ಮೈತ್ರಿ ಧರ್ಮ ನನ್ನ ಬಾಯಿ ಕಟ್ಟಿ ಹಾಕಿದೆ: ಸಿಡಿದ ಸಿದ್ದು

Public TV
2 Min Read
CM SIDDU 4

-ಕಿಡಿಗೇಡಿತನದ ಹೇಳಿಕೆಯ ಕುಖ್ಯಾತರಿಗೆ ದೇವ್ರು ಬುದ್ಧಿ ಕೊಡ್ಲಿ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಮತ್ತು ಸಚಿವ ಜಿ.ಟಿ.ದೇವೇಗೌಡರ ವಿರುದ್ಧ ಸಿಡಿದೆದ್ದು, ಟ್ವಿಟ್ಟರ್ ನಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯನವರು ಬೇಜವಾಬ್ದಾರಿ ಹೇಳಿಕೆಗಳ ಬಗ್ಗೆ ಜೆಡಿಎಸ್ ವರಿಷ್ಠರು ಗಮನ ಹರಿಸುವುದು ಒಳಿತು ಎಂದು ಬರೆದುಕೊಂಡಿದ್ದಾರೆ.

ಟ್ವೀಟ್ 1: ಜೆಡಿಎಸ್ ಅಧ್ಯಕ್ಷ ಎಚ್.ವಿಶ್ವನಾಥ್ ಹೊಟ್ಟೆಕಿಚ್ಚಿನ ಮಾತುಗಳನ್ನು ಸಮನ್ವಯ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ. ಮೊದಲು ಜಿ.ಟಿ.ದೇವೇಗೌಡ,ಈಗ ವಿಶ್ವನಾಥ್… ಮುಂದೆ ಯಾರು ಗೊತ್ತಿಲ್ಲ. ನನ್ನನ್ನು ಗುರಿಯಾಗಿಸಿದ ಇಂತಹ ಬೇಜವಾಬ್ದಾರಿ ಹೇಳಿಕೆಗಳ ಬಗ್ಗೆ ಜೆಡಿಎಸ್ ವರಿಷ್ಠರು ಗಮನ ಹರಿಸುವುದು ಒಳಿತು.

ಟ್ವೀಟ್ 2: ಸಮ್ಮಿಶ್ರ ಸರ್ಕಾರದಲ್ಲಿ ಪಾಲಿಸಬೇಕಾದ ಮೈತ್ರಿಧರ್ಮ ನನ್ನ ಬಾಯಿ ಕಟ್ಟಿಹಾಕಿದೆ. ಇದರಿಂದಾಗಿ ಎಚ್.ವಿಶ್ವನಾಥ್ ಅವರ ಬೇಜವಾಬ್ದಾರಿಯುತ ಹೇಳಿಕೆಗಳಿಗೆ ವಿವರವಾಗಿ ಪ್ರತಿಕ್ರಿಯಿಸಲಾರೆ. ವಿಶ್ವನಾಥ್ ಇಂತಹ ಕಿಡಿಗೇಡಿತನದ ಹೇಳಿಕೆಗಳಿಗೆ ಕುಖ್ಯಾತರು. ಅವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ.

ಹೆಚ್ ವಿಶ್ವನಾಥ್ ಹೇಳಿದ್ದೇನು?
ಕಾಂಗ್ರೆಸ್ ತನ್ನ ಅವಧಿಯಲ್ಲಿ ಒಳ್ಳೆಯ ಆಡಳಿತ ಕೊಟ್ಟಿದ್ದರೆ ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ 120 ಇದ್ದ ಸಂಖ್ಯಾಬಲ ಈ ಬಾರಿಯ ಚುನಾವಣೆಯಲ್ಲಿ ಏಕೆ 78ಕ್ಕೆ ಇಳಿಯಿತು ಎಂದು ಪ್ರಶ್ನೆ ಮಾಡುವ ಮೂಲಕ ಮತ್ತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು.

Siddu H.Vishwanath

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದು ಕೆಲ ಕಾಂಗ್ರೆಸ್ ನಾಯಕರು ಚಮಚಾ ಗಿರಿ ಮಾಡುತ್ತಿದ್ದಾರೆ ಅಷ್ಟೇ. ಸಿದ್ದರಾಮಯ್ಯ 5 ವರ್ಷ ತನ್ನ ಆಡಳಿತದಲ್ಲಿ ಏನ್ ಮಾಡಿದ್ದಾರೆ? ಒಳ್ಳೆಯ ಆಡಳಿತ ನೀಡಿದ ದೇವರಾಜ ಅರಸು ಅವರನ್ನು ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ. ಸಿದ್ದರಾಮಯ್ಯ ಏನು ದೇವರಾಜ ಅರಸು ಅವರ ರೀತಿಯಲ್ಲಿ ಆಡಳಿತ ನಡೆಸಿದ್ದಾರಾ ಎಂದು ವಿಶ್ವನಾಥ್ ಪ್ರಶ್ನಿಸಿದ್ದರು.

ಜಿಟಿಡಿ ಹೇಳಿದ್ದೇನು?
ಮೈತ್ರಿ ವಿಚಾರದಲ್ಲಿ ಒಂದು ಕಡೆ ತಪ್ಪಾಗಿಲ್ಲ. ಎರಡು ಕಡೆ ಪಕ್ಷದಿಂದಲೂ ತಪ್ಪಾಗಿದೆ. ಆಯಾ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕಿತ್ತು. ಆದರೆ ಯಾವ ಕ್ಷೇತ್ರಕ್ಕೆ ಯಾವ ಅಭ್ಯರ್ಥಿ ಎಂಬ ತೀರ್ಮಾನವೇ ಬಹಳ ದಿನ ನಡೆಯಿತು. ಹೀಗಾಗಿ ಮೈತ್ರಿ ಮಾಡಿಕೊಳ್ಳವ ತೀರ್ಮಾನದಲ್ಲಿ ಬಹಳ ತಡವಾಯಿತು. ತಡವಾಗಿ ಮೈತ್ರಿ ಮಾಡಿಕೊಂಡ ಕಾರಣ ಪಕ್ಷದ ಕಾರ್ಯಕರ್ತರ ನಡುವಿನ ಜಿದ್ದಾಜಿದ್ದು ಸರಿ ಮಾಡಲು ಯಾರಿಂದಲೂ ಆಗಲಿಲ್ಲ ಎಂದು ಸಚಿವ ಜಿಟಿ ದೇವೇಗೌಡರು ಹೇಳಿದ್ದರು.

siddu GTD

ಲೋಕಸಭಾ ಚುನಾವಣೆಯ ಮುನ್ನವೇ ನಮ್ಮ ನಾಯಕರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದರೆ ಈ ರೀತಿ ತಪ್ಪು ಆಗುತ್ತಿರಲಿಲ್ಲ. ಜೊತೆಗೆ ಹೆಚ್ಚು ಅನುಕೂಲವಾಗುತ್ತಿತ್ತು. ಆದರೂ ಕೆಲವು ಕಡೆ ಚೆನ್ನಾಗಿ ಮಾಡಿದ್ದಾರೆ. ನಮ್ಮ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಉದ್ಭೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿಸಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆ ರೀತಿಯಲ್ಲೇ ಹಳೆಯ ಜಿದ್ದಿನಂತೆ ಕಾರ್ಯಕರ್ತರು ಕೆಲಸ ಮಾಡಿದ್ದಾರೆ ಎಂದಿದ್ದರು.

Share This Article
Leave a Comment

Leave a Reply

Your email address will not be published. Required fields are marked *