ಡಿಕೆಶಿ ಮನೆಗೆ ಸಿದ್ದರಾಮಯ್ಯ, ಪರಮೇಶ್ವರ್, ಮುನಿಯಪ್ಪ ಭೇಟಿ – ‘ಬಂಡೆ’ ಆಲಂಗಿಸಿ ಭಾವುಕರಾದ ಪರಂ

Public TV
2 Min Read
DK SIDDU PARAM copy

– ಟ್ರಬಲ್ ಶೂಟರ್ ಮನೆಯಲ್ಲಿ ಅಭಿಮಾನಿಗಳ ದಂಡು

ಬೆಂಗಳೂರು: ಅಕ್ರಮ ಹಣ ವರ್ಗಾವಣೆಯ ಆರೋಪದ ಮೇಲೆ ಇಡಿ ಅಧಿಕಾರಿಗಳ ಕೈಗೆ ಸಿಲುಕಿ ತಿಹಾರ್ ಜೈಲು ಸೇರಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಜಾಮೀನಿನ ಮೇಲೆ ಹೊರಬಂದು ಶನಿವಾರ ಬೆಂಗಳೂರು ಸೇರಿದ್ದಾರೆ. ಇದೀಗ ಡಿಕೆಶಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಮೇಶ್ವರ್, ಕೃಷ್ಣಬೈರೇಗೌಡ, ಕೆಎಚ್ ಮುನಿಯಪ್ಪ, ಆರ್ ವಿ ದೇವರಾಜ್, ಪುಟ್ಟರಂಗಶೆಟ್ಟಿ ಸೇರಿ ಹಲವರು ಭೇಟಿ ಮಾಡಿ ಕ್ಷೇಮ ವಿಚಾರಿಸಿದ್ದಾರೆ.

DK MEET

ನಿನ್ನೆ ಬೆಂಗಳೂರಿಗೆ ಬಂದಿದ್ದ ಡಿಕೆಶಿಗೆ ಅಭಿಮಾನಿಗಳು, ಕಾರ್ಯಕರ್ತರಿಂದ ಭರ್ಜರಿ ಸ್ವಾಗತ ಸಿಕ್ಕಿತ್ತು. ಆದರೆ ಸಿದ್ದರಾಮಯ್ಯ ಮಾತ್ರ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯರನ್ನು ತರಾಟೆಗೆ ತೆಗೆದುಕೊಂಡಿದ್ದು, ಹೈಕಮಾಂಡ್ ಸೂಚನೆಯಂತೆ ಇಂದು ಅವರು ಡಿಕೆಶಿಯನ್ನು ಅವರ ನಿವಾಸ ಸದಾಶಿವನಗರದಲ್ಲಿ ಭೇಟಿ ಮಾಡಿದ್ದು, ಡಿಕೆಶಿಯನ್ನು ಆಲಂಗಿಸಿಕೊಂಡು ನೈತಿಕ ಧೈರ್ಯ ತುಂಬಿದ್ದಾರೆ.

ಡಿಕೆಶಿಯನ್ನು ಭೇಟಿ ಮಾಡುತ್ತಿದ್ದಂತೆಯೇ ಪರಮೇಶ್ವರ್ ಭಾವುಕರಾದ ಪ್ರಸಂಗವೂ ನಡೆಯಿತು. ಡಿಕೆಶಿಯನ್ನು ನೋಡಿ ತಬ್ಬಿಕೊಂಡು ಭಾವುಕರಾದ ಪರಮೇಶ್ವರ್ ಬಳಿಕ ಅವರನ್ನು ಸಂತೈಸಿದರು.

DK PARAM 1

ಇತ್ತ ಡಿಕೆಶಿ ಕಂಬ್ಯಾಕ್ ಆದ ಬೆನ್ನಲ್ಲೇ ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವ ಕಾಂಗ್ರೆಸ್ ನಾಯಕರು ಡಿಕೆಶಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಡಿಕೆಶಿ ಆಗಮನದ ಹಿನ್ನೆಲೆಯಲ್ಲಿ ನಾಯಕರು ತಮ್ಮಲ್ಲಿರುವ ವೈಮನಸ್ಸು ಬಿಟ್ಟು ಭೇಟಿ ಮಾಡುತ್ತಿದ್ದಾರೆ. ಜೆಡಿಎಸ್ ಮುಖಂಡರು ಕೂಡ ಡಿಕೆಶಿಯನ್ನು ಮಾತನಾಡಿಸಲು ಬರುತ್ತಿದ್ದಾರೆ. ಜೆಡಿಎಸ್ ನ ಎಂಎಲ್‍ಸಿ ಶರವಣ, ಶಾಸಕರಾದ ಅನ್ನದಾನಿ, ಮಂಜುನಾಥ್ ಭೇಟಿ ಮಾಡಿದ್ದಾರೆ. ಈ ವೇಳೆ ಶರವಣ ಅವರು ಡಿಕೆಶಿಗೆ ಪೇಟಾ ತೊಡಿಸಿ, ಸಾಯಿ ಬಾಬಾ ಫೋಟೋ ನೀಡಿದ್ದಾರೆ.

SHARAVANA

ಸಿದ್ದು- ಮುನಿಯಪ್ಪ ಮುಖಾಮುಖಿ:
ಇತ್ತೀಚೆಗೆ ಹಾವು-ಮುಂಗುಸಿಯಂತಾಗಿರುವ ಸಿದ್ದರಾಮಯ್ಯ ಹಾಗೂ ಕೆಎಚ್ ಮುನಿಯಪ್ಪ ಡಿಕೆಶಿ ನಿವಾಸದಲ್ಲಿ ಮುಖಾಮುಖಿಯಾದರು. ಕಳೆದ ತಿಂಗಳು ನಡೆದ ಸಭೆಯಲ್ಲಿ ಉಭಯ ನಾಯಕರು ಪರಸ್ಪರ ನಿಂದಿಸಿಕೊಂಡಿದ್ದರು. ಆದರೆ ಇಂದು ಡಿಕೆಶಿ ಎದುರು ನಗುತ್ತಲೇ ಈ ಇಬ್ಬರು ನಾಯಕರು ಎದುರುಗೊಂಡರು.

miniyappa 1

ಒಟ್ಟಿನಲ್ಲಿ ಇಂದು ಕೂಡ ಕಾರ್ಯಕರ್ತರು ಭೇಟಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಡಿಕೆಶಿ ಮನೆ ಬಳಿ ಇಂದು ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಮನೆ ಬಳಿ ಒಂದು ಕೆಎಸ್‍ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *