– 21ನೇ ಶತಮಾನಕ್ಕೆ ಅಭಿವೃದ್ಧಿ ತಂದಿದ್ದು ಕಾಂಗ್ರೆಸ್, ಬಿಜೆಪಿ ಕೊಡುಗೆ ಶೂನ್ಯ
– ಆರ್‌ಎಸ್‌ಎಸ್, ಜನಸಂಘದವರು ದೇಶಭಕ್ತರಲ್ಲ ಅಂತ ಸಿಎಂ ಕಿಡಿ
ಬೆಂಗಳೂರು: ದೇಶದಲ್ಲಿ ಬದಲಾವಣೆ ಆಗಿದ್ದರೆ ಅದಕ್ಕೆ ಕಾಂಗ್ರೆಸ್ (Congress) ಕಾರಣ. ಗಾಂಧಿ ಹೆಸರು ಅಳಿಸೋಕೆ ಬಿಡಬಾರದು. ನಾವೆಲ್ಲರು ಒಟ್ಟಾಗಿ ಹೋರಾಟ ಮಾಡಬೇಕು. 60:40 ಶೇರ್ ಕೊಡಬೇಕು ಅಂತ ಕೇಂದ್ರ ನರೇಗಾ ಯೋಜನೆ ಬದಲಾವಣೆ ಮಾಡಿದೆ. ಇದರಿಂದ ರಾಜ್ಯದ ಮೇಲೆ 25 ಸಾವಿರ ಕೋಟಿ ರೂಪಾಯಿ ಆರ್ಥಿಕ ಹೊರೆ ಬೀಳುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.
ಭಾರತೀಯ ಸ್ವಾತಂತ್ರ್ಯ ಚಳವಳಿಯ ಮುಂಚೂಣಿಯಲ್ಲಿ ನಿಂತು, ಇಡೀ ಹೋರಾಟಕ್ಕೆ ಸಮಷ್ಟಿಯ ರೂಪ ನೀಡಿದ ಕಾಂಗ್ರೆಸ್ ಪಕ್ಷ ಸ್ಥಾಪನೆಯಾದ ಐತಿಹಾಸಿಕ ದಿನವಿದು. ದೇಶ, ದೇಶ ವಾಸಿಗಳಿಗೆ ಅಪಾಯ ಎದುರಾದಾಗೆಲ್ಲಾ ಹೋರಾಟಕ್ಕೆ ಮುಂದಾಗಿ, ತ್ಯಾಗ – ಬಲಿದಾನಗೈದ ನಿಸ್ವಾರ್ಥ ಇತಿಹಾಸವಿರುವುದು ಕಾಂಗ್ರೆಸ್‌ಗೆ ಮಾತ್ರ.
ಕಾಂಗ್ರೆಸ್ ಕೇವಲ ಒಂದು ಪಕ್ಷವಾಗಿರದೆ ಜನಪರ… pic.twitter.com/SMzgOR9C4k
— Siddaramaiah (@siddaramaiah) December 28, 2025
ಕೆಪಿಸಿಸಿ (KPCC) ಕಚೇರಿಯಲ್ಲಿಂದು ನಡೆದ ಕಾಂಗ್ರೆಸ್ ಸಂಸ್ಥಾಪಕ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, 21ನೇ ಶತಮಾನಕ್ಕೆ ಅಭಿವೃದ್ಧಿ ತಂದವರು ಕಾಂಗ್ರೆಸ್‌ನವರು. ಬಿಜೆಪಿ (BJP) ಕೊಡುಗೆ ಶೂನ್ಯ. ದೇಶ ಒಡೆಯೋದು, ಸಮಾಜ ಒಡೆಯೋದು, ಜಾತಿ ವ್ಯವಸ್ಥೆ ಹುಟ್ಟುಹಾಕಿದ್ದು ಇವಿಷ್ಟೇ ಬಿಜೆಪಿ ಕೊಡುಗೆ. ಚಾತುರ್ವರ್ಣ ವ್ಯವಸ್ಥೆ ಹುಟ್ಟುಹಾಕಿದ್ದು ಬಿಜೆಪಿಯವರೇ, ಸಮಾನ ಅವಕಾಶ ಬಂದಿದ್ದು ಸಂವಿಧಾನ ರಚನೆ ಆದಮೇಲೆ. ಭಾರತ ಪ್ರಜಾಪ್ರಭುತ್ವ ದೇಶ. ವಿಶ್ವದ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಜಾಪ್ರಭುತ್ವ ಬೇರೆ ಕಡೆ ಇಲ್ಲ ಎಂದ ಅವರು ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರವನ್ನ ಸ್ಮರಿಸಿದರು.

ಅಸಹಕಾರ ಚಳವಳಿ, ಕ್ವಿಟ್ ಇಂಡಿಯಾ ಚಳವಳಿ ಪ್ರಾರಂಭ ಆಗಿತ್ತು. ಆಗ ಆರ್‌ಎಸ್‌ಎಸ್ (RSS), ಜನಸಂಘ ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಆರ್‌ಎಸ್‌ಎಸ್ ಅವರು ಬ್ರಿಟಿಷ್ ಜೊತೆ ಸೇರಿಕೊಂಡಿದ್ದರು. ಈಗ ಅವರು ನಮಗೆ ದೇಶಭಕ್ತಿ ಹೇಳಿಕೊಡ್ತಾರೆ. ಆರ್‌ಎಸ್‌ಎಸ್, ಜನಸಂಘದವರು ದೇಶಭಕ್ತರಲ್ಲ. ಆದ್ರೆ ಉದ್ದುದ್ದ ಭಾಷಣ ಬಿಗಿತಾರೆ. ಆರ್‌ಎಸ್‌ಎಸ್ ಕಚೇರಿಯಲ್ಲಿ ರಾಷ್ಟ್ರಧ್ವಜ ಇರಲಿಲ್ಲ. ಈಗ ಹಾಕಿಕೊಂಡಿದ್ದಾರೆ. ಈಗ ಗಾಂಧಿಯವರನ್ನ ದ್ವೇಷ ಮಾಡೋಕೆ ಶುರು ಮಾಡಿದ್ದಾರೆ. ಗಾಂಧಿಯನ್ನ ಕೊಂದವರು ಆರ್‌ಎಸ್‌ಎಸ್ ವಂಶಸ್ಥರಾದ ನಾಥೂರಾಮ್ ಗೋಡ್ಸೆ ಎಂದು ವಾಗ್ದಾಳಿ ನಡೆಸಿದರು.
ಆರ್‌ಎಸ್‌ಎಸ್ ಅವರಿಗೆ ದೇಶಕ್ಕೆ ಸ್ವಾತಂತ್ರ‍್ಯ ಬರೋದು ಇಷ್ಟ ಇರಲಿಲ್ಲ. ಆಧುನಿಕ ಭಾರತದ ರೂವಾರಿ ಇದ್ದರೆ ಜವಹರಲಾಲ್ ನೆಹರು ಅವರೇ ಹೊರತು ಬಿಜೆಪಿಯ ವಾಲಾ, ಅಡ್ವಾಣಿ, ವಾಜಪೇಯಿ ಆಗಲಿ ಅಲ್ಲ. ಆರ್‌ಎಸ್‌ಎಸ್, ಜನಸಂಘ, ಬಿಜೆಪಿ, ಹಿಂದೂ ಮಹಾಸಭಾ ಯಾರಿಂದಲೂ ಅಲ್ಲ. ನಾವೆಲ್ಲರು ಕಾಂಗ್ರೆಸ್ ಅನ್ನೋದು ಹೆಮ್ಮೆ ವಿಚಾರ. ಏಕೆಂದ್ರೆ ದೇಶಕ್ಕೆ ಸ್ವಾತಂತ್ರ‍್ಯ ತಂದುಕೊಟ್ಟಿದ್ದು ಕಾಂಗ್ರೆಸ್. `ಜೈ ಜವಾನ್ ಜೈ ಕಿಸಾನ್’ ಅಂತ ಹೇಳಿದರು ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ ಸಾಮಾಜಿಕ ಕ್ರಾಂತಿ ರೂವಾರಿ. ಗರೀಬಿ ಹಠಾವೋ, 20 ಅಂಶದ ಕಾರ್ಯಕ್ರಮದ ರೂವಾರಿ. ಆಹಾರದಲ್ಲಿ ಸ್ವಾವಲಂಬನೆ ಬಂದಿದ್ದರೆ ಅದೂ ಕೂಡ ಇಂದಿರಾ ಗಾಂಧಿ, ಬಾಬೂ ಜಗಜೀವನ್‌ರಾಮ್ ಅವರಿಂದ ಎಂದು ತಿಳಿವಳಿಕೆ ನೀಡಿದ್ರು.

ನರೇಗಾಕ್ಕೆ ಬಿಜೆಪಿ ರಾಮನ ಹೆಸರಿಟ್ಟಿದ್ದಾರೆ
ಅಸಮಾನತೆ ಹೋಗಲಾಡಿಸಲು ಅನೇಕ ಕಾರ್ಯಕ್ರಮ ಕಾಂಗ್ರೆಸ್ ಮಾಡಿದೆ. ಸೋನಿಯಾ ಗಾಂಧಿ ನಾಯಕತ್ವದಲ್ಲಿ ಮನಮೋಹನ್ ಸಿಂಗ್ ಅವರು ಕಾರ್ಯಕ್ರಮಗಳನ್ನ ಮೂಲಭೂತ ಹಕ್ಕುಗಳನ್ನಾಗಿ ಮಾಡಿದ್ರು. ಆರ್‌ಟಿಐ, ಆರ್‌ಟಿಇ ಎಲ್ಲಾ ಮಾಡಿದ್ದು ಕಾಂಗ್ರೆಸ್. ಬಿಜೆಪಿ ಅವರು ಅಲ್ಲ. ಈಗ `ರೈಟ್ ಟು ವರ್ಕ್ ನರೇಗಾ’ ಹೆಸರು ಬದಲಾವಣೆ ಮಾಡೋಕೆ ಹೊರಟಿದ್ದಾರೆ. ದ್ವೇಷ ಇರಬೇಕು ಮನುಷ್ಯನಿಗೆ. ಆದರೆ ಈ ಪ್ರಮಾಣದಲ್ಲಿ ಇರಬಾರದು. ಗಾಂಧಿಯನ್ನ ಕೊಂದಮೇಲೂ ದ್ವೇಷ ಬಿಡಲಿಲ್ಲ. ನೆಹರು, ಗಾಂಧಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಕಂಡರು ಆಗೊಲ್ಲ. ನನ್ನನ್ನು ಕಂಡರು ಆಗೊಲ್ಲ. ನನಗೇನು ಮಾಡೊಲ್ಲ ಬಿಡಿ. ಆದ್ರೆ ನರೇಗಾ ಹೆಸರು ಬದಲಾವಣೆ ಮಾಡಿ ಜೀ ರಾಮ್ ಜೀ ಮಾಡಿದ್ದಾರೆ. ರಾಮ ಅಂದರೆ ದಶರಥ ರಾಮ ಅಲ್ಲ. ಬಿಜೆಪಿ ಅವರ ರಾಮ ಎಂದು ಕಿಡಿ ಕಾರಿದರು.
ಗಾಂಧಿ ಹೆಸರು ಅಳಿಸೋಕೆ ಬಿಡಬಾರದು
ದೇಶದಲ್ಲಿ ಬದಲಾವಣೆ ಆಗಿದ್ದರೆ ಕಾಂಗ್ರೆಸ್ ಕಾರಣ. ಗಾಂಧಿ ಹೆಸರು ಅಳಿಸೋಕೆ ಬಿಡಬಾರದು. ನಾವೆಲ್ಲರು ಒಟ್ಟಾಗಿ ಹೋರಾಟ ಮಾಡಬೇಕು. ಗ್ರಾಮೀಣ ಭಾಗದ ಆರ್ಥಿಕತೆ ಹಾಳು ಮಾಡೋಕೆ ಹೊರಟಿದ್ದಾರೆ. ದಲಿತರು, ಮಹಿಳೆಯರಿಗೆ ನರೇಗಾ ಕೆಲಸ ಕೊಡಲಾಗ್ತಿತ್ತು. ಇದನ್ನ ನಾಶ ಮಾಡೋಕೆ ಹೊರಟಿದೆ ಬಿಜೆಪಿ. 60:40 ಶೇರ್ ಕೊಡಬೇಕು ಅಂತ ಕೇಂದ್ರ ಮಾಡಿದೆ. ರಾಜ್ಯದ ಮೇಲೆ ಭಾರಿ ಹೊರೆ ಬರುತ್ತದೆ. 25 ಸಾವಿರ ಕೋಟಿ ಹೊರೆ ಬರುತ್ತದೆ ರಾಜ್ಯದ ಮೇಲೆ. ಇದನ್ನ ಆಗೋಕೆ ಬಿಡಬಾರದು. ಇಡೀ ದೇಶದಲ್ಲಿ ಹೆಚ್ಚು ಕಾರ್ಯಕರ್ತರು ಇರೋ ಪಕ್ಷ ಕಾಂಗ್ರೆಸ್. ಇದನ್ನ ಉಳಿಸಲು ನಾವೆಲ್ಲರು ಕೆಲಸ ಮಾಡೋಣ ಎಂದು ಕರೆ ನೀಡಿದರು.

