ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ ನಡೆಯುತ್ತಿದ್ದು, ಎಲ್ಲವೂ ಕೈ ಮೀರಿ ಹೋಗಿದೆ ಏನು ಮಾಡುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬೇಸರದಿಂದ ಹೇಳಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದುಬಂದಿದೆ.
ಇಂದು ಕಾಂಗ್ರೆಸ್-ಜೆಡಿಎಸ್ ಶಾಸಕರು ಸೇರಿದಂತೆ 13 ಅತೃಪ್ತ ಶಾಸಕರು ಸ್ಪೀಕರ್ ಕಚೇರಿಗೆ ಹೋಗಿ ರಾಜೀನಾಮೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲೇ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಜೊತೆ ಮಾತುಕತೆ ನಡೆಸಿದ್ದಾರೆ.
ಕಾಂಗ್ರೆಸ್ ಶಾಸಕರ ರಾಜೀನಾಮೆ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದು, ಶಾಸಕರನ್ನು ಸಂಪರ್ಕಿಸಲು ಕಾಂಗ್ರೆಸ್ ನಾಯಕರು ಯತ್ನಿಸುತ್ತಿದ್ದಾರೆ. ಆದರೆ ಅತೃಪ್ತ ಶಾಸಕರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಇತ್ತ ಬೆಂಗಳೂರು ಶಾಸಕರನ್ನು ಸಂಪರ್ಕಿಸಲು ಸಿದ್ದರಾಮಯ್ಯ ಸರ್ಕಸ್ ಮಾಡುತ್ತಿದ್ದಾರೆ. ಆದರೆ ಅವರು ಕೂಡ ಯಾವುದೇ ಸಂಪರ್ಕಕ್ಕೆ ಸಿಗುತ್ತಿಲ್ಲ.
ಸಿದ್ದರಾಮಯ್ಯ ಶಾಸಕರನ್ನು ಸಂಪರ್ಕಿಸಲು ಬೆಳಗ್ಗೆ 9 ಗಂಟೆಯಿಂದ ಕಸರತ್ತು ಮಾಡಿದ್ದಾರೆ. ಈ ವೇಳೆ ಎಲ್ಲವೂ ಕೈ ಮೀರಿ ಹೋಗಿದೆ ಏನು ಮಾಡುವುದು ಎಂದು ಸಿದ್ದರಾಮಯ್ಯ ಬೇಸರದಿಂದ ಕೈ ಚೆಲ್ಲಿ ಕುಳಿತಿದ್ದಾರೆ.