ಬೆಂಗಳೂರು: ಸಿದ್ದರಾಮಯ್ಯ 75 ಅಮೃತ ಮಹೋತ್ಸವಕ್ಕೆ ಡಿಕೆಶಿ 23 ಉತ್ಸವ ಕೌಂಟರ್ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಪ್ರತಿಕ್ರಿಯಿಸಿದ್ದು, ನನಗೆ ಯಾವ ಉತ್ಸವವು ಬೇಡ ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಟ್ಟುಹಬ್ಬದಂದು ಬೇರೆಯವರಿಗೆ ತೊಂದರೆ ಆಗಬಾರದು ಎಂದು ಕುಟುಂಬದ ಜೊತೆ ಕೇದಾರನಾಥ್‍ಗೆ ಹೋಗಿದ್ದೆವು. ಕಾಂಗ್ರೆಸ್ ಕಾರ್ಯಕರ್ತ ರಾಜು ಬರೆದ ಪತ್ರ ವೈಯಕ್ತಿಕ ವಿಚಾರವಾಗಿದೆ. ಅದಕ್ಕೂ ನನಗೆ ಸಂಬಂಧವಿಲ್ಲ. ನಾನು ಅಧಿಕಾರ ಸ್ವೀಕರಿಸುವಾಗಲೇ ವ್ಯಕ್ತಿ ಪೂಜೆ ಬೇಡ, ಪಕ್ಷ ಪೂಜೆ ಮಾಡಿ ಎಂದು ಹೇಳಿದ್ದೇನೆ. ಇವತ್ತು ಅದನ್ನೇ ಹೇಳುತ್ತೇನೆ. ನನಗೆ ಪಾರ್ಟಿ ಉತ್ಸವ ಬೇಕು. ವಿಧಾನಸೌಧದಲ್ಲಿ ಪಾರ್ಟಿಯನ್ನು ಕೂರಿಸಬೇಕು ಎಂದರು.
ಸಿದ್ದರಾಮೋತ್ಸವಕ್ಕೆ ಕರೆದಿದ್ದಾರೆ. ನಾನು ಒಬ್ಬ ಪಕ್ಷದ ಅಧ್ಯಕ್ಷನಾಗಿದ್ದೇನೆ. ಆಗಸ್ಟ್ 3ಕ್ಕೆ ಕಾರ್ಯಕ್ರಮಕ್ಕೆ ಹೋಗುತ್ತೇನೆ. ರಾಹುಲ್ ಗಾಂಧಿ ಅವರು ಬರುತ್ತಿದ್ದಾರೆ. ನಾನೂ ಕೂಡ ಅತಿಥಿ ಎಂದು ಸಿದ್ದರಾಮೋತ್ಸವದ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗುವ ಬಗ್ಗೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಸ್ನಾನ ಮಾಡಲು ಹೋಗಿ ನದಿ ನೀರಲ್ಲಿ ಕೊಚ್ಚಿ ಹೋದ ಬೆಂಗಳೂರು ಯುವಕ
ಲಕ್ಷ್ಮೀ ಹೆಬ್ಬಾಳ್ಕರ್ ಬಿಎಸ್‍ವೈ ಭೇಟಿಗೆ ಪ್ರತಿಕ್ರಿಯಿಸಿದ ಅವರು, ವೈಯಕ್ತಿಕವೋ ಅಥವಾ ರಾಜಕೀಯ ವಿಚಾರವೋ ಗೊತ್ತಿಲ್ಲ. ಯಾವ ವಿಚಾರವಾಗಿ ಭೇಟಿಯಾಗಿದ್ದಾರೋ ನನಗೆ ಗೊತ್ತಿಲ್ಲ. ಅವರೂ ಒಬ್ಬರು ಶಾಸಕಿ, ಎಲ್ಲರೂ ಎಲ್ಲಾ ಪಾರ್ಟಿಯ ಹಿರಿಯರನ್ನ ಭೇಟಿಯಾಗ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮೋತ್ಸವ ಮಾದರಿಯಲ್ಲೇ ಶಿವಕುಮಾರೋತ್ಸವ ಮಾಡಿ – ಡಿಕೆಶಿ ಶಿಷ್ಯನಿಂದ ಪತ್ರ