– ಶ್ಯಾನಭೋಗರ ಮಾತು ಕೇಳಿದ್ರೆ ಸಿಎಂ ಆಗ್ತಿರಲಿಲ್ಲ ಎಂದ್ರು
ಬೆಂಗಳೂರು: ರಾಜ್ಯ ಮುಖ್ಯಮಂತ್ರಿಯಾಗಿ ನಾನು ಜನತೆಗೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದೆ. ಆದರೆ ಚಾಮುಂಡೇಶ್ವರಿ ಕ್ಷೇತ್ರದ ಜನ ನನ್ನನ್ನು ಸೋಲಿಸಿದರು. ಬಹುಶಃ ವರುಣಾ ಕ್ಷೇತ್ರದಲ್ಲಿ ನಿಂತಿದ್ದರು ಕೂಡ ನೀವು ಆರ್ಶೀವಾದ ಮಾಡುತ್ತಿದ್ದಿರಿ ಎಂದು ಸುತ್ತೂರು ಜಾತ್ರ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಪದೇ ಪದೇ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಸೋಲು ಕನವರಿಕೆ ಆಗುತ್ತಿದ್ದು, ಈ ಹಿಂದೆ ಹಲವು ವೇದಿಕೆಗಳಲ್ಲಿ ತಮ್ಮ ಸೋಲಿನ ಬಗ್ಗೆ ಪ್ರಸ್ತಾಪ ಮಾಡಿದ್ದರು. ಇಂದು ಕೂಡ ತಮ್ಮ ಆರಂಭಿಕ ಜೀವನದ ಬಗ್ಗೆ ನೆನಪಿಸಿಕೊಂಡ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದ ಸೋಲು ಕನವರಿಕೆ ಆಯಿತು. ವೇದಿಕೆಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆಗೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದರು ಕೂಡ ಚಾಮುಂಡೇಶ್ವರಿ ಜನರು ನನ್ನನ್ನು ಸೋಲಿಸಿದರು. ಆದರೆ ದೂರದ ಎಲ್ಲೋ ಬಾದಾಮಿ ಕ್ಷೇತ್ರದ ಜನ ಗೆಲ್ಲಿಸಿದರು. ವರುಣಾ ಕ್ಷೇತ್ರದಲ್ಲಿ ನಿಂತಿದ್ದರು ಕೂಡ ನೀವು ಆಶೀರ್ವಾದ ನೀಡುತ್ತಿದ್ದಿರಿ. ಹೀಗಾಗಿ ಈ ವರುಣಾ ಕ್ಷೇತ್ರ ಹಾಗೂ ಸುತ್ತೂರು ಮಠದ ಮೇಲೆ ನಮಗೆ ಅಪಾರ ಗೌರವ ಇದೆ ಎಂದರು.
ಇದಕ್ಕೂ ಮುನ್ನ ಆರಂಭಿಕ ಜೀವನದ ಬಗ್ಗೆ ನೆನಪಿಸಿಕೊಂಡ ಅವರು, ಊರಿನಲ್ಲಿ ಪಂಚಾಯಿತಿ ಸೇರಿಸಿ ನಾನು ಲಾಯರ್ ಓದಿದೆ. ಏಕೆಂದರೆ ನಮ್ಮಪ್ಪ ನಮ್ಮೂರಿನ ಶ್ಯಾನಬೋಗರ ಮಾತು ಕೇಳುತ್ತಿದ್ದರು. ನನ್ನ ಮಗ ಲಾಯರ್ ಓದಬೇಕು ಎಂದು ಶ್ಯಾನಬೋಗರ ಬಳಿ ಕೇಳಿದರು. ಆಗ ಆ ಶ್ಯಾನಬೋಗರು ಹೇ ಕುರುಬರು ಲಾಯರ್ ಓದಲು ಆಗುತ್ತಾ? ಲಾಯರ್ ಗಿರಿ ಏನಿದ್ರು ಬ್ರಾಹ್ಮಣರ ಕೆಲಸ ಎಂದು ಹೇಳಿದ್ದರು. ಅಂದು ಶ್ಯಾನಬೋಗರ ಮಾತು ಕೇಳಿ ನಮ್ಮಪ್ಪ ನನಗೆ ಓದಿಸೋಲ್ಲ ಎಂದಿದ್ದ. ನಾನು ಮನೆಯಲ್ಲಿ ಗಲಾಟೆ ಮಾಡಿ ಲಾಯರ್ ಓದಿಸಲಿಲ್ಲ ಅಂದರೆ ಪಾಲು ಕೊಟ್ಟು ಬಿಡು ಎಂದು ಕೇಳಿದ್ದೆ. ಆಗ ಊರಿನಲ್ಲಿ ಪಂಚಾಯಿತಿ ಸೇರಿಸಿ ಕೊನೆಗೆ ನಾನು ಲಾಯರ್ ಓದಲು ಅನುಮತಿ ನೀಡಿದರು. ಆಗ ಶ್ಯಾನಬೋಗರ ಮಾತು ಕೇಳಿದರೆ ಲಾಯರ್ ಆಗುತ್ತಿರಲಿಲ್ಲಾ ಎಂದರು. ಅಲ್ಲದೇ ಲಾಯರ್ ಓದಿದಕ್ಕೆ ಸಿಎಂ ಆದೆ ಎಂದರು.
ಇದೇ ವೇಳೆ ಯಾರು ಕೂಡ ಕರ್ಮವನ್ನ ನಂಬಬೇಡಿ ಎಂದ ಸಿದ್ದರಾಮಯ್ಯ ಅವರು, ಈ ಜನ್ಮದಲ್ಲಿ ಹೀಗಾಗಿದ್ದೆ, ಆ ಜನ್ಮದಲ್ಲಿ ಹಾಗಾಗಿದ್ದೆ ಎಂಬುವುದನ್ನು ನಂಬಲೇಬೇಡಿ. ಅದೊಂದು ದೊಡ್ಡ ಸುಳ್ಳಿನ ಕಥೆ. ಪಾಪ ಮಾಡಿದರೆ ಕುರಿ, ಕೋಳಿ, ನಾಯಿ ಆಗುತ್ತಾರೆ ಎಂಬುವುದು ಸುಳ್ಳು. ನಾನು ನಂಬಲ್ಲ ನೀವು ನಂಬಬೇಡಿ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv