ಬೆಂಗಳೂರು: ಈ ಬಾರಿ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯಿಲ್ಲ. ಆದ್ದರಿಂದ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರ ಪಡೆಯುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕಳೆದ ಚುನಾವಣೆಯ ಬಳಿಕ ತಾನು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೆ, ಆದರೆ ಮುಖ್ಯಮಂತ್ರಿಯಾಗಿ ಕಳೆದ 5 ವರ್ಷ ಮಾಡಿದ ಕೆಲಸದ ಬಳಿಕ ಹೇಗೆ ಬಿಟ್ಟುಹೋಗುತ್ತಿರಾ ಎಂದು ಪ್ರಶ್ನಿಸಿದರು. ಈ ಕಾರಣಕ್ಕೆ ನಾನು ನಿರ್ಧಾರ ಬದಲಿಸಿದೆ ಎಂದು ತಿಳಿಸಿದ್ದಾರೆ. ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಸಿಎಂ ನೀಡಿದ ಉತ್ತರಗಳನ್ನು ಇಲ್ಲಿ ನೀಡಲಾಗಿದೆ.
Advertisement
ಉಪಚುನಾವಣೆಯ ಬಳಿಕ ನೀವು ಅಗ್ರೆಸ್ಸೀವ್ ಆಗಿದ್ದು ಯಾಕೆ?
ದೇಶದ ಪ್ರಧಾನಿಯೊಬ್ಬರು ರಾಜ್ಯದಲ್ಲಿರುವ ಆಡಳಿತ ಪಕ್ಷದ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಆದ್ರೆ ತಮ್ಮ ಕೊಡುಗೆ ಏನು ಎಂಬುವುದನ್ನು ಮಾತನಾಡಿಲ್ಲ. ಕೇಂದ್ರದಲ್ಲಿ ಅಧಿಕಾರ ಪಡೆದು 4 ವರ್ಷಗಳು ಕಳೆದಿದೆ. ಆದರೆ ಇದುವರೆಗೂ ಲೋಕಾಪಾಲರನ್ನು ನೇಮಕ ಮಾಡಿಲ್ಲ. ಯುಪಿಎ ಅಧಿಕಾರ ಅವಧಿಯಲ್ಲಿ ಮಂಡನೆಯಾದ ಮಸೂದೆಯನ್ನು ಇನ್ನು ಜಾರಿಗೆ ತಂದಿಲ್ಲ. ಮೋದಿ ಸಿಎಂ ಆಗಿದ್ದಾಗಲೂ ಲೋಕಾಯುಕ್ತವನ್ನು ನೇಮಕ ಮಾಡಿಲ್ಲ. ಆದರೆ ಸಿದಾರುಪಯ್ಯ ಸರ್ಕಾರ ಎಂದು ಆರೋಪ ಮಾಡುತ್ತಾರೆ. ನೀರವ್ ಮೋದಿ, ವಿಜಯ್ ಮಲ್ಯ, ಲಲಿತ್ ಮೋದಿ, ಕೋತಾರಿ ಬಗ್ಗೆ ಇದುವರೆಗೂ ಮಾತನಾಡಿಲ್ಲ. ಆದರೆ ನಮ್ಮ ಸರ್ಕಾರದ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಾರೆ.
Advertisement
Advertisement
ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಏಕಾಂಗಿ ಆಗಿದ್ದರಾ?
ನಾನು ಏಕಾಂಗಿಯಾಗಿಲ್ಲ. ನನ್ನ ಪ್ರಕಾರ ಬಿಎಸ್‍ವೈ ಆರ್‍ಎಸ್‍ಎಸ್ ಹಾಗೂ ಬಿಜೆಪಿ ನಾಯಕರಿಂದ ಏಕಾಂಗಿಯಾಗಿದ್ದಾರೆ. ಇದಕ್ಕೆ ಉದಾಹರಣೆ ವರುಣಾದಲ್ಲಿ ವಿಜಯೇಂದ್ರ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಸಂಸದೆ ಶೋಭಾ ಕರಂದ್ಲಾಜೆ ಅವರಿಗೂ ಟಿಕೆಟ್ ನೀಡಲು ಸಾಧ್ಯವಾಗಿಲ್ಲ. ಸಂಸದ ಶ್ರೀರಾಮುಲು ಅವರಿಗೆ ಮಾತ್ರ ಟಿಕೆಟ್ ನೀಡಿದ್ದು ಯಾಕೆ? ಶ್ರೀರಾಮುಲುಗೆ ಕನ್ನಡವೇ ಬರುವುದಿಲ್ಲ, ಅವರ ಮಾತೃ ಭಾಷೆ ತೆಲುಗು ಇರಬಹುದು. ಬಿಜೆಪಿ ನಾಯಕರು ಏನು ಹೇಳಿದರೋ ಗೊತ್ತಿಲ್ಲ. ದಲಿತ ಮತಗಳನ್ನು ಸೆಳೆಯಲು ಶ್ರೀರಾಮುಲುರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.
Advertisement
ಮೋದಿ ಅವರು ರಾಹುಲ್ ವಿರುದ್ಧ ನಮ್ಮ ಸರ್ಕಾರದ ಸಾಧನೆಯ ಬಗ್ಗೆ 15 ನಿಮಿಷ ಭಾಷಣ ಮಾಡುವಂತೆ ಸವಾಲು ಹಾಕುತ್ತಾರೆ. ನಾನು ಮೋದಿಯವರಿಗೆ ಸವಾಲು ಹಾಕುತ್ತೇನೆ. ಬಿಎಸ್‍ವೈ ಅವಧಿ ವೇಳೆ ಸಾಧನೆಯನ್ನು ಮಾತನಾಡಲಿ. ಬಳ್ಳಾರಿಯಲ್ಲಿ ನಡೆದ ಭ್ರಷ್ಟಚಾರ ನಡೆದ ಬಗ್ಗೆ ತಿಳಿಯಲು ಹೋದ ವೇಳೆ ನಮ್ಮ ಮೇಲೆ ರೌಡಿಗಳನ್ನು ಬಿಟ್ಟು ಹೆದರಿಸಲು ಯತ್ನಿಸಿದರು. ಆ ವೇಳೆ ರೆಡ್ಡಿ ದಿನಕ್ಕೆ 10 ಕೋಟಿ ಸಂಪಾದನೆ ಮಾಡುತ್ತಿದ್ದರು. ಅವರನ್ನು ರಿಪಬ್ಲಿಕ್ ಆಫ್ ಬಳ್ಳಾರಿ ಎಂದೇ ಸಂತೋಷ್ ಹೆಗಡೆ ವರದಿ ನೀಡಿದ್ದಾರೆ. ಇವರು ನಮ್ಮ ಸರ್ಕಾರದ ಮೇಲೆ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡುತ್ತಾರೆ ನಾಚಿಕೆಯಾಗಬೇಕು.
ಆನಂದ್ ಸಿಂಗ್ ಅವರ ಮೇಲೆ ಆರೋಪ ಇದೆಯಲ್ಲ, ಅವರನ್ನು ನೀವು ಪಕ್ಷಕ್ಕೆ ಸೇರಿಸಿಕೊಂಡಿದ್ದೀರಿ ಅಲ್ಲವೇ?
ನಾವು ಆನಂದ್ ಸಿಂಗ್ ವಿರುದ್ಧ ಹೋರಾಟ ನಡೆಸಿಲ್ಲ. ನಾವು ಹೋರಾಟ ನಡೆಸಿದ್ದು ರೆಡ್ಡಿ ಸಹೋದರರ ವಿರುದ್ಧ. ಅಲ್ಲಿ ರೆಡ್ಡಿ ಸಹೋದದರು ಆಡಳಿತ ನಡೆಸುತ್ತಿದ್ದರು. ನಮಗೇ ರೋಡ್ ಶೋ ನಡೆಸಲು ಬಿಡಲಿಲ್ಲ. ಎಲ್ಲರಿಗೂ ಹೆದರಿಕೆ ಇತ್ತು. ಯಡಿಯೂರಪ್ಪ ಅವರಿಗೆ ರಾಜಕೀಯದಲ್ಲಿ ಇರಲು ನಾಚಿಕೆ ಆಗಬೇಕು. ರೆಡ್ಡಿ ಸಹೋದರರು ನನ್ನ ಮೇಲೆ ಸವಾಲು ಎಸೆದಿದ್ದರು. ಈ ಕಾರಣಕ್ಕೆ ನಾವು ಪಾದಯಾತ್ರೆ ನಡೆಸಿದ್ದೆವು. ನಾವು ಎಲ್ಲರನ್ನು ಸಮಾನವಾಗಿ ಕಾಣುತ್ತೇವೆ. ಆದರೆ ಬಿಜೆಪಿಯಲ್ಲಿ ಇದು ಸಾಧ್ಯವಿಲ್ಲ, ಇದಕ್ಕೆ ಉತ್ತಮ ಉದಾಹರಣೆ ಬಿಜೆಪಿ ಅವರು ಈ ಬಾರಿ ಒಂದು ಟಿಕೆಟ್ ಕೂಡ ಅಲ್ಪಸಂಖ್ಯಾತರಿಗೆ ನೀಡಿಲ್ಲ.
ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಏಕೆ, ಸಿದ್ದರಾಮಯ್ಯ ಹೆದರಿಕೊಂಡ್ರಾ?
ನಾನು ಯಾರಿಗೂ ಹೆದರಿಕೊಳ್ಳುವ ಪ್ರಮೇಯ ಇಲ್ಲ. ಈ ಹಿಂದೆ ಮೋದಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು. ಈ ಬಾರಿ ಕುಮಾರಸ್ವಾಮಿ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ ಅವರು ಮಾಡಿದರೆ ಅದು ರಾಜಕೀಯ ತಂತ್ರ, ನಾನು ಮಾಡಿದರೆ ಮಾತ್ರ ಹೆದರಿಕೆ ಎಂದು ಹೇಳುತ್ತಾರೆ ಅಷ್ಟೇ.
ಕಾಂಗ್ರೆಸ್ ಸರ್ಕಾರ ಇರುವ ಏಕೈಕ ರಾಜ್ಯ ಕರ್ನಾಟಕ ಒಂದು ರೀತಿ ಎಟಿಎಮ್ ಅಂತ ಬಿಜೆಪಿಯವರು ಹೇಳ್ತಾರೆ?
ಕಾಂಗ್ರೆಸ್ 133 ವರ್ಷ ಇತಿಹಾಸ ಇರುವ ಹಳೆಯ ಪಕ್ಷ. ಎಂದಿಗೂ ಹಣ ಕಳಿಸಿ ಅಂತ ಹೇಳಿಲ್ಲ. ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಬಿಜೆಪಿ,ಕಾಂಗ್ರೆಸ್ ಪಕ್ಷದಲ್ಲಿ ಅಸೆಟ್ ಯಾರ ಬಳಿ ಜಾಸ್ತಿ ಇದೆ. ನಮ್ಮ ಅಭ್ಯರ್ಥಿ ಮನೆ ಮೇಲೆ ಐಟಿ ದಾಳಿ ಆಗಿದೆ. ಐಟಿ ದಾಳಿ ಮಾಡಿ ನಮ್ಮ ಪಕ್ಷವನ್ನು ಕುಗ್ಗಿಸುವಂತಹ ಪ್ರಯತ್ನ ನಡೆಯುತ್ತಿದೆ. ಬಿಜೆಪಿ ಅವರ ಬಳಿ ಹೆಚ್ಚು ಆಸ್ತಿ ಇಲ್ವಾ ಅವರ ಮನೆ ಮೇಲೆ ಯಾಕೆ ಐಟಿ ದಾಳಿ ಮಾಡಲ್ಲ. ನಮ್ಮ ಪಕ್ಷದ ನಾಯಕರ ಮೇಲೆ ದಾಳಿ ಮಾಡಿ ಹೆದರಿಸುವ ಕಾರ್ಯ ಮಾಡುತ್ತಿದ್ದಾರೆ. ಚುನಾವಣಾ ಸಮಯದಲ್ಲೇ ಐಟಿ ದಾಳಿ ಮಾಡುತ್ತಿದ್ದಾರೆ. ಇದು ದ್ವೇಷದ ರಾಜಕಾರಣ.
2+1 ಸೂತ್ರ ಏನು?
ನಾನು 2 ಕಡೆ ಮತ್ತೆ ನಮ್ಮ ಮಗ ಒಂದು ಕಡೆಯಿಂದ ಸ್ಪರ್ಧಿಸಿರುವುದಕ್ಕೆ ಹೀಗೆ ಹೇಳುತ್ತಾರೆ. ಯಡಿಯೂರಪ್ಪ ಮಗ ಹಾಲಿ ಶಾಸಕ ಗೋವಿಂದ ಕಾರಜೋಳ ಅವರ ಮಗ, ಉದಾಸಿಯವರ ಮಗ, ಶಶಿಕಲಾ ಜೊಲ್ಲೆ ಅವರ ಗಂಡ, ಉಮೇಶ್ ಕತ್ತಿ ಅವರ ತಮ್ಮ, ಯಡಿಯೂರಪ್ಪ ಅವರ ಮಗ ರಾಘವೇಂದ್ರ ಇವರೆಲ್ಲ ಚುನಾವಣೆಗೆ ಸ್ಪರ್ಧಿಸಿಲ್ಲವೇ ಇದಕ್ಕೆ ಸೂತ್ರ ಅವರೇ ಹೇಳಬೇಕು.
ಸಿದ್ದರಾಮಯ್ಯನವರು ಸಮಾಜವಾದಿಯಾಗಿ ಉಳಿದಿಲ್ಲ ದುಬಾರಿ ಬೆಲೆಯ ವಾಚ್ ಕಟ್ಟುತ್ತಾರೆ?
ನರೇಂದ್ರ ಮೋದಿಯವರು ಹಾಕೋ ಕೋಟ್ ಬೆಲೆ ಎಷ್ಟು ಅದಕ್ಕೆಲ್ಲಾ ಆದಾಯ ತೆರಿಗೆ ಕಟ್ಟಿದ್ದಾರಾ. ನನ್ನ ಸ್ನೇಹಿತ ವಾಚ್ ಕೊಟ್ಟ ಕಟ್ಟಿಕೊಂಡಿದ್ದೆ. ನನ್ನ ಮೇಲೆ ಆರೋಪ ಮಾಡುವ ದೇವೇಗೌಡರು ಶಾಸಕರಾಗಿದ್ದಾಗ ಎಷ್ಟು ಆಸ್ತಿ ಇತ್ತು ಈಗ ಎಷ್ಟು ಆಸ್ತಿಯಾಗಿದೆ. ಕುಮಾರಸ್ವಾಮಿ ಅವರ ಮಗನ ಬಳಿ ಕಾರು ಇಲ್ಲವೇ?. ನಾನೇ ಯಾರ ಮೇಲೂ ಆರೋಪ ಮಾಡಿಲ್ಲ. ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ್ದೇನೆ.
ಕಳೆದ 5 ವರ್ಷಗಳಲ್ಲಿ ಹಿಂದೂ ಕಾರ್ಯಕರ್ತರ ಕೊಲೆಗಳು ಜಾಸ್ತಿಯಾಗಿದೆ?
23 ಜನರ ಕೊಲೆ ಆಗಿದೆ ಅದರಲ್ಲಿ 11 ಜನ ಬಿಜೆಪಿ ಕಾರ್ಯಕರ್ತರಲ್ಲ. ಉಳಿದ 12 ಜನ ಆರ್‍ಎಸ್‍ಎಸ್, ಭಜರಂಗ ದಳ, ಶ್ರೀರಾಮ ಸೇನೆಗೆ ಸೇರಿದೋರು. ಕೋಮು ಗಲಭೆಗಳಿಂದ, ಇನ್ನು ಕೆಲವು ಕಾರಣಗಳಿಗೆ ಸತ್ತಿದ್ದಾರೆ. ಬಿಜೆಪಿಯವರು ಹೆಚ್ಚಾಗಿ ಹೇಳುತ್ತಿದ್ದಾರೆ ಅಷ್ಟೆ. ಇದು ಮೊದಲಲ್ಲ ಗಲಭೆ ಏಳಿಸೋದು, ಕೋಮು ಗಲಭೆ ಅನ್ನೋದು ಬಿಜೆಪಿಯವರ ಹಿಂದಿನ ಉದ್ದೇಶ. ಎಲ್ಲಾ ಪ್ರಕರಣಗಳಲ್ಲೂ ದೂರು ದಾಖಲಾಗಿ ಆರೋಪಿಗಳ ಬಂಧನ ಆಗಿದೆ. ಕೆಲವು ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಕೂಡ ಆಗಿದೆ.
ಜೆಡಿಎಸ್ ಮುಗಿಸಬೇಕು ಅಂತ ಹೊರಟಿದ್ದೀರಾ?
ಯಾರು ಯಾರನ್ನು ಮುಗಿಸಲು ಸಾಧ್ಯ ಇಲ್ಲ. ಜೆಡಿಎಸ್ ಶಕ್ತಿ ಎಷ್ಟಿದೆ ಅಂತ ಹೇಳುತ್ತಿದ್ದೇನೆ ಅಷ್ಟೆ. ಪ್ರತೀ ಜಿಲ್ಲೆಯಲ್ಲಿ ಕಾಂಗ್ರೆಸ್ ಬೇರು ಇದೆ ಬಿಜೆಪಿ, ಜೆಡಿಎಸ್ ಇದೆಯಾ? 8 ಜಿಲ್ಲೆ ಅಲ್ಲಿ ಬಿಜೆಪಿ ಗೆ ಸೀಟ್ ಇಲ್ಲ. ದೇವೇಗೌಡ ಹಿರಿಯ ರಾಜಕಾರಣಿ ನನಗೆ ಕೋಪ ಇಲ್ಲ. ವೈಯಕ್ತಿಕವಾಗಿ ಯಾರನ್ನು ದ್ವೇಷಿಸಲ್ಲ ಈಗಲೂ ಚೆನ್ನಾಗಿದ್ದೀನಿ ಅವರು ಟೀಕೆ ಮಾಡಿದರೆ ಟೀಕೆ ಮಾಡುತ್ತೇನೆ. ಅವರು ನೀಚ ರಾಜಕಾರಣ ಮಾಡುತ್ತಾನೆ ಅಂದಾಗ ನಾನು ಸುಮ್ಮನೇ ಇರಬೇಕೇ?
ರಾಕೇಶ್ ಇದ್ದಿದ್ದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದರಾ?
ಖಂಡಿತಾ
ಅವರಪ್ಪನಾಣೆ ಅಂತ ಹೆಚ್ಚು ಬಳಸುತ್ತೀರ?
ಅದು ಹಳ್ಳಿ ಭಾಷೆ. ನಮ್ಮ ಹಳ್ಳಿಗಳಲ್ಲಿ ಹಾಗೆ ಬಳಸುತ್ತೇವೆ.
ಜೆಡಿಎಸ್ ಬಿಜೆಪಿಯ ಬಿ ಟೀಮ್ ಅಂತ ಹೇಳುತ್ತೀರ?
ಕೆಲವು ಕಡೆ ಒಪ್ಪಂದ ಮಾಡಿಕೊಂಡಿದ್ದಾರೆ. ಚಾಮುಂಡೇಶ್ವರಿಯಲ್ಲಿ ಬಿಜೆಪಿ ತುಂಬಾ ವೀಕ್ ಅಭ್ಯರ್ಥಿ ಹಾಕಿದೆ ಏನರ್ಥ?
ಒಕ್ಕಲಿಗರನ್ನು ಎದುರು ಹಾಕಿಕೊಂಡಿದ್ದೀರಾ?
ನಮ್ಮಲ್ಲಿ ಡಿಕೆ ಶಿವಕುಮಾರ್, ಕೃಷ್ಣಪ್ಪ ಒಕ್ಕಲಿಗ ನಾಯಕರು ಇಲ್ವಾ. ಕೆಂಪೇಗೌಡರ ಜಯಂತಿ ಮಾಡಿದವರು ಯಾರು? ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಸರು ಇಟ್ಟಿದು ಯಾರು? ದೇವೇಗೌಡರು, ಕುಮಾರ ಸ್ವಾಮಿ ಯಾಕೆ ಮಾಡಲಿಲ್ಲ?
ವಿಧಾನಸೌಧದಲ್ಲಿ ದೇವೇಗೌಡರ ಫೋಟೋವನ್ನು ನೀವು ತೆಗೆಸಿದ್ದೀರಿ?
ಸ್ವಚ್ಛ ಮಾಡುವ ಸಮಯದಲ್ಲಿ ಫೋಟೋವನ್ನು ತೆಗೆಯಲಾಗಿತ್ತು. ಬಳಿಕ ಹಾಕಲಾಗಿದೆ.
ಅತಂತ್ರ ಪರಿಸ್ಥಿತಿ ಬಂದಲ್ಲಿ ಜೆಡಿಎಸ್ ಬಿ ಟೀಂ ಎಂದು ಹೇಳಿ ತಪ್ಪು ಮಾಡಿದ್ದೇನೆ ಅಂತ ಅನಿಸುತ್ತಾ?
ಆ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸಂಪೂರ್ಣ ಬಹುಮತ ಬರಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನಾನೇ ಸಿಎಂ ಯಾರು ಏನಾದರು ಹೇಳಿಕೊಳ್ಳಲಿ.
ಯತೀಂದ್ರ ಅವರನ್ನು ಯಾವಾಗ ಅಧಿಕಾರಕ್ಕೆ ತರಬೇಕು ಅಂತಾ ಅನ್ನಿಸಿತು?
ನನ್ನ ಕ್ಷೇತ್ರವನ್ನು ರಾಕೇಶ್ ನೋಡಿಕೊಳ್ಳುತ್ತಿದ್ದ. ನಾನು ಹೆಚ್ಚು ಹೋಗುತ್ತಿರಲಿಲ್ಲ. ಅವನು ಸತ್ತು ಹೋದ ಮೇಲೆ ನನಗೆ ಹೋಗಲಿಕ್ಕೆ ಆಗುತ್ತಿರಲಿಲ್ಲ. ಹಾಗಾಗಿ ನೋಡಿಕೊಳ್ಳಪ್ಪ ಎಂದು ಯತೀಂದ್ರಗೆ ಹೇಳಿದೆ. ಮೊದಲ ಮಗ ರಾಕೇಶ್ ಇದ್ದಿದ್ದರೆ ನಾನು ಯೋಚನೆ ಮಾಡುವ ಹಾಗೆ ಇರುತ್ತಿರಲಿಲ್ಲ.
ಲಿಂಗಾಯತ, ನಾಡ ಧ್ವಜ ವಿಚಾರ ಸಮಸ್ಯೆ ಸೃಷ್ಟಿ ಮಾಡಿತಾ?
ಹಿರಿಯ ಪತ್ರಕರ್ತರು ಪಾಟಿಲ್ ಪುಟ್ಟಪ್ಪನವರು ನಾಡ ಧ್ವಜ ಬೇಕು ಎಂದು ಅರ್ಜಿ ಕೊಟ್ಟರು. ಅದಕ್ಕಾಗಿ ಒಂದು ಸಮಿತಿ ರಚನೆ ಮಾಡಿದೆವು. ಸಮಿತಿ ವರದಿ ಕೊಟ್ಟಿತು. ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆವು. ಇದು ನಾನಾಗೆ ಶಿಫಾರಸ್ಸು ಮಾಡಿದ್ದಲ್ಲ ಸುಮ್ಮನೆ ಆರೋಪ ಮಾಡುತ್ತಾರೆ. ಯಡಿಯೂರಪ್ಪ ಕಾಲದಲ್ಲೂ ಆಗಿದೆ ಇದು ಹೊಸದಲ್ಲ.
ಜಾತಿ ಸಮೀಕ್ಷೆ ಇನ್ನೂ ಬಿಡುಗಡೆ ಅಗಿಲ್ಲ ಯಾಕೆ?
ಇನ್ನು ಪೂರ್ಣ ಆಗಿಲ್ಲ. ಹಿಂದುಳಿದ ವರ್ಗದ ಆಯೋಗದಲ್ಲಿ ಸಾಂವಿಧಾನಿಕ ಸಾಧ್ಯತೆಗಳನ್ನು ನೋಡಬೇಕು. ಸುಪ್ರೀಂ ಆದೇಶ ನೋಡಬೇಕು. ಎಲ್ಲವನ್ನು ನೋಡಿ ವರದಿ ಕೊಡಿ ಎಂದು ಹೇಳಿದ್ದೇನೆ ನೋಡಬೇಕು.
ಸಿದ್ದರಾಮಯ್ಯನವರು ಹಿಂದು ವಿರೋಧಿನಾ?
ನಾನು ಹಿಂದು. ಜನರನ್ನು ಪ್ರೀತಿಸುತ್ತೇನೆ. ಯಾವುದೇ ಜಾತಿ ಮತಕ್ಕೆ ಸೇರಿರಲಿ.
ಕಾಂಗ್ರೆಸ್ ಜೊತೆ ಹೊಂದಿಕೊಳ್ಳಲು ಕಷ್ಟ ಆಯ್ತಾ?
ಕಾಂಗ್ರೆಸ್ ಅಲ್ಲಿ ಎಲ್ಲರೂ ಗೌರವ, ಪ್ರೀತಿಯಿಂದ ಕಂಡರು ಹೈಕಮಾಂಡ್ ಬೆಂಬಲ ನೀಡಿತು. ಹಾಗಾಗಿ ಕಷ್ಟ ಆಗಲಿಲ್ಲ.
ಒಂದು ಬಾರಿ ಮುಖ್ಯಮಂತ್ರಿ ಆಗಿದ್ದೀರಿ ಇನ್ನೊಮ್ಮೆ ನಿಮ್ಮನ್ನೇ ಏನಕ್ಕೆ ಮಾಡಬೇಕು?
ಒಳ್ಳೆ ಕೆಲಸ ಮಾಡುವವರನ್ನು ಮುಂದುವರೆಸುತ್ತಾರೆ.
ದೇವರಾಜು ಅರಸು ಅವರನ್ನು ಹಿಂದುಳಿದೋರು, ದಲಿತ ವರ್ಗಗಳಿಗೆ ಹೋರಾಟ ಮಾಡಿದರು ಎಂದು ನೆನೆಪಿಸಿಕೊಳ್ಳುತ್ತಾರೆ. ನಿಮ್ಮನ್ನು?
ಬಡವರು ಹೆಚ್ಚಿರುವುದು ಅಹಿಂದ ವರ್ಗದಲ್ಲಿ ಹಾಗಂತಾ ಬೇರೆ ವರ್ಗಗಳಲ್ಲಿ ಇಲ್ಲಾ ಅಂತ ಅಲ್ಲ. ಅವರಿಗಾಗಿ ಒಳ್ಳೆಯ ಉಪಯುಕ್ತ ಯೋಜನೆಗಳನ್ನು ಕೊಟ್ಟಿದ್ದೇನೆ.
https://www.youtube.com/watch?v=_ypk54eV3Ig