ಬೆಂಗಳೂರು: ಕಾಫಿ ಕಿಂಗ್ ಸಿದ್ಧಾರ್ಥ್ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನಲೆಯಲ್ಲಿ ಪ್ರಕರಣದ ತನಿಖೆ ಆರಂಭಗೊಂಡಿದ್ದು, ಬೆಂಗಳೂರಿನ ಸಿದ್ಧಾರ್ಥ್ ಅವರ ಕಚೇರಿಯಲ್ಲಿ ಮಂಗಳೂರು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.
ಮಲ್ಯ ಆಸ್ಪತ್ರೆಯ ಬಳಿಯ ಸಿದ್ಧಾರ್ಥ್ ಅವರ ಕಚೇರಿಯಲ್ಲಿ ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ. ಸುಮಾರು ಎಂಟು ಜನ ಪೊಲೀಸರು ಮಂಗಳೂರಿನಿಂದ ಬೆಂಗಳೂರಿಗೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸಿದ್ಧಾರ್ಥ್ ಅವರು ಬಳಸುತ್ತಿದ್ದ ಕಂಪ್ಯೂಟರ್ ಹಾರ್ಡ್ ಡಿಸ್ಕ್ ಪರಿಶೀಲಿಸಿ ವಶಕ್ಕೆ ಪಡೆದಿದ್ದಾರೆ. ಇದರ ಜೊತೆಯಲ್ಲಿ ಕಚೇರಿಯ ಕೆಲ ಸಿಬ್ಬಂದಿ ಬಳಿ ಮಾಹಿತಿ ಕಲೆಹಾಕುತ್ತಿದ್ದಾರೆ.
Advertisement
Advertisement
ಸಿದ್ಧಾರ್ಥ್ ಕಚೇರಿಯಿಂದ ಹೊರಡುವ ಮುನ್ನ ಯಾರನ್ನು ಭೇಟಿಯಾಗಿದ್ದರು? ಕಳೆದ ಒಂದು ವಾರದಿಂದ ಕಚೇರಿಗೆ ಯಾರೆಲ್ಲ ಬಂದಿದ್ದರು? ಯಾರ ಜೊತೆ ಎಷ್ಟು ಹೊತ್ತು ಮಾತನಾಡಿದರು? ಶುಕ್ರವಾರ ಮೈಸೂರಿಗೆ ಹೋಗುವ ಮುನ್ನ ಯಾರನ್ನು ಭೇಟಿಯಾಗಿದ್ದರು ಎಂಬುದರ ಕುರಿತು ಕೂಲಂಕುಶವಾಗಿ ಪರಿಶೀಲಿಸುತ್ತಿದ್ದಾರೆ. ಅಲ್ಲದೆ, ಸಿಬ್ಬಂದಿ ಬಳಿ ಸಹ ವಿವರ ಪಡೆಯುತ್ತಿದ್ದಾರೆ.
Advertisement
ಕಚೇರಿಯ ಮೂವರು ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಸಿದ್ಧಾರ್ಥ್ ಅವರ ಚೇಂಬರ್‍ನಲ್ಲಿದ್ದ ಕೆಲವು ದಾಖಲೆಗಳನ್ನೂ ವಶ ಪಡಿಸಿಕೊಂಡಿದ್ದಾರೆ. ಹೊರಡುವ ಮುನ್ನ ಕಚೇರಿಯಲ್ಲಿಯೂ ಏನಾದರೂ ಬರೆದಿಟ್ಟಿದ್ದಾರಾ ಎನ್ನುವ ಬಗ್ಗೆ ಪೊಲೀಸರು ಪರಿಶೀಲಿಸಿದ್ದಾರೆ. ಅವಲ್ಲದೆ, ಸಿದ್ಧಾರ್ಥ್ ಅವರ ವರ್ಕಿಂಗ್ ಡೈರಿಯನ್ನು ವಶಕ್ಕೆ ಪಡೆದಿದ್ದು, ಐಟಿ ದಾಳಿ ಸಂದರ್ಭದಲ್ಲಿನ ಕೆಲವು ಮಾಹಿತಿಯನ್ನು ಸಹ ಕಲೆಹಾಕಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ.
Advertisement
ಇಂದು ಬೆಳಗ್ಗೆ 6.30ಕ್ಕೆ ಕೆಫೆ ಕಾಫೀ ಡೇ ಸಂಸ್ಥಾಪಕ ಸಿದ್ಧಾರ್ಥ್ ಅವರ ಮೃತದೇಹ ಪತ್ತೆಯಾಗಿತ್ತು. ಸೋಮವಾರ ತಡರಾತ್ರಿಯಿಂದ ಮಂಗಳವಾರ ತಡರಾತ್ರಿಯವರೆಗೆ ನೇತ್ರಾವತಿ ನದಿ ತಟದಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು. ಆ ಬಳಿಕ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಮಧ್ಯೆ ಹೊಯಿಗೆ ಬಜಾರ್ ಎಂಬ ಪ್ರದೇಶದ ನದಿಭಾಗದಲ್ಲಿ ಮೃತದೇಹ ಪತ್ತೆಯಾಗಿತ್ತು. ಸ್ಥಳೀಯ ಮೀನುಗಾರರು ಗಮನಿಸಿ ಈ ಬಗ್ಗೆ ಮಾಹಿತಿ ನೀಡಿದ್ದರು. 36 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಸಿದ್ಧಾರ್ಥ್ ಮೃತದೇಹ ಪತ್ತೆಯಾಗಿತ್ತು.