ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಗಡ್ಡ ಬಿಟ್ಟು ಸುದ್ದಿಯಾದ ಬೆನ್ನಲ್ಲೇ ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಗಡ್ಡ ಬಿಟ್ಟಿದ್ದಾರೆ.
ಇಂದು ಅನರ್ಹ ಶಾಸಕರ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಸಿದ್ದರಾಮಯ್ಯ ಅವರು ಮಾತನಾಡಿದರು. ಈ ವೇಳೆ ಪತ್ರಕರ್ತರು ನೀವು ಯಾಕೆ ದಾಡಿ ಬಿಟ್ಟಿದ್ದೀರಿ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ನಾನು ಈವಾಗ ಅಲ್ಲ ಈ ಹಿಂದೆಯೂ ಗಡ್ಡ ಬಿಟ್ಟಿದ್ದೆ, ಬಹಳ ವರ್ಷ ದಾಡಿ ಬಿಟ್ಟಿದ್ದೆ. 1974 ನಿಂದ ಮುಖ್ಯಮಂತ್ರಿ ಆಗುವವರೆಗೂ ಬಿಟ್ಟಿದ್ದೆ. ಆ ಬಳಿಕ ಬಿಳಿ ಗಡ್ಡ ಬಂತಲ್ಲ ಎಂದು ಟ್ರಿಮ್ಮರ್ ನಲ್ಲಿ ಸ್ವಲ್ಪ ಸ್ವಲ್ಪ ಟ್ರಿಮ್ ಮಾಡುತ್ತಿದ್ದೆ ಅಷ್ಟೇ. ಈಗ ಯಾಕೋ ಮತ್ತೆ ಗಡ್ಡ ಬಿಡೋಣ ಅನಿಸಿತ್ತು, ಅದಕ್ಕೆ ಬಿಟ್ಟಿದ್ದೀನಿ ಎಂದರು.
ಅಕ್ರಮ ಹಣ ವರ್ಗಾವಣೆಯ ಆರೋಪ ಹೊತ್ತು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ಕೈಗೆ ಸಿಲುಕಿ ತಿಹಾರ್ ಜೈಲು ಸೇರಿದ್ದ ಡಿಕೆಶಿ ಗಡ್ಡ ಬಿಟ್ಟಿದ್ದರು. ಆ ಬಳಿಕ ಜಾಮೀನಿನ ಮೇಲೆ ಹೊರಂಬದರೂ ಡಿಕೆಶಿ ಗಡ್ಡ ಮಾತ್ರ ತೆಗೆಯಲಿಲ್ಲ. ಈಗಲೂ ತೆಗೆದಿಲ್ಲ. ಇದನ್ನೂ ಓದಿ; ಡಿಕೆಶಿ ಸ್ಟೈಲಿಶ್ ಗಡ್ಡಕ್ಕೆ ಅಭಿಮಾನಿಗಳು ಫಿದಾ
ಜೈಲಿನಿಂದ ಬಿಡುಗಡೆಗೊಂಡು ಬೆಂಗಳೂರಿಗೆ ಬರುತ್ತಿದ್ದಂತೆಯೇ ಡಿಕೆಶಿ ಗಡ್ಡ ಫೇಮಸ್ ಆಗಿತ್ತು. ಆ ನಂತರ ಮಠಗಳಿಗೆ ಭೇಟಿ ಮಾಡಿ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದು, ಸದ್ಯ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಸಂಜೆ ಅಥವಾ ನಾಳೆ ಡಿಸ್ಚಾರ್ಜ್ ಆಗುವ ಸಾಧ್ಯತೆಗಳಿವೆ.