– ಕೂಲಿ ಕೆಲಸ ಬಿಟ್ಟು ಬಂದಿದ್ದೇವೆ, ಜನಪ್ರತಿನಿಧಿಗಳು ಬಂದಿಲ್ಲ
– ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ
ಮಡಿಕೇರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಲಾಗಿದ್ದ ಸಿದ್ದರಾಮೇಶ್ವರ ಜಯಂತಿಗೆ ಜಿಲ್ಲೆಯ ಯಾವುದೇ ಜನಪ್ರತಿನಿಧಿ ಹಾಜರಾಗದ ಹಿನ್ನೆಲೆ ಭೋವಿ ಜನಾಂಗದ ಜನರು ಕಾರ್ಯಕ್ರಮ ಬಹಿಷ್ಕರಿಸಿ, ಊಟ ಮಾಡದೆ ಹೊರನಡೆದ ಘಟನೆ ಮಡಿಕೇರಿಯಲ್ಲಿ ನಡೆದಿದೆ
ಮಡಿಕೇರಿಯ ದೇವರಾಜ ಅರಸು ಭವನದಲ್ಲಿ ಇಂದು ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಸಂಸದ ಪ್ರತಾಪ್ ಸಿಂಹ, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹರೀಶ್ ಅವರನ್ನು ಆಹ್ವಾನಿಸಲಾಗಿತ್ತು.
Advertisement
Advertisement
ಈ ಕಾರ್ಯಕ್ರಮಕ್ಕೆ ಭೋವಿ ಜನಾಂಗದ ಮುಖಂಡರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಮತ್ತು ಕಾರ್ಯಕ್ರಮದ ಭಾಷಣಕಾರರು ಹಾಜರಾಗಿದ್ದು ಬಿಟ್ಟರೆ, ಜನಪ್ರತಿನಿಧಿಯಾಗಿ ಒಬ್ಬರೂ ಭಾಗವಹಿಸಿರಲಿಲ್ಲ. ಹೀಗಾಗಿ ಕಾರ್ಯಕ್ರಮಕ್ಕೆ ಬಂದಿದ್ದ ಭೋವಿ ಜನಾಂಗದ ಜನರು ಕಾರ್ಯಕ್ರಮವನ್ನು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾವು ಕೂಲಿ ಕೆಲಸ ಬಿಟ್ಟು ಕಾರ್ಯಕ್ರಮಕ್ಕೆ ಬಂದಿದ್ದೇವೆ. ಆದರೆ ಜನಪ್ರತಿನಿಧಿಗಳು ಭಾಗವಹಿಸದೆ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.