– ಕೇಂದ್ರದ ಜಾತಿಗಣತಿ ವರದಿ ಬರುವ ತನಕ ತಾಳ್ಮೆ ಇರಲಿ
ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಇದೆ. ಅವರೇ ಮುಂದಿನ ಐದು ವರ್ಷಗಳ ಕಾಲ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ (D.K Suresh) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ದೇವಿಯ ಆಶೀರ್ವಾದದಿಂದ ಸಿಎಂ ಎಲ್ಲಾ ಸಮಸ್ಯೆಗಳಿಂದ ಬೇಗ ಹೊರಗೆ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಾತನಾಡಲು ವಿಷಯವಿಲ್ಲದೆ ಕುಮಾರಸ್ವಾಮಿಗೆ ಪೂರ್ತಿ ಹುಚ್ಚು ಹಿಡಿದಿದೆ: ಬೋಸರಾಜು
ರಾಜ್ಯದ ಇತ್ತೀಚಿನ ಬೆಳವಣಿಗೆಗಳು ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ರಾಜ್ಯದಲ್ಲಿ ಕಾಂಗ್ರೆಸ್, ದೇಶದಲ್ಲಿ ಎನ್‍ಡಿಎಗೆ ಅವಕಾಶ ಕೊಟ್ಟಿರೋದು ಅಭಿವೃದ್ಧಿ ಮಾಡೋಕೆ. ಅದನ್ನು ಬಿಟ್ಟು ಆರೋಪ, ಪ್ರತ್ಯಾರೋಪ ಮಾಡುತ್ತಾ ಕನ್ನಡಿಗರಿಗೆ ಅವಮಾನ ಮಾಡುತ್ತಿದ್ದಾರೆ. ದಸರಾ ವೇಳೆ ಚಾಮುಂಡೇಶ್ವರಿ ದೇವಿಯ ಪೂಜಿಸುವ ಸಂದರ್ಭದಲ್ಲಿ ನೊಂದು ಹೇಳುತ್ತಿದ್ದೇನೆ. ಈ ರೀತಿ ಬೀದಿಯಲ್ಲಿ ಕಿತ್ತಾಟ ಮಾಡೋದು ಸರಿಯೇ? ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಈ ಬೆಳವಣಿಗೆ ರಾಜ್ಯದ ಜನರಿಗೆ ಎಳ್ಳಷ್ಟು ಇಷ್ಟವಿಲ್ಲ. ಇದೇ ರೀತಿ ಮುಂದುವರೆದರೆ ಜನ ಕಲ್ಲಲ್ಲಿ ಹೊಡೆಯುತ್ತಾರೆ. ನಾನು ಮೂರು ಪಕ್ಷಗಳಿಗೆ ಎಚ್ಚರಿಕೆಯಾಗಿ ಹೇಳುತ್ತಿದ್ದೇನೆ. ದಿನೇ ದಿನೇ ಇದೇ ವಿಚಾರವನ್ನ ದೊಡ್ಡದು ಮಾಡಬಾರದು. ಚುನಾವಣೆಗೆ ಇನ್ನೂ 4 ವರ್ಷ ಇದೆ ಎಂದಿದ್ದಾರೆ.
ಹೆಚ್‍ಡಿಕೆ (H.D Kumaraswamy) ವಿರುದ್ಧದ ಚನ್ನಪಟ್ಟಣ ಚುನಾವಣೆಗೆ 50 ಕೋಟಿ ರೂ. ಡಿಮ್ಯಾಂಡ್ ಆರೋಪದ ವಿಚಾರವಾಗಿ, ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇದರಿಂದ ಕನ್ನಡಿಗರಿಗೆ ಮುಜುಗರ ತರುತ್ತಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಕಳ್ಳರು ಒಂದಾಗಿದ್ದಾರೆಂಬ ಸ್ನೇಹಮಯಿ ಕೃಷ್ಣ ಅವರ ಆರೋಪದ ವಿಚಾರವಾಗಿ, ರಾಜಕೀಯ ದೊಂಬರಾಟ ನಿಲ್ಲಲಿ. ಅವರ ಕೆಲಸ ಏನು? ದೂರು ಕೊಡಬೇಕು ಕೊಟ್ಟಿದ್ದಾರೆ. ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ತನಿಖೆಯಲ್ಲಿ ತಪ್ಪು, ಸರಿ ಹೊರಬರಲಿದೆ. ತನಿಖಾಧಿಕಾರಿಗಳಿಗೆ ಮುಕ್ತ ಅವಕಾಶ ಕೊಡಬೇಕು ಎಂದಿದ್ದಾರೆ.
ಜಾತಿಗಣತಿ (Caste Census) ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವಂತೆ ಈ ಬಗ್ಗೆ ಸಿಎಂ ಸಿದ್ದರಾಮಯ್ಯರನ್ನು ಒತ್ತಾಯ ಮಾಡುತ್ತೇನೆ. ಕೇಂದ್ರ ಸರ್ಕಾರವೂ ಜಾತಿಗಣತಿ ಮಾಡುತ್ತಿದೆ. ಒಂದು ವರ್ಷದೊಳಗೆ ಆ ವರದಿಯೂ ಬರಲಿದೆ. ಮುಖ್ಯಮಂತ್ರಿಗಳು ಅಲ್ಲಿಯವರೆಗೆ ಕಾಯಬೇಕು ಎಂದು ಸಲಹೆ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಬ್ಯಾಂಕ್ ಸಿಬ್ಬಂದಿ ಮನೆ ಮೇಲೆ ಇಡಿ ದಾಳಿ