ಬೆಂಗಳೂರು: ಉಕ್ರೇನ್‍ನಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರು ಮುಖ್ಯವಾಗಿ ವಿದ್ಯಾರ್ಥಿಗಳು ಸಾವು-ಬದುಕಿನ ಹೋರಾಟ ನಡೆಸುತ್ತಿರುವಂತಹ ಅಸಹಾಯಕ ಸ್ಥಿತಿಗೆ ತಲುಪಲು ಕೇಂದ್ರ ಸರ್ಕಾರದ ಅನಿಶ್ಚಿತತೆ ಮತ್ತು ಬೇಜವಾಬ್ದಾರಿ ನೀತಿ-ನಿಲುವುಗಳೇ ಕಾರಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ಕಳೆದ ಕೆಲವು ತಿಂಗಳುಗಳಿಂದ ಉಕ್ರೇನ್ ಮತ್ತು ರಷ್ಯಾಗಳ ನಡುವೆ ಯಾವುದೇ ಕ್ಷಣದಲ್ಲಿ ಆದರೂ ಯುದ್ಧ ನಡೆಯಬಹುದು ಎಂಬ ವರದಿಗಳಿತ್ತು. ಈ ಹಿನ್ನೆಲೆಯಲ್ಲಿ ವಿಶ್ವದ ಹಲವಾರು ದೇಶಗಳು ಅಲ್ಲಿರುವ ತಮ್ಮ ಪ್ರಜೆಗಳನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳುವ ಪ್ರಯತ್ನ ಪ್ರಾರಂಭಿಸಿದ್ದರು. ಆದರೆ ಭಾರತ ಮಾತ್ರ ಯುದ್ಧ ಪ್ರಾರಂಭವಾಗುವವರೆಗೆ ಭಾರತೀಯರ ಸುರಕ್ಷತೆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ತನ್ನನ್ನು ವಿಶ್ವಗುರು ಎಂದು ಕೊಂಡಾಡುತ್ತಾ ಭಕ್ತರು ನಡೆಸುತ್ತಿರುವ ಬೋಪರಾಕ್ ಭಜನೆಗೆ ಪ್ರಧಾನಿಯವರು ತಲೆ ತೂಗುತ್ತಾ ಕಾಲಹರಣ ಮಾಡಿದರೇ ವಿನಃ ಉಕ್ರೇನ್‍ನಲ್ಲಿ ಸಿಲುಕಿರುವ ಸಾವಿರಾರು ಭಾರತೀಯರ ಸುರಕ್ಷತೆ ಬಗ್ಗೆ ಗಮನ ನೀಡಲೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಕೇಂದ್ರದ ನಿರ್ಲಕ್ಷ್ಯದಿಂದ ನವೀನ್ ಸಾವು: ಕೇಂದ್ರ ಸರ್ಕಾರದ ಈ ನಿರ್ಲಕ್ಷ್ಯದಿಂದಾಗಿಯೇ ಕರ್ನಾಟಕದ ವಿದ್ಯಾರ್ಥಿ ನವೀನ್ ಪ್ರಾಣ ಕಳೆದುಕೊಂಡಿದ್ದು, ಆತನ ಹೆತ್ತವರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಆ ವಿದ್ಯಾರ್ಥಿಯ ಸಹಪಾಠಿಗಳು ಮತ್ತು ಹೆತ್ತವರ ಹೇಳಿಕೆಗಳು ಕೇಂದ್ರ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿವೆ. ಪ್ರಧಾನಿ ಮೋದಿ ಮತ್ತು ವಿದೇಶಾಂಗ ವ್ಯವಹಾರ ಸಚಿವರು ಸಕಾಲದಲ್ಲಿ ಈ ವಿದ್ಯಾರ್ಥಿಗಳ ನೆರವಿಗೆ ಧಾವಿಸಿ ಅವರನ್ನು ಭಾರತಕ್ಕೆ ಕರೆತಂದಿದ್ದರೆ ಅಮೂಲ್ಯವಾದ ಜೀವವೊಂದು ಉಳಿಯುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
Advertisement
Advertisement
ಕೇಂದ್ರವನ್ನು ಬೆಂಬಲಿಸುವೆ: ನಮ್ಮೊಳಗಿನ ರಾಜಕೀಯ ಭಿನ್ನಾಭಿಪ್ರಾಯಗಳು, ಸೈದ್ಧಾಂತಿಕ ವ್ಯತ್ಯಾಸಗಳು ಏನೇ ಇದ್ದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರವನ್ನು ಬೆಂಬಲಿಸುವುದು ನಮ್ಮ ಕರ್ತವ್ಯವಾಗಿದೆ. ಈ ಕರ್ತವ್ಯ ಪ್ರಜ್ಞೆಯಿಂದಾಗಿ ಕೇಂದ್ರ ಸರ್ಕಾರದ ವೈಫಲ್ಯಗಳ ಪಟ್ಟಿಯನ್ನು ಪೂರ್ಣವಾಗಿ ನೀಡಲು ನಾನು ಬಯಸುವುದಿಲ್ಲ. ಉಕ್ರೇನ್ ಮತ್ತು ರಷ್ಯಾ ನಡುವಿನ ಈಗಿನ ಯುದ್ಧಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಲೇಬೇಕಾಗುತ್ತದೆ ಎಂದರು. ಇದನ್ನೂ ಓದಿ: ಮೈದುನನ ಮೃತದೇಹವನ್ನಾದರೂ ನಮಗೆ ನೀಡಿ: ನವೀನ್ ಅತ್ತಿಗೆ ಕಣ್ಣೀರು
ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾಥಿಗಳ ಮೇಲೆ ಹಲ್ಲೆ: ಉಕ್ರೇನ್‍ನ ಬಹಳಷ್ಟು ಪ್ರದೇಶಗಳಲ್ಲಿ ಆ ದೇಶದ ಜನ ಮತ್ತು ಸೈನಿಕರು ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ-ದೌರ್ಜನ್ಯಗಳನ್ನು ನಡೆಸುತ್ತಿರುವುದು ಮಾತ್ರವಲ್ಲ, ಅಪಹರಿಸಿಕೊಂಡು ಹೋಗಿರುವ ಘಟನೆಗಳು ಕೂಡಾ ವರದಿಯಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ನೀಟ್ ವ್ಯವಸ್ಥೆ ಬಡವರ ವೈದ್ಯ ಶಿಕ್ಷಣದ ಕನಸು ನುಚ್ಚುನೂರು ಮಾಡುತ್ತಿದೆ: ಕುಮಾರಸ್ವಾಮಿ
ನರೇಂದ್ರ ಮೋದಿ ಸರ್ಕಾರ ಯುಕ್ರೇನ್‍ನಿಂದ ಭಾರತೀಯರನ್ನು ಕರೆತರುವ ಕಾರ್ಯಾಚರಣೆಗೂ ಗಂಗಾ ನದಿಯ ಹೆಸರು ಕೊಟ್ಟು ಅದನ್ನು ಉತ್ತರ ಪ್ರದೇಶದ ಚುನಾವಣೆಯ ಪ್ರಚಾರದಲ್ಲಿ ಬಳಸಲು ಹೊರಟಿದೆ ಎಂದ ಅವರು, ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರದ ಜೊತೆ ನಿರಂತರ ಸಂಪರ್ಕವಿಟ್ಟುಕೊಂಡು ಯುಕ್ರೇನ್‍ನಲ್ಲಿ ಸಂಕಷ್ಟದಲ್ಲಿರುವ ಭಾರತೀಯರನ್ನು ವಾಪಸ್ಸು ಕರೆತರುವ ಪ್ರಯತ್ನವನ್ನು ಮಾಡಬೇಕು. ಇದೇ ವೇಳೆ ಕೇಂದ್ರ ಸರ್ಕಾರ ಯುಕ್ರೇನ್ ಮತ್ತು ರಷ್ಯಾ ದೇಶಗಳ ಜೊತೆ ಮಾತುಕತೆ ನಡೆಸಿ ಭಾರತೀಯರ ಸುರಕ್ಷತೆಯನ್ನು ಖಾತರಿ ಪಡಿಸಬೇಕು ಎಂದು ಒತ್ತಾಯಿಸಿದರು.