ವಿಜಯಪುರ: ಶತಮಾನದ ಸರಳ ಸಂತ, ನಡೆದಾಡುವ ದೇವರು ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ (Siddeshwar Swamiji) ಅಂತ್ಯಕ್ರಿಯೆ (Funeral) ಸಕಲ ಸರ್ಕಾರಿ ಗೌರವಗಳೊಂದಿಗೆ ಜ್ಞಾನಯೋಗಾಶ್ರಮದ ಆವರಣದಲ್ಲಿ ನೆರವೇರಿಸಲಾಯಿತು.
Advertisement
ಜ್ಞಾನಯೋಗಾಶ್ರಮದ ಆವರಣದಲ್ಲಿ ಕಟ್ಟೆಯನ್ನು ಕಟ್ಟಿ, ಅದರ ಮೇಲೆ 6 ಅಡಿ ಅಗಲ ಹಾಗೂ 9 ಅಡಿ ಉದ್ದ ಹಾಗೂ ಒಂದುವರೆ ಎತ್ತರದ ಗದ್ದುಗೆಯನ್ನು ನಿರ್ಮಾಣ ಮಾಡಲಾಗಿತ್ತು. ಅಲ್ಲದೇ ಶ್ರೀಗಳು ತಮ್ಮ ಇಚ್ಛೆಯಂತೆಯೇ ಅಂತ್ಯಕ್ರಿಯೆ ಆಗಬೇಕು ಎಂದಿರುವ ಹಿನ್ನೆಲೆಯಲ್ಲಿ ಗದ್ದುಗೆ ಮೇಲೆ ಶ್ರೀಗಳಿಗೆ ಅಗ್ನಿ ಸ್ಪರ್ಶ ಮಾಡಲಾಯಿತು. ಸುತ್ತೂರು ಶ್ರೀಗಳು, ಕನ್ನೇರಿ ಶ್ರೀಗಳು ಮತ್ತು ಆಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿಗಳು ಸಿದ್ದೇಶ್ವರರ ಅಂತಿಮ ಸಂಕಲ್ಪವನ್ನು ಪೂರೈಸಿದರು. ಈ ಮೊದಲು ಪಾರ್ಥಿವ ಶರೀರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಚಿವರಾದ ಮುರುಗೇಶ್ ನಿರಾಣಿ, ಶ್ರೀರಾಮುಲು, ಶಶಿಕಲಾ ಜೊಲ್ಲೆ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಸೇರಿ ಹಲವು ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಈ ಮೊದಲು ಸರ್ಕಾರದಿಂದ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಪೊಲೀಸ್ ಬ್ಯಾಂಡ್ ಸೆಟ್ ಮೂಲಕ ರಾಷ್ಟ್ರಗೀತೆ ನುಡಿಸಿ ಗೌರವ ಸಲ್ಲಿಸಲಾಯಿತು. ಆ ಬಳಿಕ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಮರ್ಪಿಸಿದರು. ಇದನ್ನೂ ಓದಿ: ಸ್ವಾಮೀಜಿ ದರ್ಶನ ಮಾಡೋ ಪುಣ್ಯ ನಾನು ಪಡೆದುಕೊಂಡಿಲ್ಲ ಅನ್ನೋ ನೋವಾಗ್ತಿದೆ: ಜಮೀರ್
Advertisement
Advertisement
ಸೈನಿಕ ಶಾಲೆ ಆವರಣದಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಗೌರವ ವಂದನೆ ಬಳಿಕ ಪಾರ್ಥಿವ ಶರೀರವನ್ನು ಯೋಗಾಶ್ರಮದ ಅಂಗಲದವರೆಗೆ ಸುಮಾರು 5 ಕಿ.ಮೀ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ವೇಳೆ ಭಕ್ತವೃಂದ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಅಂತಿಮ ದರ್ಶನ ಪಡೆದುಕೊಂಡರು. ಯೋಗಾಶ್ರಮದ ಸುತ್ತ ಜನ ಸೇರಿದ್ದರು. ಭಕ್ತರಿಗೆ LED ಮೂಲಕ ಅಂತ್ಯಸಂಸ್ಕಾರ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು.
Advertisement
ಬದುಕಿನುದ್ದಕ್ಕೂ ಸರಳವಾಗಿ ಜೀವನ ಸಾಗಿಸಿ, ಸಾರ್ಥಕತೆಯ ಬದುಕು ನಡೆಸಿ ಲಕ್ಷಾಂತರ ಜನರಿಗೆ ಆದರ್ಶವಾಗಿದ್ದ ಶ್ರೀಗಳ ಪಾರ್ಥಿವ ಶರೀರವನ್ನು ವಿಜಯಪುರ ನಗರದ ಸೈನಿಕ ಶಾಲೆಯ ಆವರಣದಲ್ಲಿ ಶ್ರೀಗಳ ಅಂತಿಮ ದರ್ಶನಕ್ಕೆ ಬೆಳಗ್ಗೆಯಿಂದಲೇ ಅವಕಾಶ ಮಾಡಿಕೊಡಲಾಗಿತ್ತು. ಆದ್ರೂ ಕ್ಷಣ ಕ್ಷಣಕ್ಕೂ ಭಕ್ತರ ಸಂಖ್ಯೆಯಲ್ಲಿ ಏರಿಕೆ ಆಗುತ್ತಿತ್ತು. ಹೀಗಾಗಿ ಸಂಜೆ 5 ಗಂಟೆವರೆಗೆ ಅಂತಿಮ ದರ್ಶನಕ್ಕೆ ವಿಜಯಪುರ ಜಿಲ್ಲಾಡಳಿತ ಸಮಯ ವಿಸ್ತರಿಸಿತ್ತು. ನಡೆದಾಡುವ ದೇವರನ್ನು ನೆನೆದು ಭಕ್ತರ ಕಣ್ಣೀರು, ಗೋಳಾಟ ಮುಗಿಲುಮುಟ್ಟಿತ್ತು. ನಮ್ಮ ದೇವರಿಗೆ ಸಾವಿಲ್ಲ… ಮತ್ತೆ ಹುಟ್ಟಿ ಬನ್ನಿ ಸಿದ್ದಪ್ಪಾಜಿ ಅನ್ನೋ ಘೋಷಣೆಗಳು ಮೊಳಗಿದವು. 20 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನ ಪಡೆದರು. ಬಳಿಕ ಶ್ರೀಗಳ ಇಚ್ಛೆಯಂತೆ ಅವರು ಮಾಡಿದ ವಿಲ್ ಪ್ರಕಾರ ಅಗ್ನಿ ಸ್ಪರ್ಶ ಮಾಡಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಇದನ್ನೂ ಓದಿ: ಮಣ್ಣಿನಲ್ಲಿ ಮೂಡಿದ ಸರಳತೆಯ ಸಾಕಾರ ಮೂರ್ತಿ
ಅಂತ್ಯಸಂಸ್ಕಾರದಲ್ಲಿ ಕೇವಲ ಕುಟುಂಬಸ್ಥರು, ಗಣ್ಯರು, ಸ್ವಾಮೀಜಿಗಳಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ, ಚಿತ್ರನಟ ಡಾಲಿ ಧನಂಜಯ್, ಸೇರಿದಂತೆ ಅನೇಕ ಮಂದಿ ಅಂತಿಮ ದರ್ಶನ ಪಡೆದರು. ಬಳಿಕ ನಡೆದ ಅಂತ್ಯಸಂಸ್ಕಾರದಲ್ಲಿ ಸಿ.ಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿ.ಎಂ ಯಡಿಯೂರಪ್ಪ, ಸಚಿವರಾದ ಶ್ರೀರಾಮುಲು, ಮುರುಗೇಶ್ ನಿರಾಣಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ಮಂದಿ ಭಾಗಿಯಾಗಿದ್ದರು.
ಪ್ರವಚನ ಚೇತನರಾಗಿ, ಭಕ್ತರ ಸಿದ್ದಾಪಾಜಿಯಾಗಿ ವಿಜಯಪುರ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಪ್ರಸಿದ್ದಿಯಾಗಿದ್ರು. ಇಂತಹ ಸಂತನ ಅಗಲಿಕೆಗೆ ನಾಡಿನ ಜನ ಕಂಬನಿ ಮಿಡಿದಿದ್ದಾರೆ. ಅಂತಿಮ ದರ್ಶನಕ್ಕೆ ಭಕ್ತಸಾಗರವೇ ಹರಿದು ಬಂದಿತ್ತು. ಪ್ರವಚನಗಳಿಂದಲೇ ಕೋಟ್ಯಂತರ ಭಕ್ತರ ಬಾಳು ಬೆಳಗಿದ್ದ ಸಿದ್ದಪ್ಪಾಜಿಯ ಪಾರ್ಥಿವ ಶರೀರದ ಅಂತಿಮದರ್ಶನಕ್ಕೆ ಪ್ರವಾಹೋಪಾದಿಯಲ್ಲಿ ಜನ ಬಂದಿದ್ದರು. ಕಣ್ಣು ಹಾಯಿಸಿದ್ದು ಕಿಲೋ ಮೀಟರ್‌ಗಟ್ಟಲೇ ಜನರ ದಂಡೇ ಕಾಣಿಸುತ್ತಿತ್ತು. ಶ್ರೀಗಳ ಪಾರ್ಥಿವ ಶರೀರದ ದರ್ಶನಕ್ಕೆ ಬ್ಯಾರಿಕೇಡ್‍ಗಳನ್ನೇ ಮುರಿದು ಭಕ್ತರು ಒಳನುಗ್ಗಲು ಯತ್ನಿಸಿದ್ರು. ಕೆಲಕಾಲ ತಳ್ಳಾಟ ನೂಕಾಟವೇ ಆಯ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ಸಿದ್ದೇಶ್ವರರು ಹೊಂದಿದ್ದ ಜನಪ್ರಿಯತೆಯನ್ನು ಹಿಂದೂ-ಮುಸ್ಲಿಮ್-ಕ್ರಿಶ್ಚಿಯನ್ ಎನ್ನದೇ ಎಲ್ಲಾ ವರ್ಗದ ಜನ ಹೆಣ್ಣು-ಗಂಡೆಂಬ ಬೇಧವಿಲ್ಲದೇ, ವಯಸ್ಸಿನ ಅಂತರವಿಲ್ಲದೇ ಭಕ್ತಜನ ಸ್ವಾಮೀಜಿ ಅಂತಿಮ ದರ್ಶನಕ್ಕೆ ಬಂದಿದ್ದರು.