ಬೆಂಗಳೂರು: ಭ್ರಷ್ಟಾಚಾರ ವಿಚಾರವಾಗಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ನೀವೆಲ್ಲರೂ ಸಾಮೂಹಿಕ ರಾಜೀನಾಮೆ ನೀಡಿ ಮನೆಗೆ ಹೋಗುವುದು ಒಳಿತು ಎಂದು ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯ ಹಗರಣಗಳನ್ನು ತನಿಖೆಗೆ ಒತ್ತಾಯಿಸಿ ಸಿಎಂಗೆ ಪತ್ರ ಬರೆಯಲಿರುವ ಸಚಿವ ಅಶ್ವಥ್ ನಾರಾಯಣ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಇದೇ ರೀತಿ ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಅವರ ಮೇಲಿನ ಆರೋಪಗಳ ಬಗ್ಗೆಯೂ ತನಿಖೆಗೆ ಒತ್ತಾಯಿಸಿ ಪತ್ರ ಬರೆಯಲು ಕೇಳಿಕೊಳ್ಳುತ್ತೇನೆ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಶೀಘ್ರವೇ ಗುಣಮುಖರಾಗಿ – ಸ್ಟಾಲಿನ್‌ಗೆ ಶುಭಹಾರೈಸಿದ ಬೊಮ್ಮಾಯಿ
ಟ್ವೀಟ್‌ನಲ್ಲೇನಿದೆ?
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಯಿತು, ನಮ್ಮ ಸರ್ಕಾರದ ಹಗರಣಗಳ ಬಗ್ಗೆ ತನಿಖೆಗೆ ಈ ಮೂರು ವರ್ಷ ಸಾಕಾಗಲಿಲ್ಲವೇ? ನಿಮ್ಮ ತಲೆಗೆ ಹಗರಣಗಳು ಸುತ್ತಿಕೊಂಡ ಕೂಡಲೇ ನಮ್ಮ ಕಾಲದ ಹಗರಣಗಳು ನೆನಪಾಯಿತೇ?
ರಾಜ್ಯ ಬಿಜೆಪಿ ಸರ್ಕಾರದ ಸಾಲು ಸಾಲು ಹಗರಣಗಳನ್ನು ಬಯಲಿಗೆಳೆಯದಂತೆ ತಡೆಯಲು ನೀವು ಮಾಡುತ್ತಿರುವ ಬೆದರಿಕೆ ರೂಪದ ಆರೋಪಗಳಿಗೆ ನಾವು ಬಗ್ಗುವವರಲ್ಲ. ಈ ರೀತಿಯ ಈ ಬ್ಲಾಕ್ ಮೇಲ್ ತಂತ್ರದಿಂದ ನಮ್ಮ ಬಾಯಿ ಮುಚ್ಚಿಸಬಹುದೆಂದು ತಿಳಿದುಕೊಂಡಿದ್ದರೆ ಅದು ನಿಮ್ಮ ಭ್ರಮೆ ಅಶ್ವಥ್ ನಾರಾಯಣ ಅವರೇ. ಇದನ್ನೂ ಓದಿ: ಮುಸ್ಲಿಂ ಮಹಿಳೆಯರು ಶಾಂತಿ ಕೇಳುವುದರಲ್ಲಿ ತಪ್ಪಿಲ್ಲ: ಡಿ.ಕೆ ಶಿವಕುಮಾರ್
ನಿಮ್ಮ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ತನಿಖೆಗಾಗಿ ಇಡೀ ವಿಧಾನಸೌಧವನ್ನೇ ತನಿಖಾ ಸಂಸ್ಥೆಗಳಿಗೆ ಬಿಟ್ಟುಕೊಡಬೇಕಾಗಬಹುದು. ಸಚಿವರು ಬೇರೇನೂ ಕೆಲಸ ಮಾಡದೆ ತನಿಖಾಧಿಕಾರಿಗಳ ಮುಂದೆ ನಿತ್ಯ ವಿಚಾರಣೆಗೆ ಹಾಜರಿ ಹಾಕಬೇಕಾಗಬಹುದು. ಇದಕ್ಕಿಂತ ಎಲ್ಲರೂ ಸಾಮೂಹಿಕ ರಾಜೀನಾಮೆ ನೀಡಿ ಮನೆಗೆ ಹೋಗುವುದು ಒಳಿತು ಎಂದು ಟ್ವೀಟ್ ಮಾಡಿ ಗುಡುಗಿದ್ದಾರೆ.