ಬೆಂಗಳೂರು: ಪ್ರತಿಭಟನೆ ಮಾಡುವುದು ಮೂಲಭೂತ ಹಕ್ಕು ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಪೇಪರ್ ತಿಂದವರು ಜೈಲಿಗೆ ಹೋಗುತ್ತಾರೆ, ಪ್ರತಿಭಟನೆ ಮಾಡಿದವರು ತಿಹಾರ್ ಜೈಲಿಗೆ ಹೋಗುತ್ತಾರೆ ಎಂಬ ಬಿಜೆಪಿ ನಾಯಕರ ಹೇಳಿಕೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಬಿಜೆಪಿ ಅವರಿಗೆ ಅಧಿಕಾರದ ಮದ. ಅವರು ಸ್ವಾತಂತ್ರ್ಯ ಹೋರಾಟಗಾರರಾ? ಅವರು ಸ್ವಾತಂತ್ರ್ಯ ಹೋರಾಟದಲ್ಲೇ ಇರಲಿಲ್ಲ. ಸಂವಿಧಾನ ಗೊತ್ತಿಲ್ಲ, ಮೂಲಭೂತ ಹಕ್ಕುಗಳ ಬಗ್ಗೆ ಗೊತ್ತಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಸಿದ್ದರಾಮಯ್ಯನರನ್ನು ಮುಖ್ಯಮಂತ್ರಿ ಮಾಡಲು ಜೆಡಿಎಸ್ ಬಿಟ್ಟು ಬಂದೆ: ಸಿಎಂ ಇಬ್ರಾಹಿಂ
ದೆಹಲಿಯಲ್ಲಿ ಕೈ ನಾಯಕರ ಅರೆಸ್ಟ್ ಆಗಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ನಾಯಕರು ಎಐಸಿಸಿ ಕಚೇರಿಗೆ ಹೋಗಿದ್ದರು. ಅವರನ್ನು ಅರೆಸ್ಟ್ ಮಾಡಿ, ಮ್ಯಾನ್ ಹ್ಯಾಂಡ್ಲಿಂಗ್ ಮಾಡಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ಕಾಂಗ್ರೆಸ್ ಆಫೀಸ್‍ಗೆ ಹೋಗುತ್ತಿದ್ದ ಡಿ.ಕೆ. ಸುರೇಶ್, ದಿನೇಶ್ ಗುಂಡೂರಾವ್, ಹೆಚ್.ಕೆ.ಪಾಟೀಲ್ ಅವರನ್ನು ಅರೆಸ್ಟ್ ಮಾಡಿಸಿದ್ದಾರೆ. ಈಗ ಬಿಜೆಪಿಯವರು ತುರ್ತುಪರಿಸ್ಥಿತಿ ಬಗ್ಗೆ ಮಾತನಾಡುತ್ತಾರೆ. ಎಐಸಿಸಿ ಕಚೇರಿಗೆ ಹೋಗಿದ್ದವರ ಮೇಲೆ ಹಲ್ಲೆ ಮಾಡಿದ್ದಾರೆ. ಇದೇನು ಪ್ರಜಾಪ್ರಭುತ್ವವೇ? ಇದೇನು ಸರ್ವಾಧಿಕಾರವೇ? ಪೊಲೀಸ್ ಅಧಿಕಾರವೇ? ಬಿಜೆಪಿ ಪ್ರಜಾಪ್ರಭುತ್ವ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದರು.
ಸಂವಿಧಾನದಲ್ಲಿ ಪ್ರತಿಭಟನೆ ಮಾಡಲು ಹಕ್ಕಿದೆ. ಅವರಿಗೆ ಕಾನೂನು ಗೊತ್ತಿಲ್ಲ. ಪ್ರಜಾಪ್ರಭುತ್ವ ಏನು ಎನ್ನುವುದು ಗೊತ್ತಿಲ್ಲ. ಇದೇ ಜನ ಎಮರ್ಜೆನ್ಸಿ ವಿರೋಧ ಮಾಡಿದ್ದರು. ಆಗ ಇಂದಿರಾಗಾಂಧಿಯವರನ್ನು ವಿರೋಧಿಸಿದ್ದೇಕೆ? ಈಗ ಕರೆದೊಯ್ದು ಎಂಟತ್ತು ಗಂಟೆ ಠಾಣೆಯಲ್ಲಿ ಕೂರಿಸಿದ್ದೇಕೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸ್ಟಂಟ್ ಮಾಡಲು ಹೋಗಿ 50 ವರ್ಷದ ವ್ಯಕ್ತಿ ಸಾವು
ಇದೇ ವೇಳೆ ಮೇಕೆದಾಟು ಯೋಜನೆಗೆ ಕ್ಯಾತೆ ತೆಗೆದು ತಮಿಳುನಾಡು ಸಿಎಂ ಪ್ರಧಾನಿಗೆ ಪತ್ರ ಬರೆದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರು ಏನು ಬರೆಯುತ್ತಾರೆ ಮುಖ್ಯವಲ್ಲ. ನೀರಿಗೆ ಯಾವುದೇ ತಕರಾರಿಲ್ಲ. ಇವರು ಇಚ್ಛಾಶಕ್ತಿಯನ್ನು ತೋರಬೇಕು. ಕೇಂದ್ರ ಸರ್ಕಾರದಲ್ಲಿ ಕ್ಲಿಯರ್ ಮಾಡಿಸಬೇಕು. ಸಿಡಬ್ಲ್ಯುಸಿ ಮುಂದೆ ಬಂದಾಗ ವಿರೋಧ ಮಾಡುತ್ತಾರೆ ಎಂದು ಹೇಳಿದರು.