ಸಿದ್ದರಾಮಯ್ಯ ಮಾಡದ ತಪ್ಪಿಗೆ ನೋವು ಅನುಭವಿಸಿದ್ದಾರೆ: ರಮೇಶ್ ಕುಮಾರ್

Public TV
2 Min Read
ramesh kumar

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಗನನ್ನು ಕಳೆದುಕೊಂಡ ನೋವಿಗಿಂತ, ತಾವು ಮಾಡದೇ ಇರುವ ತಪ್ಪಿಗೆ ಹೆಚ್ಚು ನೋವು ಅನುಭವಿಸಿದ್ದಾರೆ ಎಂದು ಶಾಸಕ ರಮೇಶ್ ಕುಮಾರ್ ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ಆಡಳಿತ ಅಂತರಂಗ ಬಹಿರಂಗ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೈಗೆ ಬಂದ ಮಗ ಕಣ್ಮುಂದೆ ಸಾವು, ಜನರಿಗೆ ಇನ್ನಷ್ಟು ಉತ್ತಮ ಕೆಲಸ ಮಾಡಬೇಕು ಅಂದುಕೊಂಡಾಗ ಸೋಲು. ಈ ಸೋಲಿನಿಂದ ಆ ಜೀವ ಎಷ್ಟು ಪರಿತಪಿಸಿರಬಹುದು. ಅವಿಭಕ್ತ ಕುಟುಂಬದಲ್ಲಿ ಆದ ಸಣ್ಣ ಗಲಾಟೆ ಕುಟುಂಬ ಒಡೆಯಿತು. ಅದೇ ರೀತಿ ಕಾಂಗ್ರೆಸ್‍ನಲ್ಲಿ ಆದ ಬೆಳವಣಿಗೆಗಳಿಂದ ಸಿದ್ದರಾಮಯ್ಯ ಅವರಿಗೆ ಈ ಪರಿಸ್ಥಿತಿಗೆ ಬರಬೇಕಾಯಿತು. ಮಾಡದ ತಪ್ಪಿಗೆ ಅವರು ನೋವು ಅನುಭವಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರ ಪರಿಸ್ಥಿತಿ ತಿಳಿಸಿ ದುಃಖಿಸಿದರು.

SIDDARAMAIAH

2018ರಲ್ಲಿ ಕಾಂಗ್ರೆಸ್ ಸೋಲುವುದಕ್ಕೆ ಕಾಂಗ್ರೆಸ್ ಒಳಜಗಳವೇ ಕಾರಣ. ದೇವರಾಜು ಅರಸು ಬಂದ ಬಳಿಕ ಭ್ರಷ್ಟಾಚಾರ ಜಾಸ್ತಿ ಆಯ್ತು ಎಂದು ಹೇಳಿದರು. ಯಾಕೆಂದರೆ ಅವರನ್ನ ಸಮರ್ಥಿಸಿಕೊಳ್ಳುವವರು ಯಾರು ಇರಲಿಲ್ಲ. ಹಾಗೆಯೇ ಸಿದ್ದರಾಮಯ್ಯ ಅವರಿಗೂ ಅದೇ ಪರಿಸ್ಥಿತಿ ಆಗಿದೆ. ಇವರಿಬ್ಬರಿಗಿಂತ ಮೊದಲು ಬಂದವರು ಬಹಳ ಹಣ ತಿಂದರು. ಅವರಿಗೆ ಸಮರ್ಥಿಸಿಕೊಳ್ಳಲು ಜನರಿದ್ದರು ಎಂದರು.

Congress 901x600

ನೀವು ನೋಡಿರುವುದು ಬಹಿರಂಗ ಆದರೆ ಒಳಗೆ ಕೈ, ಕಾಲು ಹಿಡಿದುಕೊಂಡು ನಮ್ಮನ್ನ ಬದುಕಿಸಿ ಎಂದು ಸಹಿ ಹಾಕಿಸಿರುತ್ತಾರೆ, ಅದು ಅಂತರಂಗ. ಇದರ ಬಗ್ಗೆ ಪುಸ್ತಕದಲ್ಲಿ ಬರೆದಿಲ್ಲ, ಇದು ಸಿದ್ದರಾಮಯ್ಯ ಅವರೇ ಬರೆಯಲು ಸಾಧ್ಯ. ಹೀಗಾಗಿ ಟೈಟಲ್ ಕೊಟ್ಟಿರುವುದು ಸರಿಯಲ್ಲ ಎಂದು ಪುಸ್ತಕದ ಬಗ್ಗೆ ಅಭಿಪ್ರಾಯ ತಿಳಿಸಿದರು.

ramesh kumar 1

ಕೋಲಾರಕ್ಕೆ ಬನ್ನಿ ಎಂದು ನಾನು, ನಜೀರ್ ಅಹಮದ್ ಸಿದ್ದರಾಮಯ್ಯ ಅವರನ್ನು ಬೇಡಿಕೊಂಡಿದ್ದೆವು. ತನ್ನ ಕ್ಷೇತ್ರ ಬಿಟ್ಟು ಬರಬಾರದು ಎಂದು ಅವರು ಬರಲಿಲ್ಲ. ಕೆಲವರು ಬಿಟ್ಟಿಲ್ಲವಾ ಕ್ಷೇತ್ರವನ್ನ? ಅವರಿಗಿಲ್ಲದು ನಿಮಗೆ ಬೇಕಾ? ಚಾಮುಂಡೇಶ್ವರಿ ಸೋಲಿನಿಂದ ಹೊರಬನ್ನಿ. ನೀವೇ ಸಾಕಿದ ಗಿಣಿ ನಿಮಗೆ ಕುಕ್ಕಿದೆ ಎಂದು ಹಾಡು ಹೇಳಿ, ಅನರ್ಹ ಶಾಸಕರು ಕೇಳಿದ್ದೆಲ್ಲ ಕೊಟ್ಟಿರಿ, ಆದರೆ ಅವರು ನಿಮಗೆ ಕುಕ್ಕಿ ಹೋಗಿದ್ದಾರೆ. ಆದ್ದರಿಂದ ನಿಮ್ಮ ಮುಖದ ಮೇಲೆ ಗಾಯ ಆಗಿದೆ. ಅದನ್ನ ಹೊಗಲಾಡಿಸಬೇಕಿದೆ ಎಂದು ಅನರ್ಹ ಶಾಸಕರ ವಿರುದ್ಧ ರಮೇಶ್ ಕುಮಾರ್ ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *