ಬೆಂಗಳೂರು: ಆರ್‍ಎಸ್‍ಎಸ್(RSS) ವಿರುದ್ಧ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ತಮ್ಮ ಟೀಕೆ ಮುಂದುವರಿಸಿದ್ದಾರೆ. ರಾಜ್ಯದಲ್ಲಿ ಪೊಲೀಸ್ ಇಲಾಖೆ ಕೂಡ ಕೇಸರಿಕರಣ ಆಗ್ತಿದೆ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿರೋ ಸಿದ್ದರಾಮಯ್ಯ, ಪಕ್ಷದವರು, ಆರ್‍ಎಸ್‍ಎಸ್‍ನವರು ಬೇಕಾದ್ದು ಮಾಡಿಕೊಳ್ಳಲಿ. ಆದರೆ ಸರ್ಕಾರಿ ಅಧಿಕಾರಿಗಳು, ಸರ್ಕಾರಿ ಇಲಾಖೆಗಳನ್ನೇ ಕೇಸರಿಕರಣ ಮಾಡೋದು ಎಷ್ಟು ಸರಿ..? ಹೀಗಾಗಿ ಕೇಸರಿ ಜೊತೆ ತ್ರಿಶೂಲವನ್ನೂ ಕೈಯಲ್ಲಿ ಕೊಟ್ಟುಬಿಡಿ ಅಂದಿದ್ದೆ ಅಂತ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಭಾರತ ದೇಶದ ಹಿಂದುತ್ವದ ಸಂಕೇತ ಕೇಸರಿ – ಸಿದ್ದರಾಮಯ್ಯಗೆ ಮುನಿರತ್ನ ಟಾಂಗ್
ಸಿದ್ದರಾಮಯ್ಯ ವಿರುದ್ಧ ಸಿಡಿದಿರೋ ಸಚಿವ ಮುನಿರತ್ನ, ಪೊಲೀಸ್ ಠಾಣೆಯಲ್ಲಿ ಕೇಸರಿ ಶಾಲು ಹಾಕಿಕೊಂಡಿದ್ದರೆ ತಪ್ಪೇನಿದೆ..? ಕೇಸರಿ ಶಾಲಲ್ಲಿ ನಮ್ಮ ಪಕ್ಷದ ಚಿಹ್ನೆ ಇತ್ತಾ..? ಆರ್‍ಎಸ್‍ಎಸ್‍ನವರು ದೇಶದ್ರೋಹದ ಕೆಲಸ ಮಾಡಿದ್ದಾರಾ..? ಚುನಾವಣೆ ಬಂದಾಗ ಮಾತ್ರ ರಾಜಕೀಯಕ್ಕೋಸ್ಕರ ಈ ರೀತಿ ಹೇಳಿಕೆ ಕೊಡ್ತಿದ್ದೀರಿ ಅಷ್ಟೇ ಅಂತ ಮುನಿರತ್ನ ಜರಿದಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ಅವರನ್ನು ಯಾವ ಸಮುದ್ರಕ್ಕೆ ಎಸೆದಿದ್ದೀರಿ: ಬಿಜೆಪಿಗೆ ಡಿಕೆಶಿ ಪ್ರಶ್ನೆ
ಇತ್ತ ಯುನಿವರ್ಸಿಟಿಗಳಲ್ಲಿ ಆರ್‍ಎಸ್‍ಎಸ್ ಸಿಂಡಿಕೇಟ್ ಇದೆ. ಕೆಲಸ ಆಗಬೇಕಾದರೆ ಲಕ್ಷ ಲಕ್ಷ ತೆಗೆದುಕೊಳ್ತಾರೆ ಅಂತ ಆರೋಪಿಸಿದ್ದ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಕಿಡಿಕಾರಿದೆ. ನಿಮ್ಮ ತಪ್ಪು, ವೈರುಧ್ಯ, ಸಮಯಸಾಧಕತನವನ್ನು ಅನ್ಯರ ನಿಂದನೆಯ ಮೂಲಕ ಮುಚ್ಚಿಕೊಳ್ಳಲು ಸಾಧ್ಯವೇ..? ಕಾಗೆ ಗಂಗಾ ಸ್ನಾನ ಮಾಡಿದರೆ ಬಿಳುಪಾಗುವುದೇ, ಕುಮಾರಸ್ವಾಮಿ..? ಕುಮಾರಸ್ವಾಮಿ ಅವರೇ, ‘ವೃದ್ಧನಾರಿ ಪತಿವ್ರತಾ’ ಎಂಬ ಮಾತು ಗೊತ್ತೇ..? ನಿಮ್ಮ ಸ್ಥಿತಿಯೂ ಹಾಗಾಗಿದೆ. ಅವಕಾಶ ಸಿಕ್ಕಾಗಲೆಲ್ಲ ಗುಟ್ಟಿನಲ್ಲಿ ತಪ್ಪು ಮಾಡುವುದು. ಬಳಿಕ ಗರತಿಯ ಸೋಗು ಹಾಕುವುದು ನಿಮ್ಮ ಹಳೇ ಚಾಳಿ. ಕೆಪಿಎಸ್‍ಸಿ ಕರ್ಮಕಾಂಡದ ರೂವಾರಿಯಾಗಿರುವ ನೀವು ಈಗ ಊರಿಗೆ ಉಪದೇಶ ಕೊಡುವಂತಾಗಿರುವುದೇ ಕಾಲದ ಚೋದ್ಯ. ತಮಗೆ ಬೇಕಾದ ವ್ಯಕ್ತಿಗಳ ಕುಟುಂಬದ ಸದಸ್ಯರಿಗೆ ಅಕ್ರಮವಾಗಿ ಸರ್ಕಾರಿ ನೌಕರಿ ಒದಗಿಸಿದ್ದವರು ಯಾರು..? ಇವರಿಗೆಲ್ಲ ನೀವು ತರಬೇತಿ ನೀಡಿದ್ದೆಲ್ಲಿ..? ಪದ್ಮನಾಭ ನಗರದಲ್ಲೋ, ಕೇತಗಾನ ಹಳ್ಳಿಯ ತೋಟದ ಮನೆಯಲ್ಲೋ..? ಅಂತ ಟ್ವೀಟ್‍ನಲ್ಲಿ ಲೇವಡಿ ಮಾಡಿದೆ.