ಮೈಸೂರು: ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಇಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಪತ್ನಿ ಪಾರ್ವತಿ (Parvathi) ಚಾಮುಂಡಿ ತಾಯಿಯ ದರ್ಶನ ಪಡೆದರು.
ಅರ್ಧ ಗಂಟೆಗೂ ಹೆಚ್ಚು ಕಾಲ ದೇವಾಲಯದಲ್ಲಿ ಪ್ರಾರ್ಥನೆ ಮಾಡಿ ಚಾಮುಂಡಿ (Chamundi Devi) ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ಚಾಮುಂಡಿ ತಾಯಿಯ ಪರಮ ಭಕ್ತೆಯಾಗಿರುವ ಪಾರ್ವತಿಯವರು ಪ್ರತಿ ವರ್ಷ ನವರಾತ್ರಿಯ ಒಂಬತ್ತು ದಿನಗಳ ಕಾಲ ತಾಯಿಯ ದರ್ಶನ ಪಡೆಯುತ್ತಾರೆ.
ನಾಡಹಬ್ಬ ದಸರಾಗೆ ಕ್ಷಣಗಣನೆ ಶುರುವಾಗಿದೆ. ಚಿನ್ನದ ಅಂಬಾರಿಯಲ್ಲಿ ಕೂರುವ ತಾಯಿ ಚಾಮುಂಡಿಯ ಉತ್ಸವ ಮೂರ್ತಿ ನೋಡಲು ಕೋಟ್ಯಂತರ ಜನ ಕಾಯುತ್ತಿದ್ದಾರೆ. ದಸರಾದ ಪ್ರಮುಖ ಆಕರ್ಷಣೆಯಾದ ಚಾಮುಂಡಿ ತಾಯಿಯ ಉತ್ಸವ ಮೂರ್ತಿಯ ಸ್ವಚ್ಛತಾ ಕಾರ್ಯ ಚಾಮುಂಡಿ ಬೆಟ್ಟದಲ್ಲಿ ಶುರುವಾಗಿದೆ. ಇದನ್ನೂ ಓದಿ: ಮೈಸೂರಿನಲ್ಲಿ ದಸರಾ ಸಂಭ್ರಮ- ಚಿನ್ನದ ಅಂಬಾರಿಯ ಉತ್ಸವ ಮೂರ್ತಿಗೆ ಪೂಜೆ
ದಸರಾ (Mysuru Dasara 2022) ಮುಗಿದ ಮೇಲೆ ಈ ಉತ್ಸವ ಮೂರ್ತಿ ಅರಮನೆ ಮಂಡಳಿಯ ಖಜಾನೆಯಲ್ಲಿ ಇರುತ್ತದೆ. ದಸರೆಗೆ ಎರಡು ದಿನ ಮುಂಚಿತವಾಗಿ ಚಾಮುಂಡಿ ಬೆಟ್ಟಕ್ಕೆ ಉತ್ಸವ ಮೂರ್ತಿ ತಂದು ಸ್ವಚ್ಛತಾ ಕಾರ್ಯ ನೆರವೇರಿಸಿ ಪೂಜೆ ಆರಂಭಿಸಲಾಗುತ್ತದೆ. ನವರಾತ್ರಿಯ 9 ದಿನವೂ ಈ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಮೂರ್ತಿಗೆ ಶಕ್ತಿ ತುಂಬಲಾಗುತ್ತದೆ.
ನಾಳೆ (ಸೋಮವಾರ) ದಸರಾ ಮಹೋತ್ಸವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯ್ಲಲಿ ಇಂದು ಚಾಮುಂಡಿ ಬೆಟ್ಟಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಸಿದ್ಧತೆ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ನಾಳೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿನ ಪೂಜಾ ಕೈಂಕರ್ಯಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.