ಅನಂತ್‍ಕುಮಾರ್ ಹೆಗಡೆ ಓರ್ವ ಮಾನಸಿಕ ಅಸ್ವಸ್ಥ, ಮನುಷ್ಯನೇ ಅಲ್ಲ: ಸಿದ್ದರಾಮಯ್ಯ ವ್ಯಂಗ್ಯ

Public TV
2 Min Read
Siddaramaiah Ananth kumar hegde

ಬಾಗಲಕೋಟೆ: ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್‍ಕುಮಾರ್ ಹೆಗಡೆ ಓರ್ವ ಮಾನಸಿಕ ಅಸ್ವಸ್ಥ. ಅವನು ನನ್ನ ಪ್ರಕಾರ ಮನುಷ್ಯನೇ ಅಲ್ಲ. ಆತನಿಗೆ ಕನಿಷ್ಠ ಸಂಸ್ಕಾರವಿಲ್ಲ ಕೇಂದ್ರದಲ್ಲಿ ಮಂತ್ರಿ ಬೇರೆ, ನಾಚಿಕೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸ್ಥಳೀಯ ಸಂಸ್ಥೆ ಹಾಗೂ ಪರಿಷತ್ ಚುನಾವಣಾ ಪ್ರಚಾರದ ನಿಮಿತ್ತ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ, ಅನಂತ್ ಕುಮಾರ್ ಹೆಗಡೆ ಕ್ಯಾನ್ಸರ್ ಇದ್ದ ಹಾಗೆ. ಅವರನ್ನು ಸಂಪುಟದಲ್ಲಿ ಇಟ್ಟುಕೊಂಡ ಪ್ರಧಾನಿ ನರೇಂದ್ರ ಮೋದಿಗೂ ನಾಚಿಕೆ ಇಲ್ಲ ಎಂದು ವ್ಯಂಗ್ಯವಾಡಿದರು.

Siddaramaiah Basanagouda Patil Yatnal

ಬುರ್ಕಾ ಹಾಕಿದವರು, ಗಡ್ಡ ಬಿಟ್ಟವರು, ಟೋಪಿ ಹಾಕಿದವರು ನಮ್ಮ ಬಳಿಗೆ ಬರಬಾರದು ಅಂತಾ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅನಂತ್‍ಕುಮಾರ್ ಹೆಗಡೆ ಹೇಳುತ್ತಾರೆ. ಇವರಿಗೆ ಮನುಷತ್ವ ಇದೆಯಾ? ಇಂತವರಿಗೆ ಮತ ಹಾಕಬೇಕಾ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದ ಸಿದ್ದರಾಮಯ್ಯ ಶಾಸಕ ಶ್ರೀರಾಮುಲು ನಾನು ಕೆಲಸ ಮಾಡಿಲ್ಲವೆಂದು ಆರೋಪಿಸಿದ್ದಾರೆ. ಹಾಗಾದರೆ ನನ್ನಷ್ಟು ಕೆಲಸವನ್ನು ಅವರು ಮಾಡಿ ತೋರಿಸಲಿ ಎಂದು ಸವಾಲು ಎಸೆದರು.

ನಮ್ಮ ಸೋಲಿಗೆ ಬಿಜೆಪಿ ಅಪಪ್ರಚಾರವೇ ಕಾರಣ. ನನ್ನನ್ನು ಹಿಂದೂ ವಿರೋಧಿ ಅಂತಾರೆ. ನಾನು ಹಿಂದೂ ವಿರೋಧಿನಾ? ಗಾಂಧೀಜಿ ಅವರು ಹಿಂದೂ ಹಾಗೂ ಮುಸ್ಲಿಮರು ಒಂದಾಗಿ ಅಂತಾ ಸಲಹೆ ನೀಡಿದ್ದರು. ಹೆಸರಿಗೆ ಮಾತ್ರ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ’. ಇದು ನಾಟಕ ಅಷ್ಟೇ, ಎಲ್ಲವೂ ‘ಸಬ್ ಕಾ ಸತ್ಯಾನಾಶ್’ ಆಗಿದೆ ಎಂದು ದೂರಿದರು.

Siddaramaiah 1

ಬಿಜೆಪಿಯವರು ಮೀಸಲಾತಿ ತೆಗೆದು ಹಾಕಲು ಹಾಗೂ ಸಂವಿಧಾನ ಬದಲಾವಣೆ ಮಾಡಲು ಮುಂದಾಗುತ್ತಿದ್ದಾರೆ. ನಾನು ಕೇವಲ ಪ್ರಚಾರಕ್ಕಾಗಿ ಈ ಮಾತುಗಳನ್ನು ಹೇಳುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯನ್ನು ಗುರುತಿಸಿ ಮತದಾನ ಮಾಡಿ ಎಂದು ರಾಜ್ಯದ ಬಿಜೆಪಿ ನಾಯಕರು ಕೇಳುತ್ತಾರೆ. ಎರಡು ಕೋಟಿ ಜನರಿಗೆ ಉದ್ಯೋಗ ಕೊಡುವುದಾಗಿ ಪ್ರಧಾನಿ ಭರವಸೆ ನೀಡಿ, ಈಡೇರಿಸಲಿಲ್ಲ. ‘ಮನ್ ಕೀ ಬಾತ್’ ಎಂದು ಹೇಳುತ್ತಾರೆ. ಆದರೆ ಅದರಿಂದ ಹೊಟ್ಟೆ ತುಂಬಲ್ಲ, ‘ಕಾಮ್ ಕೀ ಬಾತ್’ ಆಗಬೇಕು ಎಂದು ಕೇಂದ್ರದ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *