ಗದಗ: ಯಾವತ್ತಿದ್ದರೂ ಸಿದ್ದರಾಮಯ್ಯ ರಾಜೀನಾಮೆ ನೀಡೇ ನೀಡುತ್ತಾರೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ (KS Eshwarappa) ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದಲು ಕಾಂಗ್ರೆಸ್ ಪರಿಸ್ಥಿತಿ ನೋಡಿ ಸಿದ್ದರಾಮಯ್ಯ (CM Siddaramaiah) ರಾಜೀನಾಮೆ ಕೊಡುವುದು ನಂತರ ಎಂದು ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ, ಎಂಬಿ ಪಾಟೀಲ್, ದೇಶಪಾಂಡೆ, ರಾಯರಡ್ಡಿ, ಎಲ್ಲರೂ ಹೇಳಿದ್ದರು. ನಾವೆಲ್ಲರೂ ಬಂಡೆಯ ಹಾಗೇ ಸಿಎಂ ಜೊತೆಗೆ ಇರುತ್ತೇವೆ ಎಂದಿದ್ದರು. 5 ವರ್ಷ ಅವರೇ ಮುಖ್ಯಮಂತ್ರಿ ಅಂದರೂ ಅದು ಕೃತಕತೆ, ನಾಟಿಕೀಯ ಹೇಳಿಕೆಯಾಗುತ್ತದೆ. ಯಾವತ್ತಿದ್ದರೂ ಸಿದ್ದರಾಮಯ್ಯ ರಾಜೀನಾಮೆ ನೀಡೇ ನೀಡುತ್ತಾರೆ. ಹೀಗಾಗಿ ಬೇರೆ ಬೇರೆ ಸಭೆಗಳನ್ನು ನಡೆಸುತ್ತಿದ್ದಾರೆ ಎಂದರು.ಇದನ್ನೂ ಓದಿ: 70th National Film Awards: ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ
ಒಂದು ಕಡೆ ದಲಿತ ಮುಖ್ಯಮಂತ್ರಿ ಎಂದು ಚರ್ಚೆ ನಡೆಯುತ್ತಿದೆ. ಮುಂಚೆ ಯಾಕೆ ದಲಿತ ಮುಖ್ಯಮಂತ್ರಿಯನ್ನು ಮಾಡಲಿಲ್ಲ? ಕಾಂಗ್ರೆಸ್‌ಗೆ ಬಹುಮತ ಹೊಸದಾಗಿ ಬಂದಿದೀಯಾ? ಆವಾಗ ಯಾಕೆ ದಲಿತರು ನೆನಪಾಗಲಿಲ್ಲ? ಕಾಂಗ್ರೆಸ್‌ನ ಭ್ರಷ್ಟಾಚಾರಗಳ ಬಗ್ಗೆ ತುಂಬಾ ಸ್ಪಷ್ಟವಾಗಿ ಕೋರ್ಟ್ನಲ್ಲಿ ಆದೇಶವಾಗಿದೆ. ನಾನು ಸಿಎಂ ಅವರಿಗೆ ಪ್ರಾರ್ಥನೆ ಮಾಡುತ್ತೇನೆ. ನೀವು ರಾಜೀನಾಮೆ ಕೊಟ್ಟು ತನಿಖೆಯಲ್ಲಿ ಕ್ಲೀನ್‌ಚೀಟ್ ತೆಗೆದುಕೊಂಡು ಬನ್ನಿ. ಬಂದು ಮತ್ತೆ ಸಿಎಂ ಆಗಿ ಏನು ಅಭ್ಯಂತರವಿಲ್ಲ. ಸಿಎಂ ರಾಜೀನಾಮೆ ಕೊಡದೇ ಕೋರ್ಟಿಗೆ ಅಪಮಾನವಾಗಿದೆ. ಕೇವಲ ಕೋರ್ಟಿಗೆ ಅಲ್ಲ. ಇದು ಸಂವಿಧಾನಕ್ಕೆ ಮಾಡಿರುವ ಅಪಮಾನವಾಗಿದೆ ಎಂದರು.
ಇದೇ ವೇಳೆ ಬಿಜೆಪಿ ವಿಚಾರವಾಗಿ ಮಾತನಾಡಿ, ಈಗ ಹಿಂದುತ್ವ ಬಿಟ್ಟು, ಬಿಜೆಪಿಯಲ್ಲಿ (BJP) ಸ್ವಜನ ಪಕ್ಷಪಾತ ನಡೆಯುತ್ತಿದೆ. ಇದಕ್ಕೆ ಸರಿಯಾಗಿ ಬ್ರೇಕ್ ಹಾಕಬೇಕು. ಬಿಜೆಪಿ ಕುಟುಂಬ ರಾಜಕಾರಣದಿಂದ ಮುಕ್ತವಾಗಬೇಕು. ವಿಜಯೇಂದ್ರ ಕಾಂಗ್ರೆಸ್ ಪಕ್ಷದ ಭಿಕ್ಷೆಯಿಂದ ಶಾಸಕರಾಗಿದ್ದೀರಿ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಅದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಈವರೆಗೂ ಉತ್ತರ ನೀಡಿಲ್ಲ. ಏನು ಹೊಂದಾಣಿಕೆಯಾಗಿತ್ತು ಎನ್ನುವುದನ್ನು ಡಿಕೆಶಿ ಬಹಿರಂಗ ಮಾಡಲಿ. ಈ ಹೊಂದಾಣಿಕೆ ರಾಜಕಾರಣ ಮುಕ್ತಾಯವಾಗಬೇಕು. ಒಂದು ಕುಟುಂಬದ ಕೈಗೆ ಬಿಜೆಪಿ ಸಿಕ್ಕಿಬಿದ್ದಿರುವುದರಿಂದ ಪಕ್ಷದಲ್ಲಿ ಶಾಸಕರ ಸಂಖ್ಯೆ ಕಡಿಮೆಯಾಗುತ್ತಿವೆ. ಈ ಕುರಿತು ಬಿಜೆಪಿ ಪಕ್ಷದಲ್ಲಿ ಚರ್ಚೆಯಾಗಬೇಕು ಎಂದು ಬಿಎಸ್‌ವೈ ಕುಟುಂಬದ ವಿರುದ್ಧ ಹರಿಹಾಯ್ದರು.
ಇದೇ ತಿಂಗಳು 20ರಂದು ಬೃಹತ್ ಸಮಾವೇಶ ಪ್ಲ್ಯಾನ್ ಮಾಡಲಾಗಿದೆ ಎಂದರು. ಸಂಘಟನೆ ಮಾಡಲು ಸಾಕಷ್ಟು ಫೋನ್ ಕಾಲ್ ಬರುತ್ತಿವೆ. ಸಾಧು, ಸಂತರ ಮಾರ್ಗದರ್ಶನದಲ್ಲಿ ಯಾವ ಹೆಸರು ಇಡಬೇಕು. ಯಾವ ರೂಪದಲ್ಲಿ ಸಂಘಟನೆ ತೆಗೆದುಕೊಂಡು ಹೋಗಬೇಕು ಎನ್ನುವದು ಗೊತ್ತಾಗುತ್ತದೆ. ಬಸವನಗೌಡ ಪಾಟೀಲ್ ಯತ್ನಾಳ್ ಕೂಡಾ ಬರುತ್ತಾರೆ. ಬಸವಜಯ ಮೃತ್ಯುಂಜಯ ಸ್ವಾಮೀಜಿ ಕೂಡಾ ಸಾಥ್ ನೀಡುತ್ತಾರೆ. ಇದು ಈಶ್ವರಪ್ಪ ಹಾಗೂ ಯತ್ನಾಳ್ ನೇತೃತ್ವ ಅಲ್ಲ. ಇದು ಸಾಧು, ಸಂತರ ನೇತೃತ್ವದಲ್ಲಿ ನಡೆಯುತ್ತದೆ ಎಂದರು.ಇದನ್ನೂ ಓದಿ: ಜಾತಿಗಣತಿ ವರದಿ ಅನುಷ್ಠಾನ ಮಾಡ್ತೀವಿ- ಎಕ್ಸ್‌ನಲ್ಲಿ ಸಿಎಂ ಪುನರುಚ್ಚಾರ