ಬಾಗಲಕೋಟೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೇವಲ ಕನಸು ಕಾಣುತ್ತಾರೆ. ಯಾವ ಕನಸುಗಳು ನನಸು ಆಗಲ್ಲ. ಅವರ ಕನಸಿನಲ್ಲಿ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಿಎಂ ಖುರ್ಚಿ ಮಾತ್ರ ಕಾಣಿಸುತ್ತದೆ. ಅವರಿಗೆ ಅಧಿಕಾರ ದಾಹವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯ ಬಾದಾಮಿ ತಾಲೂಕಿನ ಚಿಕ್ಕಮುಚ್ಚಳಗುಡ್ಡ ಹೆಲಿಪ್ಯಾಡ್ ನಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಪ್ರಣಾಳಿಕೆಯಲ್ಲಿ ಕೆಲವು ಕಾನೂನುಗಳನ್ನು ಬದಲಾವಣೆ ಮಾಡ್ತೇವೆ ಅಂತಾ ಹೇಳಿದ್ದೀವಿ. ಎಲ್ಲಿಯೂ ದೇಶದ್ರೋಹಿಗಳಿಗೆ ಸಹಾಯ ಮಾಡ್ತೀವಿ ಅಂತಾ ಹೇಳಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಬಿಜೆಪಿ ಪಾಲು ಜೀರೊ ಎಂದು ಟೀಕಿಸಿದರು.
ಬಿಜೆಪಿ ಅವರು ನನ್ನನ್ನು ಧರ್ಮ ವಿರೋಧಿ ಅಂತಾ ಕರೆದರು, ಬಸವಣ್ಣ ಏನು ಹೇಳಿದ್ನೋ ನಾನು ಅದನ್ನೆ ಹೇಳಿದ್ದೀನಿ. ಬಸವಣ್ಣನ ವಿರೋಧ ಮಾಡಿದರೆ ನನ್ನನ್ನು ವಿರೋಧ ಮಾಡಿ. ಬಸವಣ್ಣನ ಒಪ್ಕೋಳೊದಾದ್ರೆ ನನ್ನನ್ನು ಒಪ್ಪಿಕೊಳ್ಳಿ. ಬಸವಣ್ಣನ ವಿಚಾರಗಳೇ ಸಂವಿಧಾನದಲ್ಲಿ ಇರೋದು. ಬಸವಣ್ಣನ ಅನುಭವ ಮಂಟಪ ಹಾಗೂ ಸಂವಿಧಾನ ಒಂದೇ ಆಗಿದೆ. ಬಾಗಲಕೋಟೆ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಗದ್ದಿಗೌಡರ ಸೇರಿದಂತೆ ಎಲ್ಲ ಕಮಲ ಅಭ್ಯರ್ಥಿಗಳು ತಮ್ಮ ಮುಖ ನೋಡಿ ಮತ ಹಾಕಬೇಡಿ. ಮೋದಿ ಮುಖ ನೋಡಿ ಮತ ಹಾಕಿ ಎಂದು ಹೇಳುತ್ತಿದ್ದಾರೆ. ಐದು ವರ್ಷ ಮೋದಿ ಮುಖವನ್ನು ನೋಡಿದ್ದೀವಿ. ಅವರೂ ಏನೂ ಮಾಡಿಲ್ಲ. ಮತ್ಯಾಕೆ ನಿಮಗೆ ವೋಟ್ ಹಾಕಬೇಕೆಂದು ಪ್ರಶ್ನಿಸಿದರು
ಕಾಂಗ್ರೆಸ್ಸಿಗರು ದೇಶ ಪ್ರೇಮಿಗಳು, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು. ದೇಶದ್ರೋಹಿಗಳಿಗೆ ಸಹಾಯ ಮಾಡ್ತಾರಾ? ದೇಶ ದ್ರೋಹಿಗಳಿಗೆ ಸಹಾಯ ಮಾಡುವರು ಬಿಜೆಪಿಗರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.