Bengaluru CityDistrictsKarnatakaLatestLeading NewsMain Post

ಮೋದಿ, ಬಿಜೆಪಿಯವರು ಸೇರಿ ದೇಶವನ್ನ ಬರ್ಬಾದು ಮಾಡಿಬಿಟ್ರು – ಸಿದ್ದು ಗುದ್ದು

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಹಾಗೂ ಬಿಜೆಪಿಯವರು ಸೇರಿ ಇಡೀ ದೇಶವನ್ನ ಬರ್ಬಾದು ಮಾಡಿಬಿಟ್ಟರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ತಮ್ಮ ಪತ್ರಿಕಾ ಹೇಳಿಕೆಯಲ್ಲಿಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ, ಈ ಬಾರಿ ರಾಜ್ಯದ ಜನರು ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿಯನ್ನು ಕಿತ್ತೆಸೆದು ನೆಮ್ಮದಿಯ ನಾಳೆಗಳ ಕುರಿತು ಯೋಚಿಸಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡಿದ್ದಾತ ಅಂಬುಲೆನ್ಸ್ ಬಾಗಿಲು ತೆಗೆಯೋಕಾಗದೆ ಸಾವನ್ನಪ್ಪಿದ!

ಪ್ರಕಟಣೆಯಲ್ಲಿ ಏನಿದೆ?
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರ ಹಿಂದೆ ವಿರೋಧ ಪಕ್ಷದವರಿದ್ದಾರೆ ಎಂದು ಹೇಳಿ ಜನರನ್ನು ಬಿಜೆಪಿಯವರು ದಾರಿ ತಪ್ಪಿಸಲು ನೋಡುತ್ತಿದ್ದಾರೆ. ಸರ್ಕಾರ ನಡೆಸುವವರಿಗೆ ಸಣ್ಣ ಲಜ್ಜೆ ಮತ್ತು ಕಾನೂನಿನ ತಿಳುವಳಿಕೆ ಇದ್ದರೆ ಹೀಗೆಲ್ಲ ಮಾತನಾಡುತ್ತಿರಲಿಲ್ಲ.

ಕೆಂಪಣ್ಣ ಒಬ್ಬರೇ ನನ್ನನ್ನ ಭೇಟಿ ಮಾಡಿರಲಿಲ್ಲ. ಗುತ್ತಿಗೆದಾರರ ಸಂಘದ 50ಕ್ಕೂ ಹೆಚ್ಚು ಜನ ಭೇಟಿ ಮಾಡಿದ್ದರು. ಸಿದ್ದರಾಮಯ್ಯನವರನ್ನು ಯಾಕೆ ಭೇಟಿ ಮಾಡಿದರು ಎಂದು ಬೊಮ್ಮಾಯಿಯವರಾದಿಯಾಗಿ, ಅನೇಕ ಸಚಿವರು ಮಾತನಾಡಿದ್ದಾರೆ. ಗುತ್ತಿಗೆದಾರರ ಸಂಘದವರು ಮುಖ್ಯಮಂತ್ರಿಗಳನ್ನೂ ಭೇಟಿ ಮಾಡಿದ್ದರು. ಆದರೆ ಸಮಸ್ಯೆ ಬಗೆಹರಿಯುವ ಬದಲು, ಗುತ್ತಿಗೆದಾರರ ಸಂಘವನ್ನೆ ಒಡೆಯಲು ಪ್ರಯತ್ನಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪವನ್ನು ಅವರು ಮಾಡುತ್ತಿದ್ದಾರೆ. ಜೊತೆಗೆ ಬಿಬಿಎಂಪಿಯಲ್ಲಿ ಶೇ.40 ರಷ್ಟಿದ್ದ ಕಮಿಷನ್ ದಂಧೆ, ಈಗ 50 ಪರ್ಸೆಂಟ್‌ಗೆ ತಲುಪಿದೆ ಎಂದು ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಸರ್ಕಾರ ಕೊಟ್ಟ ಮಾತಿಗೆ ತಪ್ಪಿ ಜನರ ನಂಬಿಕೆಗೆ ದ್ರೋಹ ಎಸಗಿದೆ, ಇದು ವಚನ ವಂಚನೆ: ಸಿದ್ದರಾಮಯ್ಯ

ಗುತ್ತಿಗೆದಾರರ ಸಂಘದವರು ಕಳೆದ ಒಂದು ವರ್ಷದಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಚೌಕಿದಾರ್ ಎಂದು ತನ್ನನ್ನು ಹೊಗಳಿಕೊಂಡ ಮೋದಿಯವರಾಗಲಿ, ರಾಜ್ಯ ಬಿಜೆಪಿ ಸರ್ಕಾರವಾಗಲಿ ಅವರ ಮನವಿಗಳನ್ನು ಗಂಭೀರವಾಗಿ ಪರಿಗಣಿಸಿದ್ದರೆ ಇವತ್ತು ಈ ಸಮಸ್ಯೆ ಬರುತ್ತಿರಲಿಲ್ಲ. ಬೆಳಗಾವಿಯ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ.

ರಾಜ್ಯ ಸರ್ಕಾರದ ಕಮಿಷನ್ ದಂಧೆಯಿಂದಾಗಿ ರಾಜ್ಯದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಗುಣಮಟ್ಟ ಹೇಗಿದೆ ಎಂದು ಜನರು ನೋಡ್ತಿದ್ದಾರೆ. ಪ್ರಧಾನಿ ಬಂದು ಹೋದ ಮಾರನೇ ದಿನವೇ ಹಾಕಿದ್ದ ಟಾರು ಕಿತ್ತು ಬರುತ್ತದೆ. ಮಡಿಕೇರಿಯಲ್ಲಿ ಕಳಪೆ ಕಾಮಗಾರಿ ಮಾಡಿ ಅದನ್ನು ನೋಡಲು ಹೋದರೆ ಟಾರ್ಪಾಲಿನಿಂದ ಮರೆ ಮಾಡಿ ಕಳ್ಳತನವನ್ನು ಮುಚ್ಚಿಹಾಕಲು ನೋಡುತ್ತೀರಿ. ನಿಮ್ಮ ಗೂಂಡಾಗಳನ್ನು ಬಿಟ್ಟು ದಾಂಧಲೆ ಎಬ್ಬಿಸಲು ನೋಡಿ ಜನರ ಗಮನ ಬೇರೆಡೆ ಸೆಳೆಯಲು ನೋಡುತ್ತೀರಿ. ಇದನ್ನೂ ಓದಿ: ಅಮೆರಿಕದ ವಿರುದ್ಧ ಬೆಂಗಳೂರಿನಲ್ಲಿ ಚೀನಾ ಕಾರ್ಯಕ್ರಮ – ಸಿದ್ದರಾಮಯ್ಯ, ಮಹಾದೇವಪ್ಪ ಮುಖ್ಯ ಅತಿಥಿ

ಬೆಂಗಳೂರಿನಲ್ಲಿ ಗುಂಡಿಬಿದ್ದ ರಸ್ತೆಗಳಿಂದ ಎಷ್ಟು ಜನರನ್ನ ಕೊಂದಿದ್ದೀರಿ ಎಂಬ ಲೆಕ್ಕವನ್ನು ಜನರಿಗೆ ಕೊಡಿ. ಹೆಚ್ಚೂ ಕಡಿಮೆ ರಾಜ್ಯದ ಹೈಕೋರ್ಟ್ ವಾರದಲ್ಲಿ ಎರಡು ದಿನ ಗುಂಡಿ ಮುಚ್ಚಿ ಎಂದು ತಾಕೀತು ಮಾಡುತ್ತಿದೆ. ಗುಂಡಿ ಮುಚ್ಚಿದ ಮಾರನೇ ದಿನವೇ ಮತ್ತೆ ಗುಂಡಿ ಬೀಳುತ್ತಿವೆ. ಆ ಗುಂಡಿಗೆ ಬಿದ್ದು ಯಾರದೋ ಮನೆಯ ಮಗ ಮರಣ ಹೊಂದುತ್ತಾನೆ. ಯಾರದೋ ಮನೆಯ ದೀಪ ಆರಿ ಹೋಗುತ್ತದೆ. ನಿಮಗೆ ಏನಾದರೂ ಮನುಷ್ಯತ್ವ ಇದ್ದರೆ ಇಂಥವೆಲ್ಲ ಕಣ್ಣಿಗೆ ಕಾಣುತ್ತದೆ. ಇದನ್ನೂ ಓದಿ: ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ – ಬಾಳೆಹಣ್ಣಿನ ಮೇಲೆ ಬರೆದು ರಥದ ಮೇಲೆ ಎಸೆದ ಅಭಿಮಾನಿ

bjp - congress

ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ನೀರಾವರಿ ಪಿಡಬ್ಲ್ಯೂಡಿ, ಸಾರಿಗೆ, ಸಬ್ ರಿಜಿಸ್ಟಾರ್, ಅರಣ್ಯ ಇಲಾಖೆ, ಹೀಗೆ ಎಲ್ಲ ಕಡೆಯೂ ಲಂಚ ರಾಕ್ಷಸ ಕುಣಿಯುತ್ತಿದ್ದಾನೆ. ಹೀಗಿದ್ದಾಗ ಸಾಮಾನ್ಯ ಜನರು ಯಾರ ಬಳಿಗೆ ಹೋಗಬೇಕು? ವಿರೋಧ ಪಕ್ಷದ ನಾಯಕರ ಬಳಿಯೂ ಬರಲು ಸಾಧ್ಯವಾಗದಿದ್ದರೆ ಜನ ಹತಾಶರಾಗಿ ಕೈಗೆ ಕಲ್ಲು, ದೊಣ್ಣೆಗಳನ್ನು ತೆಗೆದುಕೊಂಡು ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೆ ಎಂಬುದು ನೆನಪಿರಲಿ.

ನಮ್ಮ ಸರ್ಕಾರದ ಅವಧಿಯಲ್ಲಿ ನೀವು ಒತ್ತಾಯ ಮಾಡಿದ ಪ್ರಕರಣಗಳನ್ನೆಲ್ಲ ನಾವು ಸಿಬಿಐಗೆ ವಹಿಸಿದ್ದೆವು. ಯಾಕೆಂದರೆ ನಮಗೆ ನಮ್ಮ ಮೇಲೆ ನಂಬುಗೆ ಇತ್ತು. ಆದರೆ ನಾವು ಕಳೆದ 3 ವರ್ಷಗಳಲ್ಲಿ ಎಷ್ಟು ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದೇವೆ. ನೀವು ಒಂದಾದರೂ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಕೊಟ್ಟಿದ್ದೀರಾ?

40 ಪರ್ಸೆಂಟ್ ಕೇಸನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ. ಅವರು ತನಿಖೆ ಮಾಡಲಿ. ಗುತ್ತಿಗೆದಾರರ ಸಂಘದವರ ಬೇಡಿಕೆ ಸಂವಿಧಾನಕ್ಕೆ ವಿರುದ್ಧವಾಗಿದೆಯೆ? ಅವರು ತ್ವರಿತಗತಿಯಲ್ಲಿ ವಿಚಾರಣೆ ನಡೆಯಲಿ ಎಂದಿದ್ದಾರೆ. ನ್ಯಾಯಾಂಗ ತನಿಖೆ ಎಂಬುದು ಅಸಾಂವಿಧಾನಿಕ ಪ್ರಕ್ರಿಯೆ ಏನಲ್ಲವಲ್ಲ? ನಿಮಗೆ ಭಯ ಇಲ್ಲದಿದ್ದರೆ ಕೊಡಿ ನ್ಯಾಯಾಂಗ ತನಿಖೆಗೆ, ಅವರೂ ಸಿದ್ಧರಿದ್ದಾರೆ. ತನಿಖೆಯ ಸಂದರ್ಭದಲ್ಲಿ ಗುತ್ತಿಗೆದಾರರ ಸಂಘದವರು ಏನಾದರೂ ಸುಳ್ಳು ಹೇಳಿದ್ದರಾದರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ.

ಅದು ಬಿಟ್ಟು ನೀವು ನಮ್ಮನ್ನು ಬಿಟ್ಟು ವಿರೋಧ ಪಕ್ಷದವರ ಬಳಿಗೆ ಏಕೆ ಹೋದಿರಿ ಎಂದು ನಿರ್ಬಂಧಿಸುವುದಕ್ಕೆ, ನೀವು ಪ್ರಜಾತಂತ್ರ ವ್ಯವಸ್ಥೆಯಲ್ಲಿದ್ದೀರೊ ಅಥವಾ ಸರ್ವಾಧಿಕಾರಿ ಆಡಳಿತದಲ್ಲಿದ್ದೀರೊ? ನಿಮಗೆ ಇರುವಷ್ಟೇ ಹಕ್ಕು, ಕರ್ತವ್ಯಗಳು ನನಗೂ ಇವೆ.

ಇನ್ನೂ ಮೋದಿಯವರ ಕನಸಿನ ಸ್ಮಾರ್ಟ್ಸಿಟಿಗಳ ಭ್ರಷ್ಟಾಚಾರ ಕೂಡ ಮುಗಿಲು ಮುಟ್ಟಿದೆ. ಸ್ಮಾರ್ಟ್ ಸಿಟಿ ಎಂದ ಮಂಗಳೂರು ಯಾಕೆ ಒಂದೇ ಮಳೆಗೆ ಮುಳುಗಿ ಹೋಗುತ್ತಿದೆ? ಬೆಂಗಳೂರಿನ ರಸ್ತೆಗಳು, ಕಾಲುವೆಗಳು ಏನಾಗಿವೆ ಎಂದು ಜನರು ನೋಡುತ್ತಿದ್ದಾರೆ.

ವಿರೋಧ ಪಕ್ಷಗಳನ್ನು ಆಪರೇಷನ್ ಮಾಡುವ ಉದ್ದೇಶದಿಂದ ಪೆಗಾಸಸ್ ಗೂಢಾಚಾರಿಕೆ ಮಾಡಲಾಯಿತು. ಆದರೆ ಈಗ ಕೇಂದ್ರ ಸರ್ಕಾರ ಸಮಿತಿಗೆ ಸಹಕರಿಸಿಲ್ಲ ಎಂದು ವರದಿ ನೀಡಿದೆ. ಇದನ್ನು ನೋಡಿದರೆ ಕೇಂದ್ರ ದೇಶದಲ್ಲಿ ಹಿಟ್ಲರ್ ಗಿರಿ ನಡೆಸುತ್ತಿದೆ ಎಂದು ಅರ್ಥವಾಗುತ್ತದೆ. ಈ ಎಲ್ಲವನ್ನೂ ನೋಡಿದರೆ ಕಾರ್ಪೊರೇಟ್ ಪರವಾಗಿ ಕೆಲಸ ಮಾಡಲು ಹಣ ಕೊಟ್ಟು ಖರೀದಿಸಿ ರಚಿಸುತ್ತಿರುವ ಬಿಜೆಪಿ ಸರ್ಕಾರಗಳಿಂದ ಈ ದೇಶದ ಜನರಿಗೆ ಯಾವ ನ್ಯಾಯವೂ ಸಿಗುವುದಿಲ್ಲ. ದೇಶದ ಯುವಜನರು ಉದ್ಯೋಗವಿಲ್ಲದೆ, ದುಡಿಯುವ ಅವಕಾಶಗಳಿಲ್ಲದೆ ಅನಾಥರಾಗುತ್ತಾರೆ.

ಈಗಾಗಲೇ ಅಭಿವೃದ್ಧಿಯಲ್ಲಿ ಭಾರತವು ಬಾಂಗ್ಲಾದೇಶಕ್ಕಿಂತ ಹಿಂದೆ ಬಿದ್ದಿದೆ. ತಲಾದಾಯದಲ್ಲಿ ಭಾರತಕ್ಕಿಂತ ಹಿಂದೆ ಇದ್ದ ಚೀನಾ ಇಂದು ಭಾರತಕ್ಕಿಂತ ಬಹಳ ಮುಂದೆ ಇದೆ. ಕಳೆದ ವರ್ಷದ ದಾಖಲೆಗಳಂತೆ ಭಾರತೀಯರ ತಲಾದಾಯ ಸುಮಾರು 1.5 ಲಕ್ಷ ರೂಪಾಯಿಗಳಿದ್ದರೆ. ಚೀನಾದವರ ತಲಾದಾಯವನ್ನು ರೂಪಾಯಿಗಳಿಗೆ ಪರಿವರ್ತಿಸಿದರೆ ಸುಮಾರು 10.5 ಲಕ್ಷ ರೂಪಾಯಿಗಳಷ್ಟಾಗುತ್ತದೆ. ಈಗ ಬಾಂಗ್ಲಾದ ಜನರ ತಲಾದಾಯ ಭಾರತೀಯರ ತಲಾದಾಯವನ್ನೂ ಮೀರಿ ಮುಂದಕ್ಕೆ ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button