ಮಡಿಕೇರಿ: ನಮಗೆ ಮೊಟ್ಟೆ ಎಸೆಯೋಕೆ ಬರಲ್ವಾ ನಾವು ಹೋರಾಟ ಮಾಡೋಕೆ ಶುರು ಮಾಡಿದರೆ ಸಿಎಂ ಎಲ್ಲೂ ಓಡಾಡೋಕೆ ಆಗಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಭೇಟಿಗೆ ಬಿಜೆಪಿ, ಹಿಂದೂಪರ ಸಂಘಟನೆ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದರು. ನಾನು ಬಂದು ಮಳೆ ಹಾನಿಯಾದ ಪ್ರದೇಶಗಳನ್ನು ನೋಡ್ತೀನಿ ಅಂತ ಕಾರ್ಯಕರ್ತರನ್ನು ಬಿಟ್ಟು ಪ್ರತಿಭಟನೆ ಮಾಡಿಸಿದ್ದಾರೆ. ಈ ಬಾರಿ ಕೊಡಗಿನಲ್ಲಿ ಎರಡೂ ಕಡೆ ಕಾಂಗ್ರೆಸ್ ಗೆಲ್ಲುತ್ತೆ ಅಂತ ಬಿಜೆಪಿ ಹತಾಶರಾಗಿ ಹೀಗೆ ಪ್ರತಿಭಟನೆ ಮಾಡಿದ್ದಾರೆ. ನಮಗೆ ಮೊಟ್ಟೆ ಎಸೆಯೋಕೆ ಬರಲ್ವಾ ನಾವು ಅದನ್ನೆಲ್ಲಾ ಮಾಡಿಕೊಂಡು ಬಂದಿರೋದು. ನಾವು ಹೋರಾಟ ಮಾಡೋಕೆ ಶುರು ಮಾಡಿದರೆ ಸಿಎಂ ಎಲ್ಲೂ ಓಡಾಡೋಕೆ ಆಗಲ್ಲ ಎಂದು ಎಚ್ಚರಿಕೆ ನೀಡಿದರು.
ಮೊಟ್ಟೆ ಎಸೆತ ಹೇಡಿಗಳ ಕೃತ್ಯವಾಗಿದೆ. ಟಿಪ್ಪು ವಿಚಾರನೂ ಇಲ್ಲ, ಏನೂ ಇಲ್ಲ, ಟಿಪ್ಪು ಜಯಂತಿ ಆದ್ಮೇಲೆ ನಾನು ಕೊಡಗಿಗೆ ಬಂದಿಲ್ವಾ, ಕಳಪೆ ಕೆಲಸ ನನಗೆ ಗೊತ್ತಾಗದಿರಲಿ ಎಂದು ಈ ರೀತಿ ಪ್ರತಿಭಟನೆ ಮಾಡಿದ್ದಾರೆ. ಹತಾಶರಾಗಿ ಈ ರೀತಿ ಮಾಡುತ್ತಿದ್ದಾರೆ. ಇವರಿಗೆ ಸರ್ಕಾರ ನಡೆಸಲು ಬರುವುದೇ ಇಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ – `ಗೋ ಬ್ಯಾಕ್ ಸಿದ್ದುಖಾನ್’ ಎಂದು ಆಕ್ರೋಶ
ರಾಜ್ಯದ ಹಲವು ಜಿಲ್ಲೆಗಳಲ್ಲಿ ವಾಡಿಕೆ ಮಳೆಗಿಂತ ಹೆಚ್ಚು ಮಳೆ ಬಿದ್ದಿದೆ. ಕರ್ನಾಟಕದಲ್ಲಿ 5 ಲಕ್ಷದ 23 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಆಗಿದೆ. ಇವತ್ತಿನವರೆಗೆ ಸರ್ವೆ ಮಾಡಿ ಪರಿಹಾರ ಕೊಡುವ ಪ್ರಯತ್ನವನ್ನು ಸರ್ಕಾರ ಮಾಡಿಲ್ಲ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಳೆಹಾನಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೊಡಗಿನ ಮಳೆಹಾನಿ ಆದ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಿದ್ದೇನೆ. 2018, 19, 20ರಲ್ಲಿ ಆದ ಮಳೆಯ ಹಾನಿಗೆ ಸರ್ಕಾರ ಇನ್ನೂ ಕೂಡ ಪರಿಹಾರ ನೀಡಿಲ್ಲ. ಸೇತುವೆ ತಡೆಗೋಡೆಗಳನ್ನು ತೀರಾ ಕಳಪೆಯಾಗಿ ಮಾಡಿದ್ದಾರೆ. ಅದಕ್ಕೆ ಅವೆಲ್ಲಾ ಹೀಗಾಗಿವೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಯಡಿಯೂರಪ್ಪರಿಗೆ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿರುವ ವಿಚಾರವಾಗಿ ಮಾತನಾಡಿದ ಅವರು, ಅವತ್ತು ವಯಸ್ಸಾಯ್ತು ಅಂತ ತೆಗೆದರು. ಈಗ ಅವರಿಗೆ ದೊಡ್ಡ ಹುದ್ದೆ ನೀಡಿದ್ದಾರೆ ಅಂತಾರಲ್ವಾ ಅವರ ವಯಸ್ಸು ಹಿಂದೆ ಹೋಯ್ತಾ ಎಂದು ಪ್ರಶ್ನಿಸಿದ ಅವರು, ಯಡಿಯೂರಪ್ಪರನ್ನ ಸಮಾಧಾನ ಮಾಡಲು, ಚುನಾವಣೆಗಾಗಿ ಹೀಗೆ ಮಾಡಿದ್ದಾರೆ. ಇರೋ ಮುಖ್ಯಮಂತ್ರಿ ತೆಗೆದು ಮತ್ತೆ ಮುಖ್ಯಮಂತ್ರಿ ಮಾಡುತ್ತಾರಾ? ಹೆಚ್ಚು ಅಂದ್ರೆ ಯಡಿಯೂರಪ್ಪ ಅವರ ಮಗನಿಗೆ ಟಿಕೆಟ್ ಕೊಡಿಸುತ್ತಾರೆ ಅಷ್ಟೇ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಸ್ವಾತಂತ್ರ ಹೋರಾಟಗಾರರಲ್ಲ, ಸಾವರ್ಕರ್ ಒಬ್ಬ ಮೂಲಭೂತವಾದಿ: ಯತೀಂದ್ರ ಸಿದ್ದರಾಮಯ್ಯ
ಶಿವರಾಜ್ ಪಾಟೀಲ್ ರಾಯಚೂರನ್ನ ತೆಲಂಗಾಣಕ್ಕೆ ಸೇರಿಸಬೇಕು ಎಂದಿರುವ ವಿಚಾರವಾಗಿ ಮಾತನಾಡಿದ ಅವರು, ಅವನು ಮೂರ್ಖ, ಮಾನಸಿಕ ಅಸ್ವಸ್ಥ, ಕರ್ನಾಟಕ ಏಕೀಕರಣದ ಬೆಲೆ ಗೊತ್ತಿಲ್ಲ ಎಂದ ಅವರು, ಮೊನ್ನೆಯ ಶಿವಮೊಗ್ಗದ ಗಲಾಟೆಗೆ ಈಶ್ವರಪ್ಪನೇ ನೇರ ಕಾರಣರಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿಯೇ ಮಾಡುತ್ತೇನೆ ಡೌಟೇ ಬೇಡ. ಆದರೆ ಸಿಎಂ ಮಾಡುವ ವಿಚಾರ ಹೈಕಮಾಂಡ್‍ಗೆ ಬಿಟ್ಟಿದ್ದು ಎಂದರು.
ಸರ್ಕಾರ ತಳ್ಳಿಕೊಂಡು ಹೋಗುತ್ತಿದ್ದೇವೆ ಎಂಬ ಮಾಧುಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ಅವರು, ಮಾಧುಸ್ವಾಮಿ ಸತ್ಯ ಹೇಳಿದ್ದಾರೆ. ರಾಜ್ಯದಲ್ಲಿ ಸರ್ಕಾರ ಇಲ್ಲವೇ ಇಲ್ಲ. ವೀಕ್ ಚೀಫ್ ಮಿನಿಸ್ಟರ್ ಇದಾರೆ ಸರ್ಕಾರ ಜೀವದಲ್ಲೇ ಇಲ್ಲ ಇನ್ನೆಲ್ಲಿ ನಡೆಯೋದು ಎಂದು ಟೀಕಿಸಿದರು. ಇದನ್ನೂ ಓದಿ: ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ