ಬೆಂಗಳೂರು: ಬಿಜೆಪಿ ಸರ್ಕಾರ ಬೀಳಿಸಲ್ಲ ಎಂಬ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ ತಿರುಗೇಟು ಕೊಟ್ಟಿದ್ದಾರೆ.
ನಗರದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕುಮಾರಸ್ವಾಮಿ 2006ರಲ್ಲಿ ಬಿಜೆಪಿ ಜೊತೆ ಸೇರಿ ಸರ್ಕಾರ ನಡೆಸಿದವರು. ಹೀಗಾಗಿ ಕುಮಾರಸ್ವಾಮಿ ಅವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ. ಕುಮಾರಸ್ವಾಮಿ ಹೇಳಿಕೆ ನೋಡಿದರೆ ಅವರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಅನ್ನಿಸುತ್ತಿದೆ. ನಾನು ಬಿಜೆಪಿ ಸರ್ಕಾರವನ್ನು ಉಳಿಸ್ತೀನಿ ಎಂದರೆ ಅರ್ಥ ಏನು ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ನಾನು ರಿವೇಂಜ್ ತೆಗೆದುಕೊಳ್ಳಲ್ಲ, ಬಿಜೆಪಿ ಸರ್ಕಾರ ಬೀಳಿಸುವುದಿಲ್ಲ: ಹೆಚ್‍ಡಿಕೆ
Advertisement
Advertisement
ಅವರ ಹೇಳಿಕೆಯಿಂದ ಬಿಜೆಪಿಗೆ ಕುಮಾರಸ್ವಾಮಿ ಬೆಂಬಲ ಇದೆ ಅನಿಸುತ್ತಿದೆ. ಕೋಮುವಾದಿಗಳಿಗೆ ಕುಮಾರಸ್ವಾಮಿ ಬೆಂಬಲ ಇದೆ ಎಂದರ್ಥ. ನಾನು ಬಿಜೆಪಿ ಸರ್ಕಾರ ಬೀಳಿಸ್ತೀನಿ ಅಂತ ಹೇಳಲಿಲ್ಲ. 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ, ಬಿಜೆಪಿ ಸರ್ಕಾರ ಮೆಜಾರಿಟಿ ಕಳೆದುಕೊಳ್ಳುತ್ತದೆ. ಆಗ ಬಿಜೆಪಿಯವರು ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಹೇಳುವ ಮೂಲಕ ಎಚ್‍ಡಿಕೆಗೆ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.
Advertisement
Advertisement
ಹೆಚ್‍ಡಿಕೆ ಹೇಳಿದ್ದೇನು?
ಇಂದು ಚಿಕ್ಕೋಡಿ ಪ್ರವಾಸ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಹೆಚ್‍ಡಿಕೆ, ನನ್ನನ್ನು ಅಧಿಕಾರದಿಂದ ಕೆಳಗಿಳಿಸಿದ ಬಿಜೆಪಿ ವಿರುದ್ಧ ನಾನು ರಿವೇಂಜ್ ತೆಗೆದುಕೊಳ್ಳಲ್ಲ. ನನ್ನ ಮೈತ್ರಿ ಸರ್ಕಾರವನ್ನು ಅವರು ಕೆಡೆವಿದರು ಎಂದು ಬಿಜೆಪಿ ಸರ್ಕಾರವನ್ನು ನಾನು ಬೀಳಿಸುವುದಿಲ್ಲ. ಸರ್ಕಾರದ ಗಮನವನ್ನು ನಾನು ಮೊದಲು ಸೆಳೆಯುತ್ತೇನೆ. ಕೆಲಸ ಆಗಲಿಲ್ಲ ಎಂದರೆ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದರು.