ಬೆಂಗಳೂರು: ಅನಾರೋಗ್ಯದಿಂದ ಸುಧಾರಿಸಿಕೊಳ್ಳುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ನಿವಾಸದಿಂದ ಖಾಸಗಿ ಫಾರ್ಮ್ ಹೌಸ್ ಒಂದಕ್ಕೆ ತೆರಳಿ ವಿಶ್ರಾಂತಿಗೆ ಮೊರೆ ಹೋಗಿದ್ದಾರೆ. ಕಾವೇರಿ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಸಾಕಷ್ಟು ಸಂಖ್ಯೆಯಲ್ಲಿ ರಾಜಕೀಯ ಮುಖಂಡರು ಸೇರಿದಂತೆ ಅಭಿಮಾನಿಗಳು ಸಿದ್ದರಾಮಯ್ಯರನ್ನ ಮಾತನಾಡಿಸಲು ಬರುತ್ತಿದ್ದರು.
ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದು ಜನಜಂಗುಳಿಯಿಂದ ದೂರವಿದ್ದು ವಿಶ್ರಾಂತಿ ಪಡೆಯಲು ಮಾಜಿ ಸಿಎಂ ನಿರ್ಧರಿಸಿದ್ದಾರೆ. ಬೆಂಗಳೂರು ಹೊರವಲಯದ ಖಾಸಗಿ ಫಾರ್ಮ್ ಹೌಸ್ ನಲ್ಲಿ ಇಂದಿನಿಂದ 4 ದಿನಗಳ ಕಾಲ ಸಿದ್ದರಾಮಯ್ಯ ವಿಶ್ರಾಂತಿ ಪಡೆಯಲಿದ್ದಾರೆ.
ಸಿದ್ದರಾಮಯ್ಯ ವಾಸ್ತವ್ಯ ಹೂಡಿರುವ ಫಾರ್ಮ್ ಹೌಸ್ ಕಡೆಗೆ ಅವರನ್ನ ನೋಡಲು ಮಾತನಾಡಿಸಲು ಜನ ಬರಬಹುದು ಎಂಬ ಕಾರಣಕ್ಕೆ ಯಾವ ಫಾರ್ಮ್ ಹೌಸ್ ಅನ್ನೋದನ್ನ ಬಹಿರಂಗ ಪಡಿಸಿಲ್ಲ. ಒಟ್ಟಾರೆ ಇನ್ನು ನಾಲ್ಕು ದಿನಗಳ ಕಾಲ ಸಿದ್ದರಾಮಯ್ಯನವರು ರಹಸ್ಯ ಸ್ಥಳದಲ್ಲಿದ್ದು ಸೋಮವಾರದ ನಂತರ ಸಾರ್ವಜನಿಕರ ಭೇಟಿಗೆ ನಿರ್ಧರಿಸಿದ್ದಾರೆ.