ಧಾರವಾಡ: ಬಿಜೆಪಿ ಸರ್ಕಾರ ರಚನೆಗೆ ಕೆಲ ಶಾಸಕರನ್ನೇ ಸಿದ್ದರಾಮಯ್ಯನವರೇ (Siddaramaiah) ಕಳುಹಿಸಿದ್ದರು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಖಾತೆಯ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಬಾಂಬ್ ಸಿಡಿಸಿದ್ದಾರೆ.
ಬಿಜೆಪಿ ಆಪರೇಷನ್ ಕಮಲ (Operation Kamala) ಮಾಡಲು ಮುಂದಾಗುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಅವರು, ಕಳೆದ ಬಾರಿ ಬಿಜೆಪಿ ಸರ್ಕಾರ (BJP Government) ರಚನೆ ಮಾಡೋವಾಗ ಶಾಸಕರನ್ನು ಕಳುಹಿಸಿದ್ದೆ ಕಾಂಗ್ರೆಸ್ ಎಂದು ಸ್ಫೋಟಕ ವಿಚಾರ ತಿಳಿಸಿದರು.
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಮುಂದುವರೆಯಬಾರದು ಎನ್ನುವ ಕಾರಣಕ್ಕೆ ಸಿದ್ದರಾಮಯ್ಯನವರೇ ಕೆಲ ಶಾಸಕರನ್ನು ಕಳುಹಿಸಿದ್ದರು. ಹೀಗಾಗಿ ನಾವು ಸರ್ಕಾರ ರಚನೆ ಮಾಡಿದ್ದೆವು. ಈ ಬಾರಿ ಅವರಿಗೆ ಬಹುಮತ ಇದೆ. ನಾವು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಆಪ್‌ಗೆ ರಾಜೀನಾಮೆ ನೀಡಿದ್ದ ಕೈಲಾಶ್ ಗಹ್ಲೋಟ್ ಬಿಜೆಪಿಗೆ ಸೇರ್ಪಡೆ
ಬಿಜೆಪಿ 100 ಕೋಟಿ ನೀಡಿದ ಆಫರ್ ಬಗ್ಗೆ ದಾಖಲೆ ಇದ್ದರೆ ರವಿ ಗಾಣಿಗ ದಾಖಲೆ ಬಿಡುಗಡೆ ಮಾಡಲಿ. ವಿಷಯನ್ನು ಬೇರೆ ಕಡೆಗೆ ತಿರುಗಿಸಲು ಸುಮ್ಮನೆ ಮಾತನಾಡುತ್ತಿದ್ದಾರೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಸಿಕ್ಕಿ ಹಾಕಿಕೊಂಡಿದ್ದಾರೆ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
100 ಕೋಟಿ ಅಲ್ಲ, 500 ಕೋಟಿ ಬಗ್ಗೆ ಮಾತಾಡಲಿ. ದಾಖಲೆ ಇದ್ದರೆ ಕೊಡಿ ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತೆ. ಬರೀ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.