2013 ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯನವರು (Siddaramaiah) ಅನೇಕ ಜನಪರ, ಬಡವರ ಪರ ಯೋಜನೆಗಳನ್ನು ಜಾರಿಗೆ ತಂದರು. ಬಡಜನರಿಗೆ ಹಲವು ಭಾಗ್ಯಗಳನ್ನೇ ನೀಡಿದರು. ಅದರಲ್ಲಿ ಪ್ರಮುಖವಾದದ್ದು ಅನ್ನಭಾಗ್ಯ. ರೈತ ಕುಟುಂಬದಿಂದ ಬಂದ ಸಿದ್ದರಾಮಯ್ಯನವರು ಅಪ್ಪಟ ಹಳ್ಳಿಹೈದ. ತನ್ನ ಸುತ್ತಲಿನ ಬಡತನ, ಅನಕ್ಷರತೆ, ಶೋಷಣೆ, ಮೂಢನಂಬಿಕೆ, ಜನರ ಸಂಕಷ್ಟ, ನೋವು-ನಲಿವುಗಳನ್ನು ಕಣ್ಣಾರೆ ಕಂಡವರು. ಅವರೇ ಹೇಳಿಕೊಳ್ಳುವಂತೆ, “ಇಂಥ ದುಃಸ್ಥಿತಿಯ ವಾತಾವರಣ ನನ್ನೊಳಗೆ ನೋವು, ಸಿಟ್ಟು ಹೆಪ್ಪುಗಟ್ಟದೆ ಹೋಗಿದ್ದರೆ, ಬಹುಶಃ ನಾನು ರಾಜಕೀಯಕ್ಕೆ ಬರುತ್ತಿರಲಿಲ್ಲ”. ಇವುಗಳೆಲ್ಲಾ ಕಣ್ಣೆದುರಿಗೆ ಬಂದಾಗ, ಈ ಸಾಮಾಜಿಕ ಸ್ಥಿತಿ ಯಾವ ತೆರನದು? ಅದರ ಫಲಾನುಭವತೆ ಯಾವ ಸ್ವರೂಪದ್ದು? ಈ ಸಾಮಾಜಿಕ ನ್ಯಾಯ ಸ್ಥಿರತೆಗೊಳಿಸುವುದು ಹೇಗೆ? ನೊಂದವರ, ಶೋಷಿತರ, ಬಡವರ ಮಡಿಲಿಗೆ ತಲುಪಿಸುವುದು ಹೇಗೆ? ಸಮಸಮಾಜ ನಿರ್ಮಾಣದ ಬಗೆಗೆ ಅವರ ಮನ ಸದಾ ತುಡಿಯುತ್ತಲೇ ಇತ್ತು.
ಸಿದ್ದರಾಮಯ್ಯ ಅವರು ಅನ್ನಭಾಗ್ಯ (Anna Bhagya Scheme) ಯೋಜನೆ ಪ್ರಕಟಿಸಿದಾಗ ಗ್ರಾಮೀಣ ಭಾಗದ ಬಡಜನರು ಸಂತೋಷ ಪಟ್ಟರು. ಆದರೆ ಕೆಲವರು ಈ ಯೋಜನೆ ವಿರುದ್ಧ ಕುಹಕದ ಮಾತುಗಳನ್ನಾಡಿದ್ದರು. “ಜನರನ್ನು ಸೋಂಬೇರಿಗಳನ್ನಾಗಿ ಮಾಡುತ್ತೀರಿ. ಈ ಭಾಗ್ಯಗಳಿಗೆ ಹಣ ಎಲ್ಲಿಂದ ತರುತ್ತೀರಿ” ಎಂದೆಲ್ಲ ಪ್ರಶ್ನೆ ಮಾಡಿದ್ದರು. ಎಲ್ಲಾ ಕುಹಕ, ಲೇವಡಿ ಮಾತುಗಳನ್ನು ಸಹಿಸಿಕೊಂಡು ಸಿದ್ದರಾಮಯ್ಯ ತಾವು ನೀಡಿದ ಭರವಸೆಗಳಿಗೆ ಬದ್ಧರಾಗಿ ಯೋಜನೆ ಜಾರಿಗೆ ತಂದರು. ಬಹುಮುಖ್ಯವಾಗಿ ಅವರು ಅನ್ನಭಾಗ್ಯ ಜಾರಿಗೆ ತರಲು ಆ ಒಂದು ಘಟನೆ ಪ್ರಮುಖ ಕಾರಣವಾಗಿತ್ತು. ಇದನ್ನೂ ಓದಿ: ತಂದೆಗೆ ಮಗ ಡಾಕ್ಟರ್ ಆಗ್ಬೇಕು ಅನ್ನೋ ಆಸೆ; ಆದ್ರೆ ಸಿದ್ದು ಆಗಿದ್ದು ವಕೀಲ, ಮಾಡಿದ್ದು ರಾಜಕೀಯ
Advertisement
Advertisement
ಅಪ್ಪಟ ಹಳ್ಳಿಹೈದ ಹುಡುಗನಾಗಿದ್ದ ಸಿದ್ದರಾಮಯ್ಯ ತನ್ನ ಸುತ್ತಮುತ್ತಲ ಜನರ ಕಷ್ಟ-ಕಾರ್ಪಣ್ಯಗಳನ್ನು ಕಣ್ಣಾರೆ ಕಂಡು ಬೆಳೆದವರು. “ಚಿಕ್ಕ ಹುಡುಗನಾಗಿದ್ದಾಗ 2 ಘಟನೆಗಳು ನನ್ನ ಜೀವನದಲ್ಲಿ ದೊಡ್ಡ ಪರಿಣಾಮ ಬೀರಿದರು. ನಮ್ಮ ಊರಿನಲ್ಲಿ ಬಹಳ ಜನರಿಗೆ ಕುಷ್ಕಿ ಜಮೀನು ಇತ್ತು. ಕೆಲವೇ ಜನರಿಗೆ ಮಾತ್ರ ತರೀ ಜಮೀನು ಇತ್ತು. ಭತ್ತ ಬೆಳೆಯುತ್ತಿದ್ದವರು ಅವರ ಮನೆಯಲ್ಲಿ ಆಗಾಗ ಅನ್ನ ಮಾಡಿಕೊಂಡು ತಿನ್ನುತ್ತಿದ್ದರು. ಕುಷ್ಕಿ ಜಮೀನು ಇದ್ದವರು, ಹಬ್ಬ-ಹರಿದಿನಗಳಲ್ಲಿ ನೆಂಟರು ಬಂದಾಗ ಮಾತ್ರ ಅನ್ನ ಮಾಡಿಕೊಂಡು ತಿನ್ನುತ್ತಿದ್ದರು. ಇವರ ಮನೆಯಲ್ಲಿ ಮಕ್ಕಳಿಗೆ ಸಣ್ಣಪುಟ್ಟ ಕಾಯಿಲೆ ಅಥವಾ ಜ್ವರ ಬಂದರೆ, ಅನ್ನ ಮಾಡುವವರ ಮನೆ ಬಳಿ ಹೋಗಿ ಅನ್ನಕ್ಕಾಗಿ ಕಾಯುತ್ತಿದ್ದರು. ಜ್ವರ ಬಂದವರಿಗೆ, ಕಾಯಿಲೆ ಇದ್ದವರಿಗೆ ಮುದ್ದೆ ತಿನ್ನಿಸೋಕೆ ಆಗಲ್ಲ. ಆಗ ಒಂದಿಷ್ಟು ಅನ್ನಕ್ಕೆ ಬೇರೆಯವರ ಮನೆಯಲ್ಲಿ ಬೇಡುತ್ತಿದ್ದರು. ಏನಪ್ಪ ಇದು.. ಸಮಾಜದಲ್ಲಿ ಹೀಗೆಲ್ಲ ಪರಿಸ್ಥಿತಿ ಇದೆಯಲ್ಲಾ? ಮಕ್ಕಳಿಗೆ ಅನ್ನ ಕೊಡಲು ಜನ ಕಷ್ಟ ಪಡ್ತಾರಲ್ಲ ಅಂತ ಯೋಚಿಸಿದ್ದೆ. ಇಂತಹ ಸನ್ನಿವೇಶಗಳನ್ನು ಕಣ್ಣಾರೆ ಕಂಡಿದ್ದ ನಾನು ಮುಖ್ಯಮಂತ್ರಿಯಾದಾಗ, ಕರ್ನಾಟಕದಲ್ಲಿ ಯಾರು ಕೂಡ ಹಸಿದು ಮಲಗಬಾರದು. 2 ಹೊತ್ತು ಊಟ ಮಾಡಲೇಬೇಕು. ಕರ್ನಾಟಕ ಹಸಿವು ಮುಕ್ತ ರಾಜ್ಯ ಆಗಬೇಕು ಅಂತ ಈ ಯೋಜನೆ ಜಾರಿಗೆ ತಂದೆ” ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.
Advertisement
ಅನ್ನಭಾಗ್ಯ ಯೋಜನೆ ಜಾರಿಗೆ ತರುವ ಮೊದಲು ಬಿಪಿಎಲ್ ಕುಟುಂಬದ ಒಬ್ಬ ಸದಸ್ಯನಿಗೆ ಕನಿಷ್ಠ 4 ಕೆ.ಜಿ ಅಕ್ಕಿ ಮತ್ತು 1 ಕೆ.ಜಿ ಗೋಧಿಯಂತೆ ಒಂದು ಕುಟುಂಬಕ್ಕೆ ಗರಿಷ್ಠ 20 ಕೆ.ಜಿ ಅಕ್ಕಿ ಮತ್ತು 3 ಕೆ.ಜಿ ಗೋಧಿಯನ್ನು ವಿತರಿಸಲಾಗುತ್ತಿತ್ತು. ಅನ್ನಭಾಗ್ಯ ಯೋಜನೆ ಜಾರಿಗೆ ಬಂದಾಗ, ಅರ್ಹ ಬಿಪಿಎಲ್ ಏಕ ಸದಸ್ಯ ಕುಟುಂಬಗಳಿಗೆ 10 ಕೆ.ಜಿ, ದ್ವಿ ಸದಸ್ಯ ಕುಟುಂಬಗಳಿಗೆ 20 ಕೆ.ಜಿ, 3 ಮತ್ತು ಹೆಚ್ಚಿನ ಸದಸ್ಯರನ್ನು ಹೊಂದಿರುವ ಕುಟುಂಬಗಳಿಗೆ 30 ಕೆ.ಜಿ ಆಹಾರಧಾನ್ಯವನ್ನು ಪ್ರತಿ ಕೆ.ಜಿ.ಗೆ 1 ರೂ. ದರದಂತೆ ವಿತರಿಸಲಾಯಿತು. ನಂತರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಪ್ರಮಾಣವನ್ನು ಕಡಿಮೆ ಮಾಡಲಾಯಿತು. ಇದನ್ನೂ ಓದಿ: ಹಳ್ಳಿಗಾಡಿನ ಜೀವನ, ದನ ಕಾಯುತ್ತಿದ್ದ ಹುಡುಗನಿಂದ ಮುಖ್ಯಮಂತ್ರಿ ಗಾದಿವರೆಗೆ; ಸಿದ್ದರಾಮಯ್ಯ ಸಾಗಿಬಂದ ಹಾದಿ..
Advertisement
2023ರ ಚುನಾವಣೆ ಹೊತ್ತಿನಲ್ಲಿ ಅನ್ನಭಾಗ್ಯ ಯೋಜನೆ ಕುರಿತು ಕಾಂಗ್ರೆಸ್ ಮತ್ತೆ ಘೋಷಣೆ ಹೊರಡಿಸಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ ನೀಡಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದರು. ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿದ್ದ 5 ಗ್ಯಾರಂಟಿಗಳಲ್ಲಿ ಇದು ಒಂದು ಭರವಸೆಯಾಗಿದೆ. ಅದರಂತೆ ಈಗ ಕಾಂಗ್ರೆಸ್ 135 ಸ್ಥಾನಗಳನ್ನು ಪಡೆದು ಅಧಿಕಾರದ ಗದ್ದೆಗೆ ಏರಲು ಸಿದ್ಧವಾಗಿದೆ.