ ಸೇತುವೆ ಉದ್ಘಾಟನಾ ಸಮಾರಂಭಕ್ಕೆ ನನ್ನನ್ನು ತಡವಾಗಿ ಆಮಂತ್ರಿಸಿದ್ದು, ಬೇರೆಡೆ ಕಾರ್ಯಕ್ರಮಗಳನ್ನು ನಾನು ಹಮ್ಮಿಕೊಂಡಿರುವುದರಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಿ, ಬೇರೊಂದು ದಿನ ಆಯೋಜಿಸಬೇಕು ಎಂದು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಇಲಾಖೆ… pic.twitter.com/VS5oCRFaLJ
— Siddaramaiah (@siddaramaiah) July 14, 2025
ಸಿಎಂ ಪತ್ರದಲ್ಲಿ ಏನಿದೆ?
ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಶಿವಮೊಗ್ಗ ಜಿಲ್ಲೆ ಸಾಗರದ ನೆಹರೂ ಕ್ರೀಡಾಂಗಣದಲ್ಲಿ ಇಂದು ಸಾಗರ – ಸಿಗಂದೂರು ನಡುವಿನ ಸೇತುವೆ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರನ್ನು ಸಹಾ ಮುದ್ರಿಸಲಾಗಿದೆ. ಆದರೆ ನನಗೆ ಈ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡದ ಕಾರಣದಿಂದ ಈಗಾಗಲೇ ನನ್ನ ಅಧ್ಯಕ್ಷತೆಯಲ್ಲಿ ವಿಜಯಪುರ (Vijayapura) ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಇಲಾಖೆಯು ಇಂತಹ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜನೆಗೆ ಮುನ್ನ ರಾಜ್ಯ ಸರ್ಕಾರವನ್ನು ಮುಂಚಿತವಾಗಿಯೇ ಸಂಪರ್ಕಿಸಿದ್ದರೆ ಮತ್ತಷ್ಟು ಸಮರ್ಪಕವಾಗಿರುತ್ತಿತ್ತು. ಮುಂದೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ಸಕಾಲದಲ್ಲಿ ಸಂಪರ್ಕಿಸುವಂತೆ ಹೆದ್ದಾರಿ ಮತ್ತು ಭೂಸಾರಿಗೆ ಇಲಾಖೆಗೆ ಸೂಚನೆ ನೀಡಬೇಕು ಎಂದು ತಮ್ಮಲ್ಲಿ ವಿನಂತಿಸುತ್ತೇನೆ. ಇದನ್ನೂ ಓದಿ: 60 ವರ್ಷಗಳ ಕನಸು ನನಸು | ಇಂದು ಸಿಗಂದೂರು ಸೇತುವೆ ಲೋಕಾರ್ಪಣೆ – ಬ್ರಿಡ್ಜ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
ಇಂದಿನ ಕಾರ್ಯಕ್ರಮವನ್ನು ಮುಂದೂಡಿ, ನಿಮಗೆ ಅನುಕೂಲವಾಗುವ ಒಂದೆರೆಡು ದಿನಾಂಕಗಳನ್ನು ನನಗೆ ಒದಗಿಸಬೇಕೆಂದು ಕೋರುತ್ತೇನೆ. ಆ ಮೂಲಕ ಇಂಥದ್ದೊಂದು ಮಹತ್ವದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ನಾನು ಕೂಡ ಭಾಗವಹಿಸಲು ಸಾಧ್ಯವಾಗಲಿದೆ.