Connect with us

Bengaluru City

ನಿನ್ನೆಯೇ ಭೇಟಿ ಮಾಡಬೇಕಿತ್ತು- ಡಿಕೆಶಿ ಜೊತೆ ಮಾತುಕತೆಯ ಬಳಿಕ ಸಿದ್ದು ಹೇಳಿಕೆ

Published

on

ಬೆಂಗಳೂರು: ಇಡಿ ಬಂಧನದ ಬಳಿಕ ಷರತ್ತು ಬದ್ಧ ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬಂದಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಡಿಕೆ ಶಿವಕುಮಾರ್ ಭೇಟಿ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಿದ್ದರಾಮಯ್ಯ, ದೆಹಲಿಯ ಆಸ್ಪತ್ರೆಯಲ್ಲಿರುವಾಗಲೇ ಡಿಕೆಶಿ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಆದರೆ ಅದಕ್ಕೆ ಇಡಿ ಅಧಿಕಾರಿಗಳು ಅವಕಾಶ ನೀಡಿರಲಿಲ್ಲ. ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಆಗಲೂ ನನಗೆ ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ ಎಂದರು.

ಡಿಕೆಶಿ ಅವರನ್ನು ಶನಿವಾರವೇ ಭೇಟಿ ಮಾಡಬೇಕಿತ್ತು. ಆದರೆ ನನಗೆ ಬೇರೆ ಕೆಲಸ ಇದ್ದ ಕಾರಣ ಗದಗಕ್ಕೆ ಹೋಗಿದ್ದೆ. ಆದ್ದರಿಂದ ಇಂದು ಅವರ ಮನೆಗೆ ಬಂದಿದ್ದೇನೆ. ಅವರನ್ನು ಮಾತನಾಡಿಸಿದ್ದೇನೆ. ಅವರ ಆರೋಗ್ಯ ಈಗ ಸುಧಾರಿಸಿದೆ. ನ್ಯಾಯಾಂಗ ಬಂಧನದಲ್ಲಿ ಇದ್ದಾಗ ಸ್ವಲ್ಪ ಬಿಪಿ ಶುಗರ್ ಜಾಸ್ತಿಯಾಗಿತ್ತು ಎಂದು ಹೇಳಿದ್ದರು. ಆದರೆ ಈಗ ಪರವಾಗಿಲ್ಲ ಚೆನ್ನಾಗಿ ಇದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದೇ ವೇಳೆ ಡಿ.ಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಸ್ಥಾನಮಾನ ನೀಡಲಾಗುತ್ತದೆ ಎಂದು ಕೇಳಿದಾಗ ಅದು ಹೈಕಮಾಂಡ್‍ಗೆ ಬಿಟ್ಟ ವಿಚಾರ, ಅದನ್ನು ನಾವು ಹೇಳಲು ಆಗುವುದಿಲ್ಲ. ಹೈಕಮಾಂಡ್ ಅದನ್ನು ತೀರ್ಮಾನ ಮಾಡುತ್ತದೆ ಎಂದರು. ಉಪಚುನಾವಣೆ ಬಗ್ಗೆ ಕೇಳಿದಾಗ ಈಗ ಆ ವಿಚಾರವನ್ನು ಮಾತನಾಡುವುದು ಬೇಡ ಅದರ ಬಗ್ಗೆ ಇನ್ನೊಂದು ದಿನ ಚರ್ಚೆ ಮಾಡೋಣ ಎಂದು ಹೇಳಿದರು.

ಶನಿವಾರ ಬೆಂಗಳೂರಿಗೆ ಬಂದಿದ್ದ ಡಿಕೆಶಿಗೆ ಅಭಿಮಾನಿಗಳು, ಕಾರ್ಯಕರ್ತರಿಂದ ಭರ್ಜರಿ ಸ್ವಾಗತ ಸಿಕ್ಕಿತ್ತು. ಆದರೆ ಸಿದ್ದರಾಮಯ್ಯ ಮಾತ್ರ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯರನ್ನು ತರಾಟೆಗೆ ತೆಗೆದುಕೊಂಡಿದ್ದು, ಹೈಕಮಾಂಡ್ ಸೂಚನೆಯಂತೆ ಇಂದು ಅವರು ಡಿಕೆಶಿಯನ್ನು ಅವರ ನಿವಾಸ ಸದಾಶಿವನಗರದಲ್ಲಿ ಭೇಟಿ ಮಾಡಿದ್ದು, ಡಿಕೆಶಿಯನ್ನು ಆಲಂಗಿಸಿಕೊಂಡು ನೈತಿಕ ಧೈರ್ಯ ತುಂಬಿದ್ದಾರೆ.

ಈ ವೇಳೆ ಸಿದ್ದು ಮತ್ತು ಪರಮೇಶ್ವರ್ ಬಳಿ ಡಿಕೆಶಿ ತಂದೆಗೆ ಎಡೆ ಇಡುವುದು ತಪ್ಪಿಹೋದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಗೌರಿ ಹಬ್ಬದ ಸಂದರ್ಭದಲ್ಲಿ ತಂದೆಗೆ ಎಡೆ ಇಡಬೇಕಿತ್ತು. ಆದರೆ ಆಗ ಐಟಿ ವಿಚಾರಣೆಯಿಂದ ಅದು ಕೂಡ ಆಗಲಿಲ್ಲ. ಈಗ ಇನ್ನೊಂದು ದಿನ ನೋಡಿ ನಾನು, ಸುರೇಶ್ ಎಡೆ ಇಟ್ಟು ಪೂಜೆ ಮಾಡಬೇಕು ಎಂದು ಡಿಕೆಶಿ ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ.

Click to comment

Leave a Reply

Your email address will not be published. Required fields are marked *