ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಬದಲು ಎಂ.ಬಿ.ಪಾಟೀಲ್ ರ ಹೆಸರನ್ನ ರೇಸಿಗೆ ಬಿಟ್ಟು ಸಿದ್ದರಾಮಯ್ಯ ದಾಳ ಉರುಳಿಸಿದ್ದಾರೆ. ಡಿಕೆಶಿಯನ್ನ ಕಟ್ಟಿ ಹಾಕಬೇಕಾದರೆ ಎಂ.ಬಿ.ಪಾಟೀಲ್ ಸೂಕ್ತ ಅನ್ನೋದು ಸಿದ್ದರಾಮಯ್ಯ ಲೆಕ್ಕಾಚಾರ. ಆದ್ದರಿಂದ ದೆಹಲಿಯಲ್ಲಿರುವ ಸಿದ್ದರಾಮಯ್ಯ ಎಂಬಿಪಿ ಹೆಸರನ್ನ ರೇಸಿಗೆ ತಂದು ದಾಳ ಉರುಳಿಸಿ, ಅದಕ್ಕೆ ತಮ್ಮದೇ ಆದ ಲಾಜಿಕ್ ಒಂದನ್ನ ಎಐಸಿಸಿ ನಾಯಕರ ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದರೆ ಪಕ್ಷ ಡಿಕೆ ಹಿಡಿತದಲ್ಲಿರುತ್ತದೆ. ಅದೇ ತಮ್ಮ ಬೆಂಬಲಿಗ ಎಂ.ಬಿ.ಪಾಟೀಲ್ ಅಧ್ಯಕ್ಷರಾದರೆ ಪಕ್ಷದ ಹಿಡಿತ ಪರೋಕ್ಷವಾಗಿ ಸಿದ್ದರಾಮಯ್ಯ ಕೈಯಲ್ಲಿರುತ್ತದೆ. ಇನ್ನು ಒಕ್ಕಲಿಗ ಸಮುದಾಯದ ಡಿಕೆಶಿಗೆ ಪಟ್ಟ ತಪ್ಪಿಸಿದರೆ ಅಷ್ಟೆ ಪ್ರಭಾವಿ ಸಮುದಾಯವಾದ ಲಿಂಗಾಯತ ಸಮುದಾಯಕ್ಕೆ ಮಣೆ ಹಾಕಿ ಎನ್ನುವ ಮೂಲಕ ಎಂಬಿ ಪಾಟೀಲ್ ಹೆಸರನ್ನ ಮುನ್ನಲೆಗೆ ತರಬಹುದು. ಒಕ್ಕಲಿಗ ಸಮುದಾಯ ಡಿಕೆಶಿಗಿಂತ ದೇವೇಗೌಡರ ಜೊತೆಗೆ ಹೆಚ್ಚು ನಿಲ್ಲುತ್ತದೆ. ಆದ್ದರಿಂದ ಡಿಕೆಶಿಗೆ ಪಟ್ಟ ಕಟ್ಟಿದರೆ ಅಷ್ಟು ದೊಡ್ಡ ಮಟ್ಟದ ಪ್ರಯೋಜನ ಆಗಲ್ಲ ಅನ್ನುವುದು ಸಿದ್ದರಾಮಯ್ಯ ಲಾಜಿಕ್ ಎಂದು ತಿಳಿದು ಬಂದಿದೆ.
Advertisement
Advertisement
ಇತ್ತ ಸಿಎಂ ಯಡಿಯೂರಪ್ಪ ಅವಧಿ ಮುಗಿದ ನಂತರ ಲಿಂಗಾಯತರು ಬಿಜೆಪಿಯಿಂದ ದೂರಾಗಬಹುದು. ಆಗ ಲಿಂಗಾಯತ ಸಮುದಾಯವನ್ನ ಕಾಂಗ್ರೆಸ್ ನತ್ತ ಸೆಳೆಯಲು ಎಂ.ಬಿ.ಪಾಟೀಲ್ ಸೂಕ್ತ ಅನ್ನೋದು ಸಿದ್ದರಾಮಯ್ಯ ವಾದ. ಇನ್ನು ಹಣಕಾಸಿನ ವಿಷಯದಲ್ಲು ಡಿಕೆಶಿಯಷ್ಟೆ ದೊಡ್ಡ ಮಟ್ಟದಲ್ಲಿ ಸಂಪನ್ಮೂಲ ಕ್ರೋಢಿಕರಣ ಮತ್ತು ಖರ್ಚು ಮಾಡುವ ಸಾಮಥ್ರ್ಯ ಎಂ.ಬಿ.ಪಾಟೀಲ್ ಅವರಿಗಿದೆ. ಡಿಕೆಶಿ ವಿರುದ್ಧ ಐಟಿ, ಇಡಿ ಹಾಗೂ ಸಿಬಿಐ ಕಣ್ಣಿಟ್ಟಿದೆ. ಆದ್ರೆ ಎಂ.ಬಿ.ಪಾಟೀಲ್ ಕ್ಲೀನ್ ಇಮೇಜ್ ಹೊಂದಿದ್ದಾರೆ ಎಂಬ ಸ್ಪಷ್ಟನೆಯನ್ನು ಸಿದ್ದರಾಮಯ್ಯ ಹೈಕಮಾಂಡ್ ಮುಂದಿಡಲು ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
Advertisement
ಹೀಗೆ ಕೆಪಿಸಿಸಿ ಪಟ್ಟಕ್ಕೆ ಡಿಕೆಶಿಗಿಂತ ಎಂ.ಬಿ.ಪಾಟೀಲ್ ಯಾಕೆ ಸೂಕ್ತ ಅನ್ನೋ ವಾದವನ್ನ ಸಿದ್ದರಾಮಯ್ಯ ಹೈ ಕಮಾಂಡ್ ಮುಂದಿಡಲು ತೀರ್ಮಾನಿಸಿದ್ದಾರೆ. ಎಐಸಿಸಿ ನಾಯಕರುಗಳ ಗಮನಕ್ಕೆ ಇದನ್ನ ತಂದಿದ್ದು ಎಐಸಿಸಿ ಅಧ್ಯಕ್ಷರ ಮುಂದೆಯು ಇದೆ ವಾದ ಮಂಡಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.