ಬೆಂಗಳೂರು: ಸಿಗಂದೂರು ಸೇತುವೆ (Sigandur Bridge) ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaih) ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಸೇತುವೆ ಉದ್ಘಾಟನೆಗೆ ಬೇರೆ ಸಮಯ ನಿಗದ ಮಾಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ (Nitin Gadkari) ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಂದು ಆ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದಿಂದ ಯಾರು ಕೂಡಾ ಭಾಗಿಯಾಗುತ್ತಿಲ್ಲ. ನಾನೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಫೋನ್ ಮಾಡಿ ಬೇರೆ ದಿನ ನಿಗದಿ ಮಾಡುವಂತೆ ಕೇಳಿಕೊಂಡಿದ್ದೆ. ಬಳಿಕ ಪತ್ರವನ್ನು ಬರೆದಿದ್ದೆ. ಅದಕ್ಕೆ ಗಡ್ಕರಿ ಅವರು ಕಾರ್ಯಕ್ರಮ ಮುಂದಕ್ಕೆ ಹಾಕೋದಾಗಿ ಹೇಳಿದರು. ಆದರೆ ಇಲ್ಲಿನ ಬಿಜೆಪಿ ನಾಯಕರು ಅವರಿಗೆ ಒತ್ತಡ ಹಾಕಿರಬಹುದು ಅನ್ನಿಸುತ್ತೆ. ಅವರು ನನಗೆ ಏನು ಹೇಳದೇ ಮಾಡುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: 60 ವರ್ಷಗಳ ಕನಸು ನನಸು | ಇಂದು ಸಿಗಂದೂರು ಸೇತುವೆ ಲೋಕಾರ್ಪಣೆ – ಬ್ರಿಡ್ಜ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
ನಾನು ಮೊದಲೇ ನಿಗದಿಯಾಗಿರುವ ಇಂಡಿ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ. ಪ್ರತಿಭಟನಾರ್ಥವಾಗಿ ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಯಾರು ಹೋಗುತ್ತಿಲ್ಲ. ಲೋಕೋಪಯೋಗಿ ಸಚಿವರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಸಾಗರ ಶಾಸಕರು ಹೋಗ್ತಿಲ್ಲ.ಕೇಂದ್ರ ಸರ್ಕಾರದವರು ಕರೆಯಬೇಕಿತ್ತು. ಸರ್ಕಾರಗಳ ನಡುವೆ ಹೀಗೆ ತಿಕ್ಕಾಟವನ್ನು ಪ್ರಾರಂಭಿಸಿರುವುದು ಕೇಂದ್ರ ಸರ್ಕಾರವೇ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಶಿಷ್ಟಾಚಾರ ಪಾಲನೆ ಮಾಡದೇ ಉಲ್ಲಂಘನೆ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಈ ಕಾರ್ಯಕ್ರಮ ನಮ್ಮ ರಾಜ್ಯದಲ್ಲಿ ನಡೆಯುತ್ತಿದ್ದು ಒಕ್ಕೂಟ ವ್ಯವಸ್ಥೆಯಲ್ಲಿ ನಾವು ಇದ್ದೇವೆ. ಅನೇಕ ಕಾರ್ಯಕ್ರಮಗಳಿಗೆ ರಾಜ್ಯ ಸರ್ಕಾರ 75% ಹಣ ಕೊಟ್ಟರೂ ಎಲ್ಲಾ ಕಾರ್ಯಕ್ರಮಕ್ಕೆ ಕೇಂದ್ರದವರನ್ನ ಕರೆಯುತ್ತೇವೆ. ರೈಲ್ವೇಯಲ್ಲಿ ಜಾಗ, 50% ಹಣ ನಾವೇ ಕೊಡುತ್ತೇವೆ. ಕೇಂದ್ರ ಸರ್ಕಾರದವರು ಶಿಷ್ಟಾಚಾರದ ಪ್ರಕಾರ ನನ್ನನ್ನ, ಇಲಾಖೆ ಮಂತ್ರಿ, ಉಸ್ತುವಾರಿ ಮಂತ್ರಿ, ಶಾಸಕರನ್ನ ಕರೆಯಬೇಕಿತ್ತು. ಆದರೆ ಯಾರನ್ನು ಕರೆದಿಲ್ಲ ಎಂದು ಸಿಟ್ಟು ಹೊರಹಾಕಿದರು.