ಬೆಂಗಳೂರು: ರಾಜೀನಾಮೆ ಅಂಗೀಕಾರವೇ ಆಗಿಲ್ಲ. ಹೀಗಾಗಿ ಸರ್ಕಾರಕ್ಕೆ ಏನು ಆಗುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಮಾಜಿ ಸಿಎಂ, ನಾನು ಈಗ ಟಿವಿಯಲ್ಲಿ ಸುದ್ದಿ ನೋಡಿದೆ. ನಮ್ಮ ಶಾಸಕರಿಗೆ ಫೋನ್ ಮಾಡಿದರೆ ಸಂಪರ್ಕಕ್ಕೆ ಸಿಗುತ್ತಿಲ್ಲ. ಸ್ಪೀಕರ್ ರಮೇಶ್ ಕುಮಾರ್ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ಒಟ್ಟು 11 ಮಂದಿ ಶಾಸಕರ ರಾಜೀನಾಮೆ ಪತ್ರ ಬಂದಿವೆ. ಯಾವ ಶಾಸಕರೂ ನನಗೆ ಮೊದಲೇ ಮಾಹಿತಿ ನೀಡಿ ಕಚೇರಿಗೆ ಬಂದಿಲ್ಲ. ಒಂದು ವೇಳೆ ತಿಳಿಸಿದ್ದರೆ ಕಚೇರಿಯಲ್ಲಿ ಇರುತ್ತಿದ್ದೆ ಅಂತ ಹೇಳಿದ್ದಾರೆ. ಹೀಗಾಗಿ ಮಂಗಳವಾರ ರಾಜೀನಾಮೆ ಅಂಗೀಕಾರದ ಬಗ್ಗೆ ಚರ್ಚೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ರಾಜೀನಾಮೆ ಅಂಗೀಕಾರವೇ ಆಗದ ಕಾರಣ ಸರ್ಕಾರಕ್ಕೆ ಏನು ಆಗುವುದಿಲ್ಲ ಎಂದು ತಿಳಿಸಿದರು.
Advertisement
Advertisement
ಮುಂದಿನ ನಡೆ ಏನು ಎಂಬ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಮಾಜಿ ಸಿಎಂ, ಸಚಿವ ಡಿ.ಕೆ.ಶಿವಕುಮಾರ್ ಅವರು ತಮ್ಮ ಕಾರಿನಲ್ಲಿ ಶಾಸಕರಾದ ಮುನಿರತ್ನ, ಭೈರತಿ ಬಸವರಾಜು, ಎಸ್.ಟಿ.ಸೋಮಶೇಖರ್ ಹಾಗೂ ರಾಮಲಿಂಗಾ ರೆಡ್ಡಿ ಅವರನ್ನು ನಿವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ. ಅವರ ಜೊತೆಗೆ ಮಾತುಕತೆ ನಡೆಸಿ, ಮನವೊಲಿಸುತ್ತಿದ್ದಾರೆ. ಉಳಿದವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಮೈತ್ರಿ ಸರ್ಕಾರಕ್ಕೆ ಏನೂ ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
ರಾಜ್ಯದಲ್ಲಿ ರಾಜೀನಾಮೆ ಪರ್ವ ಆರಂಭವಾಗುತ್ತಿದ್ದಂತೆ ಮಾಜಿ ಸಿಎಂ ಕಾಂಗ್ರೆಸ್ ಸಭೆ ಕರೆದಿದ್ದಾರೆ. ಇತ್ತ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.