ಬೆಂಗಳೂರು: ಕೇಂದ್ರ ಸರ್ಕಾರದ 500 ಹಾಗೂ 1000 ರೂ.ಗಳ ನೋಟ್ ಬ್ಯಾನ್ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಇಂದು ತಮ್ಮ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದರು.
ನೋಟ್ ಬ್ಯಾನ್‍ನಿಂದಾಗಿ ಜನರು ಸಂಕಷ್ಟ ಎದುರಿಸಿದರು. ಒಟ್ಟಾರೆ ನೋಟ್ ಬ್ಯಾನ್‍ನಿಂದ ಆಗಿರುವ ಫಲಶೃತಿಯೇನು ಎನ್ನುವುದನ್ನು ಕೇಂದ್ರ ಸರ್ಕಾರ ತಿಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ ಪದೇ ಪದೇ ನಿಯಮಗಳನ್ನು ಬದಲಾಯಿಸಿದ ಆರ್‍ಬಿಐ ಕ್ರಮ, ಇದರಿಂದ ಜನರು ಎದುರಿಸಿದ ಸಂಕಷ್ಟದ ಬಗ್ಗೆಯೂ ಬಜೆಟ್ ಭಾಷಣದಲ್ಲಿ ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.
Advertisement
Advertisement
ಸಿಎಂ ಬಜೆಟ್ ಭಾಷಣದಲ್ಲಿ ಹೇಳಿದ್ದೇನು?: ‘ಯಾವುದೇ ಸಾರ್ವಜನಿಕ ನೀತಿಯು ನಿಗದಿತ ಗುರಿಯನ್ನು ಸಾಧಿಸುವ ಉದ್ದೇಶದ ಜೊತೆಗೆ ಅದನ್ನು ಕಾರ್ಯಗತಗೊಳಿಸುವುದರಲ್ಲಿಯೂ ಹೆಚ್ಚು ಸಮರ್ಥವಾಗಿರಬೇಕು. ಅಪಮೌಲ್ಯೀಕರಣವು ಜನಸಾಮಾನ್ಯರಿಗೆ ಅಪಾರ ಸಂಕಷ್ಟ ಉಂಟು ಮಾಡಿತು. ಆದರೆ, ಅದರಿಂದ ಸಾಧಿಸಿದ ಫಲಶೃತಿಯೇನು ಎಂಬುದನ್ನು ಕೇಂದ್ರ ಸರ್ಕಾರವು ಇನ್ನೂ ತಿಳಿಸಬೇಕಾಗಿದೆ. ರೈತರು ಹಾಗೂ ಗ್ರಾಮೀಣ ಜನತೆಗೆ ಸೇವೆ ನೀಡುವಲ್ಲಿ ಅತ್ಯಂತ ನಿರ್ಣಾಯಕ ಪಾತ್ರವಹಿಸುವ ಇಡೀ ಸಹಕಾರ ವಲಯವು ಅಕ್ಷರಶಃ ಸ್ತಬ್ಧ ಗೊಂಡಿತು.
Advertisement
ತಮಗೆ ವಹಿಸಿದ್ದ ಜವಾಬ್ದಾರಿಯನ್ನು ನಿರ್ವಹಿಸಲು ಬ್ಯಾಂಕಿಂಗ್ ವ್ಯವಸ್ಥೆಯು ಸನ್ನದ್ಧರಾಗಿಲ್ಲದೇ ಇದ್ದದ್ದು ಅದರ ಅನುಷ್ಠಾನದ ರೀತಿಯಲ್ಲಿನ ಸಿದ್ಧತೆಯ ಕೊರತೆಯನ್ನು ಜಾಹೀರುಪಡಿಸಿತು. ಅನುಷ್ಠಾನದ ನಡುವೆಯೇ ಗುರಿಯ ದಿಕ್ಕನ್ನು ಬದಲಿಸಲಾಯಿತು ಹಾಗೂ ನಿಯಮಗಳನ್ನು ಪದೇ ಪದೇ ಪರಿಷ್ಕರಿಸಲಾಯಿತು.
Advertisement
ಅಪಮೌಲ್ಯೀಕರಣದ ಅಗತ್ಯತೆಯೇ ಚರ್ಚಾಸ್ಪದವಾಗಿದ್ದು, ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‍ಗಳು ಕನಿಷ್ಠ ಪಕ್ಷ ಮುಂದೆ ಒದಗಬಹುದಾದ ತೊಂದರೆಗಳನ್ನು ಮುಂದಾಲೋಚಿಸಿ, ಸಾಮಾನ್ಯ ಜನರಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯಸಾಧ್ಯ ಹಾಗೂ ಸಶಕ್ತವಾದ ವ್ಯವಸ್ಥೆಯನ್ನು ಆಚರಣೆಗೆ ತರಬೇಕಿತ್ತು ಎಂಬುದು ನನ್ನ ಅನಿಸಿಕೆ.
ಕಳೆದ ನಾಲ್ಕು ವರ್ಷಗಳ ನಮ್ಮ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಕಳೆದೆರಡು ವರ್ಷಗಳ ನಿರಂತರ ಬರಗಾಲ, ಇತ್ತೀಚಿನ ನೋಟು ಅಮಾನ್ಯೀಕರಣದಿಂದಾಗಿ ಕುಂಠಿತಗೊಂಡ ಆರ್ಥಿಕ ಚಟುವಟಿಕೆಯಿಂದಾದ ನಷ್ಟವೂ ಸೇರಿದಂತೆ ಎದುರಾದ ಪ್ರತಿಕೂಲಗಳನ್ನು ಆರ್ಥಿಕ ಶಿಸ್ತು, ಸಂಪನ್ಮೂಲ ಸಂಗ್ರಹಣೆಯ ಬದ್ಧತೆ ಮತ್ತು ದಕ್ಷ ಆಡಳಿತ ಮೂಲಕ ಎದುರಿಸುತ್ತಾ ಬಂದಿದ್ದೇವೆ’ ಎಂದು ಸಿದ್ದರಾಮಯ್ಯ ಭಾಷಣದಲ್ಲಿ ಹೇಳಿದರು.