– ಈಗ ಜಿಎಸ್‌ಟಿ 2 ಸ್ಲ್ಯಾಬ್ ಮಾಡಿದ್ದಾರೆ, ಹಾಗಿದ್ರೆ 8 ವರ್ಷದಿಂದ ತೆಗೆದುಕೊಂಡ ಟ್ಯಾಕ್ಸ್ ಕೊಟ್ಟುಬಿಡಿ
– ಅನ್ನ ಉಣ್ಣುವಂತೆ ಮಾಡಿದ್ದು ನಾವು, ವೋಟ್ ಬಿಜೆಪಿಗೆ ಹಾಕ್ತೀರ ಎಂದ ಸಿಎಂ
ಮೈಸೂರು: ನರೇಂದ್ರ ಮೋದಿ (PM Modi) ಅವರು ಹೇಗೆ ಟೋಪಿ ಹಾಕ್ತಾರೆ ಅಂತ ನೀವು ತಿಳಿದುಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಮೈಸೂರಿನಲ್ಲಿ ದಸರಾ ಆಹಾರ ಮೇಳಕ್ಕೆ (Mysuru Dasara Food Festival )ಚಾಲನೆ ನೀಡಿದ ಬಳಿಕ ವೇದಿಕೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ 8 ವರ್ಷದ ಹಿಂದೆ ಜಿಎಸ್‌ಟಿ (GST) ಶುರುಮಾಡಿದ್ರು. ಈಗ ಕಡಿಮೆ ಮಾಡಿದ್ದೇವೆ, ಎರಡು ಸ್ಲ್ಯಾಬ್ ಮಾಡಿದ್ದೇವೆ ಅಂತ ಹೆಸರು ತೆಗೆದುಕೊಳ್ಳುತ್ತಿದ್ದಾರೆ. ನರೇಂದ್ರ ಮೋದಿ ಹೇಗೆ ಟೋಪಿ ಹಾಕ್ತಾರೆ ಅಂತ ನೀವು ತಿಳಿದುಕೊಳ್ಳಬೇಕು ಎಂದರಲ್ಲದೇ ಸ್ಲ್ಯಾಬ್ ಮಾಡಿದವರು ಯಾರು…? ಎಂದು ಪ್ರಶ್ನಿಸಿದ್ದಾರೆ.
ಮೋದಿಯವರೆ, ಹಾಗಿದ್ರೆ 8 ವರ್ಷದಿಂದ ತೆಗೆದುಕೊಂಡ ಟ್ಯಾಕ್ಸ್ ಕೊಟ್ಟುಬಿಡಿ. ಈಗ ಹೆಸರು ತೆಗೆದುಕೊಳ್ಳಲು ಇದೆಲ್ಲ ಮಾಡುತ್ತಿದ್ದಾರೆ. ನಾವು ಮಾಡಿದ್ದಕ್ಕೆ ಇವರು ಹೆಸರು ತೆಗೆದುಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಮುಂದುವರಿದು.. ಹಿಂದೆಲ್ಲ ನೆಂಟರು ಬಂದಾಗ ಮಾತ್ರ ಅನ್ನ ತಿನ್ನೋಕೆ ಆಗ್ತಿತ್ತು. ಆದ್ರೆ ಪ್ರತಿದಿನ ಅನ್ನ ಉಣ್ಣುವಂತೆ ಮಾಡಿದ್ದು ಯಾರು? ವೋಟ್ ಮಾತ್ರ ಬಿಜೆಪಿಗೆ ಹಾಕ್ತೀರ. ಕೇಂದ್ರದಲ್ಲಿ ಬಿಜೆಪಿ, ರಾಜ್ಯದಲ್ಲಿ ಕಾಂಗ್ರೆಸ್ ಅಂತಾರೆ ಎಂದರು.
ಪುಳಿಯೊಗರೆಯನ್ನ ಒಂದು ಜನಾಂಗದವರು ಚೆನ್ನಾಗಿ ಮಾಡ್ತಾರೆ
ಇನ್ನೂ ಆಹಾರ ಮೇಳದ ಬಗ್ಗೆ ಮಾತನಾಡಿ, ನಾನು ಪುಳಿಯೊಗರೆ ತಿಂದೆ. ಅದನ್ನ ಒಂದು ಜನಾಂಗದವರು ಹೆಚ್ಚು ಮಾಡ್ತಾರೆ. ಅಯ್ಯಂಗಾರ್ ಅಂತೆ, ನಾನು ಇದನ್ನ ಹೇಳಿದ್ರೆ ಕೆಲವರಿಗೆ ಬೇಜಾರಾಗುತ್ತೆ. ಇದು ಈ ರೀತಿಯ ಆಹಾರ ಎಲ್ಲರಿಗೂ ಪರಿಚಯ ಆಗಬೇಕು ಅಂತಾನೆ ಆಹಾರ ಮೇಳ ಮಾಡಿರೋದು. ಉತ್ತರ ಕರ್ನಾಟಕದಲ್ಲಿ ಹೆಚ್ಚು ಅಡುಗೆ ಎಣ್ಣೆ ಬಳಸಿ ಅಡುಗೆ ಮಾಡುತ್ತಾರೆ. ಆದ್ರೆ ನಾವು ಹಾಗೇ ಮಾಡಿ, ತಿಂದ್ರೆ ಭೇದಿ ಕಿತ್ಕೊಬಿಡುತ್ತೆ. ರಾಜ್ಯದಲ್ಲಿ ಹಲವು ಆಹಾರ ಪದ್ದತಿ ಇದೆ. ಆಹಾರ ಯಾವಾಗಲೂ ಸಮತೋಲನ ಆಹಾರ ತೆಗೆದುಕೊಳ್ಳಬೇಕು. ಜಂಬೂ ಸವಾರಿ ಆದ ಮೇಲೂ 5ನೇ ತಾರೀಖಿನ ತನಕ ಆಹಾರ ಮೇಳ ಇರಲಿದೆ ಎಲ್ಲರೂ ಬಂದು ಭಾಗವಹಿಸಿ ಎಂದು ಸಿಎಂ ಕರೆ ನೀಡಿದರು.