ಬೆಳಗಾವಿ: ನಗರದಲ್ಲಿನ ಬಡವರ್ಗದ ಕೂಲಿ ಕಾರ್ಮಿಕರ ಹೊಟ್ಟೆ ತುಂಬಿಸುವ ನಿಟ್ಟಿನಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್ ಜಾರಿಗೆ ತಂದಿತ್ತು. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿದೆ. ಆದರೆ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷಿ ಯೋಜನೆಯನ್ನು ಈಗಿನ ಸರ್ಕಾರ ಕಡೆಗಣಿಸುತ್ತಿದ್ದು, ಕಳೆದ ನಾಲ್ಕು ತಿಂಗಳಿನಿಂದ ಇಂದಿರಾ ಕ್ಯಾಂಟಿನ್ ಗಳಿಗೆ ಒಂದು ಪೈಸೆ ಹಣವನ್ನೂ ಸರ್ಕಾರದಿಂದ ಬಿಡುಗಡೆ ಮಾಡಿಲ್ಲ. ಈ ಹಣವನ್ನೆಲ್ಲಾ ಪಾಲಿಕೆಯವರೇ ಭರಿಸಬೇಕೆಂದು ಹೇಳಿದ್ದು, ಲಾಸ್ ನಲ್ಲಿರುವ ಪಾಲಿಕೆ ಹಣ ನೀಡುತ್ತಿಲ್ಲ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ಅತೀ ಕಡಿಮೆ ದರದಲ್ಲಿ ಹಸಿದ ಬಡ ಕೂಲಿ ಕಾರ್ಮಿಕರಿಗೆ ಹೊಟ್ಟೆ ತುಂಬಿಸುತ್ತಿದ್ದ ಇಂದಿರಾ ಕ್ಯಾಂಟಿನ್ ಸದ್ಯ ಬಂದ್ ಆಗುವ ಹಂತಕ್ಕೆ ಬಂದು ನಿಂತಿವೆ. ಸಮ್ಮಿಶ್ರ ಸರ್ಕಾರದಲ್ಲಿ ಅನುದಾನ ನೀಡಲು ಆಗದೆ ಆ ಹೊಣೆಯನ್ನ ಆಯಾ ಜಿಲ್ಲಾ ಮಹಾನಗರ ಪಾಲಿಕೆಯವರ ಹೆಗಲ ಮೇಲೆ ಹಾಕಿದ್ದಕ್ಕೆ ಅನುದಾನ ಕೊರತೆಯಿಂದಾಗಿ ನಾಲ್ಕರಿಂದ ಆರು ತಿಂಗಳವರೆಗಿನ ಹಣ ಬಾಕಿ ಉಳಿಸಿಕೊಂಡಿವೆ. ಸದ್ಯ ಬೆಳಗಾವಿ ನಗರವೊಂದರಲ್ಲೇ 6 ಇಂದಿರಾ ಕ್ಯಾಂಟೀನ್‍ಗಳಿದ್ದು ಒಂದೂವರೆ ವರ್ಷದಿಂದ ಆರಂಭವಾಗಿರುವ ಈ ಕ್ಯಾಂಟೀನ್ ಗಳಿಗೆ ಆಗಾಗ ಮೂರ್ನಾಲ್ಕು ತಿಂಗಳು ಹಣ ನೀಡಿದ್ದನ್ನ ಬಿಟ್ಟರೆ ಇಲ್ಲಿವರೆಗೂ ಒಂದು ಪೈಸೆಯೂ ಬಿಡುಗಡೆ ಮಾಡಿಲ್ಲ.
Advertisement
Advertisement
ಈ ಸ್ಥಿತಿ ಕೇವಲ ಬೆಳಗಾವಿ ಜಿಲ್ಲೆಯಲ್ಲಿ ಮಾತ್ರ ನಿರ್ಮಾಣವಾಗಿಲ್ಲ, ಇಡೀ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಗಳಿಗೆ ಹಣ ಬಿಡುಗಡೆಯಾಗಿಲ್ಲ ಎಂಬುದು ವಿಶೇಷ. ಬಡ ಕೂಲಿ ಕಾರ್ಮಿಕರ ಹೊಟ್ಟೆ ತುಂಬಿಸುತ್ತಿದ್ದ ಇಂದಿರಾ ಕ್ಯಾಂಟೀನ್ ಗಳು ಸದ್ಯ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದು ಹೀಗೆ ಮುಂದುವರಿದಿದ್ದೇ ಆದರೆ ಇನ್ನೆರಡು ತಿಂಗಳಲ್ಲಿ ಕದ ಹಾಕುವ ಸ್ಥಿತಿಗೆ ಇಂದಿರಾ ಕ್ಯಾಂಟೀನ್ ಗಳು ಬರಬಹುದು. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ನೇರವಾಗಿ ಸರ್ಕಾರವೇ ಇಂದಿರಾ ಕ್ಯಾಂಟೀನ್ ಗಳಿಗೆ ಅನುದಾನ ಬಿಡುಗಡೆ ಮಾಡಿ ರೈತರ ಹೊಟ್ಟೆ ತುಂಬಿಸುತ್ತಿರುವ ಕ್ಯಾಂಟೀನ್ ಗಳನ್ನ ಉಳಿಸುವ ಕೆಲಸ ಮಾಡಬೇಕೆಂದು ಸಾರ್ವಜನಿಕರ ಆಗ್ರಹಿಸುತ್ತಿದ್ದಾರೆ.
Advertisement
ಇಂದಿರಾ ಕ್ಯಾಂಟೀನ್ ನಲ್ಲಿ ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟ ನೀಡಲಾಗುತ್ತಿದ್ದು ಒಂದು ಬಾರಿಗೆ ಸುಮಾರು 500 ಪ್ಲೇಟ್ ಗಳನ್ನ ನೀಡಲಾಗುತ್ತದೆ. ಪ್ರತಿ ದಿನ ಒಂದು ಇಂದಿರಾ ಕ್ಯಾಂಟೀನ್ ಗೆ 97 ಸಾವಿರ ರೂಪಾಯಿ ಖರ್ಚಾಗುತ್ತಿದ್ದು ಇದರ ಹಣವನ್ನ ಪಾಲಿಕೆಯವರೇ ಭರಿಸಬೇಕೆಂದು ಸರ್ಕಾರ ಸೂಚನೆ ನೀಡಿದೆ.
ಬೆಳಗಾವಿಯಲ್ಲಿ ಆರು ಇಂದಿರಾ ಕ್ಯಾಂಟೀನ್ ಗಳಿದ್ದು ತಿಂಗಳಿಗೆ 30 ಲಕ್ಷ ರೂ. ಕ್ಯಾಂಟೀನ್ ನಡೆಸಲು ಬೇಕಾಗುತ್ತದೆ. ಅನುದಾನ ಕೊರತೆ ಹಿನ್ನೆಲೆಯಲ್ಲಿ ನಾಲ್ಕರಿಂದ ಆರು ತಿಂಗಳಿನಿಂದ ಪಾಲಿಕೆಯವರು ಪೇಮೆಂಟ್ ನೀಡಿಲ್ಲ. ಆದರೂ ಕ್ಯಾಂಟೀನ್ ಬಂದ್ ಮಾಡದೇ ಇನ್ನೂ ಕೂಡ ನಡೆಸುವ ಪ್ರಯತ್ನ ಗುತ್ತಿಗೆದಾರರು ಮಾಡುತ್ತಿದ್ದಾರೆ. ಇತ್ತ ಬೆಳಗಾವಿ ಮಹಾನಗರ ಪಾಲಿಕೆ ಕೂಡ ನಷ್ಟದಲ್ಲಿದ್ದೂ ಅಂದಾಜು ಒಂದೂವರೆ ಕೋಟಿ ಹಣ ಪಾಲಿಕೆ ಬಾಕಿ ಉಳಿಸಿಕೊಂಡಿದೆ.
ಒಂದು ವರ್ಷಕ್ಕೆ ಸುಮಾರು 3ಕೋಟಿಗೂ ಅಧಿಕ ಹಣ ಈ ಇಂದಿರಾ ಕ್ಯಾಂಟೀನ್ ಗೆ ಹೊರೆಯಾಗುತ್ತಿದ್ದು ಇದರಿಂದ ನಗರದಲ್ಲಿ ಮಹತ್ತರ ಕಾಮಗಾರಿಗಳನ್ನ ಕೈಗೆತ್ತಿಕೊಳ್ಳಲು ಕೂಡ ಪಾಲಿಕೆ ಯೋಚಿಸಬೇಕಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನ ಕೇಳಿದರೆ, ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಗಳಿಗೆ ಹಣ ಬಿಡುಗಡೆ ಆಗಿಲ್ಲ ಎಂಬುದು ಗೊತ್ತಾಗಿದೆ. ಈ ಕೂಡಲೇ ಸಿಎಂ ಕುಮಾರಸ್ವಾಮಿ ಮತ್ತು ಸಂಬಂಧ ಪಟ್ಟ ಇಲಾಖೆಯ ಸಚಿವರ ಜೊತೆಗೆ ಚರ್ಚೆ ಮಾಡಿ ಅನುದಾನ ಬಿಡುಗಡೆ ಮಾಡುವಂತೆ ಹೇಳುತ್ತೆನೆ ಎಂದು ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ ರಾಜ್ಯಾದ್ಯಾಂತ ಹಣದ ಕೊರತೆಯಿಂದ ಇಂದಿರಾ ಕ್ಯಾಂಟೀನ್ ಗಳು ಬಳಲುತ್ತಿವೆ. ಇತ್ತ ಲಾಸ್ ನಲ್ಲಿರುವ ಪಾಲಿಕೆಗಳು ನಾಲ್ಕು ದಿನ ಹಣ ಕೊಟ್ಟ ಹಾಗೇ ಮಾಡಿ ಈಗ ತಮ್ಮ ಖಜಾನೆಯಲ್ಲಿ ಹಣ ಇಲ್ಲ ಎಂದು ಹೇಳಿ ಸೈಲೆಂಟ್ ಆಗಿದ್ದಾರೆ. ಹಣ ಬಿಡುಗಡೆಗೊಳಿಸಬೇಕಿದ್ದ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಕ್ಯಾಂಟೀನ್ ಗಳಿಗೆ ಜೀವ ತುಂಬುತ್ತಾ ಅಥವಾ ಇದರಲ್ಲೂ ರಾಜಕೀಯ ಮಾಡಿ ಬಂದ್ ಮಾಡಿಸುತ್ತಾ ಎಂಬುದನ್ನ ಕಾದುನೋಡಬೇಕಿದೆ.