ಮೋದಿಗೆ ಪತ್ರ ಬರೆದ ಸಿದ್ದರಾಮಯ್ಯ

Public TV
5 Min Read
modi siddaramaiah

ಬೆಂಗಳೂರು: ರಾಗಿ ಖರೀದಿ ಮೇಲಿನ ನಿರ್ಬಂಧ ತೆರವುಗೊಳಿಸುವಂತೆ ಮನವಿ ಮಾಡಿ ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ರಾಗಿ ಖರೀದಿಯನ್ನು ಎಂಎಸ್‍ಪಿ ದರದಲ್ಲಿ ಹೆಚ್ಚಿಸಲು, ನೋಂದಣಿ ಸಮಯವನ್ನು ವಿಸ್ತರಿಸಲು ಮತ್ತು ರೈತರ ಅನುಕೂಲಕ್ಕಾಗಿ ಖರೀದಿಸಲು ಇರುವ ನಿರ್ಬಂಧಗಳನ್ನು ತೆಗೆದುಹಾಕಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಒತ್ತಾಯಿಸಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?: ಇಡೀ ವರ್ಷ ಪದೇ ಪದೇ ಸುರಿದ ಮಳೆಯ ನಡುವೆಯೂ ರಾಗಿ, ಭತ್ತ ಮುಂತಾದ ಬೆಳೆಗಳನ್ನು ಕೊಯಿಲು ಮಾಡಿ ಮಾರುಕಟ್ಟೆಗೆ ತರುತ್ತಿದ್ದಾರೆ. ಸರ್ಕಾರವು ಈ ವರ್ಷ ಜನವರಿ 1 ರಿಂದ ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ದಕ್ಷಿಣ ಕರ್ನಾಟಕದ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು, ಚಾಮರಾಜನಗರ, ಬೆಂಗಳೂರು ನಗರ ಜಿಲ್ಲೆಗಳ ಪ್ರಮುಖ ಬೆಳೆಯಾದ ರಾಗಿಯನ್ನು ಬೆಳೆಯುತ್ತಾರೆ. ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜ್‍ಕುಮಾರ್ ತಂದೆ ಹೃದಯಾಘಾತದಿಂದ ನಿಧನ

ಕೃಷಿ ಇಲಾಖೆಯ ಅಂದಾಜಿನ ಪ್ರಕಾರ ನಮ್ಮ ರೈತರು ಈ ವರ್ಷ ಸುಮಾರು 19.35 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆದಿದ್ದಾರೆ. ಕೃಷಿ ಇಲಾಖೆಯ ದಾಖಲೆಗಳ ಪ್ರಕಾರ ಎಕರೆಗೆ ಕನಿಷ್ಟ 1 ಟನ್ ಎಂದರೂ ಸುಮಾರು 19.3 ಲಕ್ಷ ಟನ್ ಟನ್ ರಾಗಿ ಇಳುವರಿ ಬರುತ್ತದೆ. ಈ ವರ್ಷ ನಿರಂತರವಾಗಿ ಸುರಿದ ಮಳೆಯಿಂದಾಗಿ 4.5 ಲಕ್ಷ ಟನ್ ರಾಗಿಯು ಮಳೆಯ ಪಾಲಾದರೂ 15 ಲಕ್ಷ ಟನ್ ರಾಗಿ ರೈತರ ಕೈಯಲ್ಲಿದೆ, ಹಾಗಾಗಿ ರೈತರು ಬೆಂಬಲ ಬೆಲೆಯಡಿ ರಾಗಿಯನ್ನು ಮಾರಾಟ ಮಾಡಲು ಉತ್ಸಾಹ ತೋರಿಸುತ್ತಿದ್ದಾರೆ.

modi 3

ಸರ್ಕಾರಗಳು ಪದೇ ಪದೇ ರೈತರ ಆದಾಯ ದ್ವಿಗುಣ ಗೊಳಿಸಲಾಗುವುದು ಎಂದು ಹೇಳಲಾಗುತ್ತದೆ. ಆದರೆ ರೈತರ ಆದಾಯ ಹೆಚ್ಚಾಗುವ ಬದಲು ಕಡಿಮೆಯಾಗುತ್ತಿದೆ. ಅದರಲ್ಲೂ ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆಯುವ ರಾಗಿಯು ಲಾಭದಾಯಕ ಬೆಳೆಯಲ್ಲ. ಖರ್ಚು ಹೆಚ್ಚು ಲಾಭ ಕಡಿಮೆ. ಸರ್ಕಾರಗಳು ಈ ರೀತಿಯ ಬೆಳೆಗಳಿಗೆ ಹೆಚ್ಚು ಬೆಲೆಯನ್ನು ನಿಗಧಿಪಡಿಸಿ ರೈತರು ಮಾರುಕಟ್ಟೆಗೆ ತರುವಷ್ಟು ಉತ್ಪನ್ನವನ್ನೂ ಖರೀದಿಸಬೇಕು. ರಾಗಿ, ಜೋಳದಂಥ ಮಳೆಯಾಶ್ರಿತ ಬೆಳೆಗಳನ್ನು ಬೆಂಬಲಿಸಬೇಕಾದ ಅನಿವಾರ್ಯತೆ ಇದೆ, ಏಕೆಂದರೆ ಈ ಬೆಳೆಗಳು ಹೆಚ್ಚು ನೀರನ್ನು ಬಯಸುವುದಿಲ್ಲ. ಇದನ್ನೂ ಓದಿ: ಅಪ್ಪುವಿನಂತೆ ಸಾವಿನಲ್ಲೂ ಸಾರ್ಥಕತೆ ಮೆರೆದ ಮಾವ ರೇವನಾಥ್

siddaramaiah 7

ಸರ್ಕಾರಗಳು ಈ ರೈತರಿಗೆ ಸಬ್ಸಿಡಿಗಳನ್ನೇನೂ ನೀಡುತ್ತಿಲ್ಲ. ಈ ಬೆಳೆಗಳನ್ನು ಬೆಳೆಯುವುದರಿಂದ ನಿಸರ್ಗದ ರಕ್ಷಣೆಯೂ ಆಗುತ್ತದೆ. ಔಷಧ, ಕೀಟನಾಶಕ, ರಾಸಾಯನಿಕಗಳಿಲ್ಲದೆ ಬೆಳೆಯುವ ರಾಗಿ, ಜೋಳ ಮುಂತಾದ ಬೆಳೆಗಳು ನಿಸರ್ಗಸ್ನೇಹಿಯಾಗಿವೆ. ಹೀಗಾಗಿ ಇವುಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು. ಆದರೆ ರಾಗಿಗೆ ಈಗ ದೊರೆಯುತ್ತಿರುವ ಬೆಲೆಯು ಯಾವುದಕ್ಕೂ ಸಾಲುವುದಿಲ್ಲ. ರಾಗಿಗೆ ನೀಡುತ್ತಿರುವ ಬೆಂಬಲ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಒಂದು ಕ್ವಿಂಟಾಲಿಗೆ ಕೇವಲ 82 ರೂಪಾಯಿಗಳಷ್ಟು ಮಾತ್ರ ಏರಿಕೆ ಮಾಡಲಾಗಿದೆ.

siddaramaiah 2 1

ಕಳೆದ ವರ್ಷ ಒಂದು ಕ್ವಿಂಟಾಲಿಗೆ 3295 ರೂ ನೀಡುತ್ತಿದ್ದರೆ ಈ ವರ್ಷ 3377 ಗಳಿಗೆ ಏರಿಕೆ ಮಾಡಲಾಗಿದೆ. ಆದರೆ ರೈತರು 2019-20 ರಲ್ಲಿ ಟ್ರಾಕ್ಟರ್ನಲ್ಲಿ ಒಂದು ಗಂಟೆ ಹೊಲ ಉಳಲು 750 ರೂಪಾಯಿ ನೀಡುತ್ತಿದ್ದರೆ ಈ ವರ್ಷ 1250-1300 ರೂ ನೀಡಬೇಕಾಗಿದೆ. ಬೆಳೆಯನ್ನು ಕಟಾವು ಮಾಡುವ ಯಂತ್ರಕ್ಕೆ ಕೂಡ ಗಂಟೆಗೆ ಸುಮಾರು 750 ರೂಪಾಯಿಗಳಷ್ಟು ಹೆಚ್ಚಾಗಿದೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲ ಅವಶ್ಯ ವಸ್ತುಗಳ ಬೆಲೆ ಏರಿಕೆಯಾಗಿವೆ. ಇದೆಲ್ಲದರಿಂದಾಗಿ ರೈತರು ಬೆಳೆಗಳನ್ನು ಬೆಳೆಯಲು ಉತ್ಪಾದನಾ ವೆಚ್ಚ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಡಾ.ಸ್ವಾಮಿನಾಥನ್ ಅವರ ವರದಿಯಲ್ಲಿನ ಸೂತ್ರಗಳನ್ನು ಪೂರ್ತಿಯಾಗಿ ಅಳವಡಿಸಿದರೆ ಒಂದು ಕ್ವಿಂಟಾಲ್ ರಾಗಿಗೆ ಈಗ ನಿಗಧಿಪಡಿಸಿರುವ ಬೆಂಬಲ ಬೆಲೆಯ ಎರಡರಷ್ಟನ್ನು ರೈತರಿಗೆ ನೀಡಬೇಕಾಗುತ್ತದೆ. ಇದನ್ನೂ ಓದಿ: ಕೇವಲ 13 ಗಂಟೆಯಲ್ಲಿ 135 ಕಿ.ಮೀ ಬಂದ ಎತ್ತಿನ ಚಕ್ಕಡಿ – ಎತ್ತುಗಳಿಗೆ ಅದ್ಧೂರಿ ಸ್ವಾಗತ

NARENDRA MODI 1 5

ಆದರೂ ರೈತರು ನಿಗಧಿಪಡಿಸಿರುವ ಬೆಂಬಲ ಬೆಲೆಯಾದರೂ ತಮ್ಮ ಬೆಳೆಗಳಿಗೆ ಸಿಗಲಿ ಎಂದು ಆಶಿಸುತ್ತಿದ್ದಾರೆ. ಏಕೆಂದರೆ ಮುಕ್ತ ಮಾರುಕಟ್ಟೆಯಲ್ಲಿ ರಾಗಿಯ ಬೆಲೆ ಪ್ರತಿ ಕ್ವಿಂಟಾಲಿಗೆ 1800 ರೂಪಾಯಿಗಳಿಂದ 2180 ರೂಪಾಯಿಗಳಷ್ಟೆ ಇದೆ. ಪ್ರಧಾನಿ ಮೋದಿಯವರ ಸರ್ಕಾರ ಈ ಬಾರಿ ರಾಜ್ಯದ ರೈತರಿಂದ ಕೇವಲ 2.10 ಲಕ್ಷ ಟನ್ ರಾಗಿಯನ್ನು ಮಾತ್ರ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಸೂಚನೆಯನ್ನು ಆಧರಿಸಿ ರಾಜ್ಯದ ಬಿಜೆಪಿ ಸರ್ಕಾರವು ರೈತರಿಂದ ರಾಗಿ ಖರೀದಿಸಲು ವಿಪರೀತ ನಿಬಂಧನೆಗಳನ್ನು ವಿಧಿಸಿದೆ. ಅದರಲ್ಲಿ ಸಣ್ಣ ರೈತರಿಂದ ಮಾತ್ರ ಕೇವಲ 20 ಕ್ವಿಂಟಾಲ್ ರಾಗಿಯನ್ನು ಮಾತ್ರ ಖರೀದಿ ಮಾಡಲಾಗುವುದೆಂದು ತಿಳಿಸಿ ಆದೇಶ ಹೊರಡಿಸಿದೆ. ಯೂಕಲಿಪ್ಟಸ್ ಬೆಳೆಯನ್ನು ಬೆಳೆಯುತ್ತಿದ್ದ ರೈತರು ಕಳೆದ ಎರಡು ವರ್ಷಗಳಿಂದ ಈಚೆಗೆ ತಮ್ಮ ಹೊಲಗಳಲ್ಲಿ ಬೆಳೆದಿದ್ದ ಬೆಳೆಯನ್ನು ತೆಗೆದು ಹಾಕಿ ರಾಗಿ ಬೆಳೆಯಲಾರಂಭಿಸಿದ್ದಾರೆ. ಹಾಗಾಗಿ ಸಹಜವಾಗಿಯೆ ರಾಗಿಯ ಉತ್ಪಾದನೆ ಹೆಚ್ಚಾಗಿದೆ. ಇದನ್ನೂ ಓದಿ: ಈ ಅಪರೂಪದ ಕೃತಿಯ ದರ್ಶನ ಪಡೆದರೆ ಮಾನವನ ಎಲ್ಲ ಸಂಕಷ್ಟ ದೂರ!

ದೊಡ್ಡಬಳ್ಳಾಪುರ ಮುಂತಾದ ಕಡೆ ರೈತರು, ರೈತ ಸಂಘದವರು ರಾಗಿ ಖರೀದಿಗೆ ವಿಧಿಸಿರುವ ನಿಬಂಧನೆಗಳನ್ನು ತೆಗೆದು ಹಾಕುವಂತೆ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಕಳೆದ ವರ್ಷ ಸುಮಾರು 4.7 ಲಕ್ಷ ಟನ್ ಗಳಷ್ಟು ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದರೆ ಈ ಬಾರಿ ರಾಜ್ಯದಿಂದ ಕೇವಲ 2.10 ಲಕ್ಷ ಟನ್ ರಾಗಿಯನ್ನು ಖರೀದಿಸಲು ಮಾತ್ರ ರಾಜ್ಯಕ್ಕೆ ಅನುಮತಿ ನೀಡಲಾಗಿದೆ. ಇದನ್ನೂ ಓದಿ:  ಚುನಾವಣೆ ನಂತರ ಪಂಜಾಬ್‌ನಲ್ಲಿ ಕಾಂಗ್ರೆಸ್ ನಿರ್ನಾಮ: ಅಮರಿಂದರ್ ಸಿಂಗ್

ರೈತರು 15 ಲಕ್ಷ ಟನ್ ರಾಗಿ ಬೆಳೆದರೆ ಅವರು ತಮ್ಮ ಸ್ವಂತ ಬಳಕೆಗೆ ಶೇ.50 ರಷ್ಟನ್ನು ಬಳಸುತ್ತಾರೆಂದರೆ ಉಳಿದದ್ದನ್ನು ಅವರು ಮಾರಲೇಬೇಕು. ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ರೈತರ ಉತ್ಪನ್ನಗಳನ್ನು ಖರೀದಿಸದಿದ್ದರೆ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಬೆಲೆಗಳು ಬಿದ್ದು ಹೋಗುತ್ತವೆ. ಹೀಗಾದರೆ ರೈತರ ಹಿತಾಸಕ್ತಿಯನ್ನು ಕಾಪಾಡುವುದು ಹೇಗೆ? ರೈತರ ಆದಾಯ ದ್ವಿಗುಣಗೊಳ್ಳುವುದು ಹೇಗೆ? ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡುವುದನ್ನು ನಿಲ್ಲಿಸಿದೆ. ಮುಕ್ತ ಮಾರುಕಟ್ಟೆಯಲ್ಲಿ ಈಗಾಗಲೆ ರಾಗಿಯ ಬೆಲೆ ಕಡಿಮೆಯಾಗಿ ಈಗ ಕೇವಲ 1800 ರೂ.ಗಳಿಂದ 2180 ರೂವರೆಗೆ ಮಾತ್ರ ಮಾರಾಟವಾಗುತ್ತಿದೆ. ಇದನ್ನೂ ಓದಿ:  ಸರ್ಕಾರದ ಯೋಜನೆಗಳು ಯಶಸ್ವಿಯಾಗಲು ಜನರ, ಅಧಿಕಾರಿಗಳ ಸಹಕಾರ ಮುಖ್ಯ: ವಿ.ಸೋಮಣ್ಣ

siddaramaiah 4

ಇದರಿಂದ ಪ್ರತಿ ಕ್ವಿಂಟಾಲ್‍ಗೆ ರೈತರಿಗೆ ಸರಾಸರಿ 1377 ರೂಗಳಷ್ಟು ನಷ್ಟವಾಗುತ್ತಿದೆ. ಈ ಲೆಕ್ಕದಲ್ಲಿ ನೋಡಿದರೆ ಮಾರುಕಟ್ಟೆಗೆ 8 ಲಕ್ಷ ಟನ್ ರಾಗಿ ಬಂದರೆ 2.1 ಲಕ್ಷ ಟನ್ನನ್ನು ಬೆಂಬಲ ಬೆಲೆಯಡಿ ಖರೀದಿಸಲಾಗುತ್ತಿದೆ. ಉಳಿಕೆ 6 ಟನ್ ರಾಗಿ ಬೆಳೆದ ರೈತರಿಗೆ ಕನಿಷ್ಟ 1000 ಕೋಟಿ ನಷ್ಟವಾಗುತ್ತದೆ. ಆದ್ದರಿಂದ ಈ ಕೂಡಲೆ ರಾಗಿಯನ್ನು ಖರೀದಿಸಲು ವಿಧಿಸಿರುವ ನಿರ್ಬಂಧಗಳನ್ನು ತೆಗೆದು ಹಾಕಬೇಕು. ರೈತರು ಎಷ್ಟು ಕ್ವಿಂಟಾಲ್ ಖರೀದಿ ಕೇಂದ್ರಗಳಿಗೆ ತರುತ್ತಾರೊ ಅಷ್ಟನ್ನೂ ಖರೀದಿಸಬೇಕು. ಇಂದೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಕೇವಲ 2.10 ಲಕ್ಷ ಟನ್ ಖರೀದಿಸಲು ವಿಧಿಸಿರುವ ನಿರ್ಬಂಧವನ್ನು ತೆಗೆದು ಹಾಕಬೇಕೆಂದು ಒತ್ತಾಯಿಸಬೇಕು. ಸ್ಥಗಿತಗೊಳಿಸಿರುವ ನೋಂದಣಿ ಕೇಂದ್ರಗಳನ್ನು ಕೂಡಲೆ ಪುನರಾರಂಭಿಸಬೇಕು. ರಾಗಿ, ಭತ್ತ ಮುಂತಾದ ಉತ್ಪನ್ನಗಳಿಗೆ ನಿಗಧಿಗೊಳಿಸಿರುವ ಬೆಲೆಯನ್ನು ಹೆಚ್ಚಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಪತ್ರ ಬರೆದು ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *