Connect with us

Districts

ಮತ್ತೆ ನಾನ್ ವೆಜ್ ತಿಂದು ದೇವಸ್ಥಾನಕ್ಕೆ ತೆರಳಿದ್ರು ಸಿದ್ದರಾಮಯ್ಯ!

Published

on

ಗದಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಂಸಾಹಾರ ತಿಂದು ದೇವರ ಗುಡಿಗೆ ಹೋಗುವ ಮೂಲಕ ಮತ್ತೊಮ್ಮೆ ಎಡವಟ್ಟು ಮಾಡಿಕೊಳ್ಳುವ ಜೊತೆಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಇದನ್ನೂ ಓದಿ:  ಧರ್ಮಸ್ಥಳಕ್ಕೆ ಹೋಗುವಾಗ ಮೀನು ಮಾತ್ರವಲ್ಲ, ಕೋಳಿಯನ್ನೂ ತಿಂದಿದ್ದೆ: ಸಿಎಂ ಸಿದ್ದರಾಮಯ್ಯ

ಈ ಹಿಂದೆ ಕೂಡ ಮಾಜಿ ಸಿಎಂ ಮಂಗಳೂರನಲ್ಲಿ ನಾನ್ ವೆಜ್ ಊಟಮಾಡಿ ದೇವಸ್ಥಾನಕ್ಕೆ ಹೋಗಿ ಸಾಕಷ್ಟು ಪೇಚಿಗೆ ಸಿಲುಕಿದ್ದರು. ಈಗ ಅದೇ ರೀತಿ ಚಿಕನ್, ಫಿಶ್, ಎಗ್ ಊಟಮಾಡಿ ದೇವಸ್ಥಾನಕ್ಕೆ ಹೋಗುವ ಮೂಲಕ ಮತ್ತೊಮ್ಮೆ ಚರ್ಚೆಗೆ ಕಾರಣರಾಗಿದ್ದಾರೆ. ಮುಂಡರಗಿ ತಾಲೂಕಿನ ಸಿಂಗಟಾಲೂರ ಗ್ರಾಮದಲ್ಲಿ ಶ್ರೀಬೀರಲಿಂಗೇಶ್ವರ ದೇವಸ್ಥಾನ ಲೋಕಾರ್ಪಣೆ, ಮೂರ್ತಿ ಮತ್ತು ಶಿಬಾರಗಟ್ಟಿ ಪ್ರತಿಷ್ಠಾಪನೆ, ಕಳಸಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮಕ್ಕೆ ಆಗಮಿಸಿದ ಸಿದ್ದರಾಮಯ್ಯನವರು, ಸೋಮವಾರ ಸಂಜೆ ಕಾರ್ಯಕ್ರಮಕ್ಕೂ ಮುನ್ನ ಸ್ಥಳೀಯ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಮುಂಡವಾಡ ಮನೆಗೆ ಊಟಕ್ಕೆ ಹೋಗಿದ್ದರು. ಅಲ್ಲಿ ಚಿಕನ್, ಫಿಶ್, ಎಗ್ ಭರ್ಜರಿಯಾಗಿ ಬಾಡೂಟ ಸವಿದು ನಂತರ ಶ್ರೀಬೀರಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದರು. ದೇವಸ್ಥಾನ ಲೋಕಾರ್ಪಣೆ ಮಾಡಿ, ಬೀರೇಶ್ವರ ಹಾಗೂ ರೇವಣಸಿದ್ದೇಶ್ವರನಿಗೆ ಪೂಜೆ ಸಲ್ಲಿಸಿದರು. ಅಲ್ಲಿಂದ ಪಕ್ಕದ ಶಿಬಾರಗಟ್ಟಿ ಪ್ರತಿಷ್ಠಾಪನೆ, ಕಳಸಾರೋಹಣ ನೆರವೇರಿಸಿದರು. ನಂತರ ಸಮಾರಂಭದ ವೇದಿಕೆಗೆ ಆಗಮಿಸಿದರು.

ನಾನ್ ವೆಜ್ ಊಟಮಾಡಿ ದೇವರ ಗುಡಿಗೆ ಹೋಗಿ ಪೂಜೆ ಸಲ್ಲಿಸಿರುವ ವಿಚಾರ ಸಿದ್ದರಾಮಯ್ಯನವರು ಹೋದನಂತರ ತಿಳಿದಿದೆ. ಇದರಿಂದ ಅನೇಕರ ಆಕ್ರೋಶಕ್ಕೆ ಸಿದ್ದರಾಮಯ್ಯನವರು ಗುರಿಯಾಗಿದ್ದಾರೆ. ಈ ಊಟದಲ್ಲಿ ಮಾಜಿ ಸಚಿವ ಪಿ.ಟಿ ಪರಮೇಶ್ವರ್ ನಾಯ್ಕ್, ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಶಾಸಕ ಜಿ.ಎಸ್ ಪಾಟೀಲ್, ರಾಮಕೃಷ್ಣ ದೊಡ್ಡಮನಿ ಮತ್ತು ಸಲೀಂ ಅಹ್ಮದ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ಭಾಗಿಯಾಗಿದ್ದರು.

 

Click to comment

Leave a Reply

Your email address will not be published. Required fields are marked *